
ಹೊಸದಿಲ್ಲಿ, ಏಪ್ರಿಲ್ 25: ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಆತಿಥೇಯ ಭಾರತ ತಂಡ ಎಫ್‌ಐಎಚ್ ಸೀರೀಸ್ ಫೈನಲ್ಸ್ ಟೂರ್ನಿಯ ಮೊದಲ ಪಂದ್ಯದಲ್ಲಿ ದುರ್ಬಲ ರಷ್ಯಾ ತಂಡದ ಸವಾಲು ಎದುರಿಸಲಿದೆ.
2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತಾ ಸುತ್ತಿನ ಟೂರ್ನಿಯಾಗಿರುವ ಎಫ್‌ಐಎಚ್ ಸೀರೀಸ್ ಫೈನಲ್ಸ್ ಟೂರ್ನಿಯು ಜೂನ್ 6ರಿಂದ 15ರವರೆಗೆ ಭುವನೇಶ್ವರದ ಕಳಿಂಗಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಟೂರ್ನಿಯ ಮೊದಲ ದಿನದ ಅಂತಿಮ ಪಂದ್ಯದಲ್ಲಿ ವಿಶ್ವದ 5ನೇ ಶ್ರೇಯಾಂಕ ಹೊಂದಿರುವ ಭಾರತ 22ನೇ ಶ್ರೇಯಾಂಕದ ರಷ್ಯಾ ವಿರುದ್ಧ ಪೈಪೋಟಿ ನಡೆಸಲಿದೆ. ಭಾರತ ತಂಡ "ಎ" ಗುಂಪಿನಲ್ಲಿ ಸ್ಥಾನ ಪಡೆದಿದ್ದು, ರಷ್ಯಾ ಹೊರತಾಗಿ ಪೋಲೆಂಡ್ (21ನೇ ಶ್ರೇಯಾಂಕ) ಮತ್ತು ಉಜ್ಬೇಕಿಸ್ತಾನ (43ನೇ ಶ್ರೇಯಾಂಕ) ತಂಡಗಳೊಂದಿಗೆ ಸೆಣಸಲಿದೆ.
ಇನ್ನು "ಬಿ'' ಗುಂಪಿನಲ್ಲಿ ದಕ್ಷಿಣ ಆಫ್ರಿಕಾ (16ನೇ ಶ್ರೇಯಾಂಕ), ಏಷ್ಯಾ ಗೇಮ್ಸ್ ಚಾಂಪಿಯನ್ಸ್ ಜಪಾನ್ (18ನೇ ಶ್ರೇಯಾಂಕ), ಅಮೆರಿಕ (25ನೇ ಶ್ರೇಯಾಂಕ) ಮತ್ತು ಮೆಕ್ಸಿಕೊ (39ನೇ ಶ್ರೇಯಾಂಕ) ತಂಡಗಳು ಸ್ಪರ್ಧಿಸಲಿವೆ.
ರಷ್ಯಾ ವಿರುದ್ಧದ ಪಂದ್ಯದ ಬಳಿಕ ಭಾರತ ಜೂನ್ 7ರಂದು ಪೋಲೆಂಡ್ ವಿರುದ್ಧ ಮತ್ತು ಜೂನ್ 1ರಂದು ಉಜ್ಬೇಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. ಟೂರ್ನಿಯ ಫೈನಲ್ ಪಂದ್ಯ ಜೂನ್ 15ರಂದು ಕಳಿಂಗಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದಹಾಗೆ ಈ ಟೂರ್ನಿಯು ಭಾರತ ಹಾಕಿ ತಂಡದ ನೂತನ ಕೋಚ್ ಗ್ರಹಾಮ್ ರೀಡ್ ಅವರಿಗೆ ಮೊದಲ ಸವಾಲಾಗಿದೆ.
ಇನ್ನು ಭಾರತ ಮಹಿಳಾ ಹಾಕಿ ತಂಡ ಕೂಡ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ಪ್ರಯತ್ನದಲ್ಲಿದ್ದು, ಜಪಾನ್‌ನ ಹಿರೋಶಿಮಾದಲ್ಲಿ ಜೂನ್ 15ರಿಂದ 23ರವರೆಗೆ ನಡೆಯಲಿರುವ ಎಫ್‌ಐಎಚ್ ಸೀರೀಸ್ ಫೈನಲ್ಸ್‌ನಲ್ಲಿ ಕಣಕ್ಕಿಳಿಯಲಿದೆ. ಭಾರತ ಮಹಿಳಾ ಪಡೆ "ಎ'' ಗುಂಪಿನಲ್ಲಿದ್ದು ಪೋಲೆಂಡ್, ಫಿಜಿ ಮತ್ತು ಉರುಗ್ವೇ ವಿರುದ್ಧ ಪಂದ್ಯಗಳನ್ನಾಡಲಿದೆ. "ಬಿ" ಗುಂಪಿನಲ್ಲಿ ಜಪಾನ್, ಚಿಲಿ, ರಷ್ಯಾ ಮತ್ತು ಮೆಕ್ಸಿಕಒ ತಂಡಗಳಿವೆ. ಭಾರತ ತಂಡ ಉರುಗ್ವೆ ವಿರುದ್ಧ ಜೂನ್ 15ರಂದು ತನ್ನ ಅಭಿಯಾನ ಆರಂಭಿಸಲಿದೆ.