
ಚೆನ್ನೈ, ಆಗಸ್ಟ್ 17: ಕ್ರಿಕೆಟರ್ ದಿನೇಶ್ ಕಾರ್ತಿಕ್ ಕಬಡ್ಡಿ ಸ್ಟೇಡಿಯಂನಲ್ಲಿ ಕಾಣಸಿಕ್ಕರು. ಶನಿವಾರ (ಆಗಸ್ಟ್ 17) ಚೆನ್ನೈಯ ಜವಾಹರ ಲಾಲ್ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 46ನೇ ಪಂದ್ಯದಲ್ಲಿ ಡಿಕೆ ಮತ್ತು ಬಾಲಿವುಡ್ ನಟ ವ್ರಜೇಶ್ ಹಿರ್ಜೀ ಕಾಮೆಂಟರಿ ನಡೆಸಿಕೊಟ್ಟರು.
ಶನಿವಾರ ನಡೆದ ಪ್ರೊ ಕಬಡ್ಡಿ ಲೀಗ್ ವೇಳೆ ಹಾಜರಿದ್ದ ಕಾರ್ತಿಕ್, ಬೆಂಗಾಲ್ ವಾರಿಯರ್ಸ್ ಮತ್ತು ದಬಾಂಗ್ ಡೆಲ್ಲಿ ಕಾಳಗದ ವೇಳೆ ವ್ರಜೇಶ್ ಜೊತೆ ಕೊಂಚ ಕಾಲ ಕಾಮೆಂಟರಿ ನಡೆಸಿದರು. ದಿನೇಶ್ ಕಾರ್ತಿಕ್ ಹುಟ್ಟೂರು ತಮಿಳುನಾಡಿನ ತಿರುಚಂದೂರ್. ಹೀಗಾಗಿ ತವರಿನಲ್ಲಿ ನಡೆದ ಪಂದ್ಯದ ವೇಳೆ ಕಾರ್ತಿಕ್ ಕಾಣಿಸಿಕೊಂಡರು.
ಬೆಂಗಾಲ್ ವಾರಿಯರ್ಸ್ vs ದಬಾಂಗ್ ಡೆಲ್ಲಿ ಪಂದ್ಯ 30-30ರಿಂದ ಸಮಬಲಗೊಂಡಿತು. ಬೆಂಗಾಲ್ ಪರ ಕೆ ಪ್ರಪಂಜನ್ 10, ಡೆಲ್ಲಿ ಪರ ನವೀನ್ ಕುಮಾರ್ 11 ಅಂಕ ಸೇರಿಸಿ ರೋಚಕ ಹೋರಾಟಕ್ಕೆ ಪ್ರಮುಖ ಕಾರಣರಾದರು. ಸದ್ಯ ಪಾಯಿಂಟ್ ಟೇಬಲ್‌ನಲ್ಲಿ ಜೈಪುರ್, ಡೆಲ್ಲಿ, ಬೆಂಗಾಲ್, ಬೆಂಗಳೂರು ಮತ್ತು ಮುಂಬೈ ಮೊದಲ 5 ಸ್ಥಾನಗಳಲ್ಲಿವೆ.