ಪ್ರೋ ಕಬಡ್ಡಿ ಲೀಗ್ 8: ಡಿಸೆಂಬರ್ 27ರ ಎಲ್ಲಾ ಪಂದ್ಯಗಳ ಮಾಹಿತಿ ಮತ್ತು ಸಂಭಾವ್ಯ ತಂಡಗಳ ವಿವರ

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಡಿಸೆಂಬರ್ 26ರ ಭಾನುವಾರದವರೆಗೂ ಒಟ್ಟು 14 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ದಬಾಂಗ್ ಡೆಲ್ಲಿ ಅಗ್ರಸ್ಥಾನದಲ್ಲಿದ್ದರೆ, ತಲಾ ಎರೆಡೆರಡು ಪಂದ್ಯಗಳನ್ನು ಗೆದ್ದಿರುವ ಬೆಂಗಾಲ್ ವಾರಿಯರ್ಸ್ ದ್ವಿತೀಯ ಸ್ಥಾನ ಹಾಗೂ ಬೆಂಗಳೂರು ಬುಲ್ಸ್ ತೃತೀಯ ಸ್ಥಾನವನ್ನು ಪಡೆದುಕೊಂಡಿವೆ.
ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 14 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಡಿಸೆಂಬರ್ 27 ) ಒಟ್ಟು 2 ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಯು ಮುಂಬಾ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹೀಗೆ ಇಂದು ನಡೆಯಲಿರುವ ಈ 2 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..
ಪಂದ್ಯ 1: ತಮಿಳ್ ತಲೈವಾಸ್ vs ಯು ಮುಂಬಾ
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ತಮ್ಮ ಚೊಚ್ಚಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಯು ಮುಂಬಾ ಬೆಂಗಳೂರು ಬುಲ್ಸ್ ತಂಡವನ್ನು ಎದುರಿಸಿದ್ದವು. ಈ ಪೈಕಿ ಯು ಮುಂಬಾ ಬೆಂಗಳೂರು ಬುಲ್ಸ್ ತಂಡಕ್ಕೆ ಸೋಲುಣಿಸಿದರೆ, ತಮಿಳ್ ತಲೈವಾಸ್ ಬೆಂಗಳೂರು ಬುಲ್ಸ್ ವಿರುದ್ಧ ಹೀನಾಯ ಸೋಲು ಕಂಡಿತು. ಇನ್ನು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಯು ಮುಂಬಾ 2 ಪಂದ್ಯಗಳನ್ನಾಡಿದ್ದು ಒಂದು ಪಂದ್ಯದಲ್ಲಿ ಜಯ ಗಳಿಸಿದ್ದರೆ ಮತ್ತೊಂದು ಪಂದ್ಯದಲ್ಲಿ ಸೋಲುಂಡಿದೆ. ಹಾಗೂ 2 ಪಂದ್ಯಗಳನ್ನಾಡಿರುವ ತಮಿಳ್ ತಲೈವಾಸ್ ಒಂದು ಪಂದ್ಯದಲ್ಲಿ ಸೋತಿದ್ದು ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಈ ಮೂಲಕ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಆರಂಭದ ಪಂದ್ಯಗಳಲ್ಲಿ ಯು ಮುಂಬಾ ಸಾಮಾನ್ಯ ಯಶಸ್ಸು ಪಡೆದುಕೊಂಡಿದ್ದರೆ ತಮಿಳ್ ತಲೈವಾಸ್ ಇನ್ನೂ ಸಹ ಗೆಲುವಿನ ಖಾತೆ ತೆರೆಯಲಾಗದೇ ಹೀನಾಯ ಸ್ಥಿತಿಯಲ್ಲಿದೆ. ಇನ್ನು ಈ ಎರಡೂ ತಂಡಗಳು ಇಂದು ಪರಸ್ಪರ ಮುಖಾಮುಖಿಯಾಗುತ್ತಿದ್ದು ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ ಹಾಗೂ ಈ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 15ನೇ ಪಂದ್ಯವಾಗಿದೆ.
ಇನ್ನು ಯು ಮುಂಬಾ ಮತ್ತು ತಮಿಳ್ ತಲೈವಾಸ್ ನಡುವಿನ ಮುಖಾಮುಖಿಯ ಅಂಕಿಅಂಶಗಳಿಗೆ ಬಂದರೆ ತಮಿಳ್ ತಲೈವಾಸ್ ವಿರುದ್ಧ ಯು ಮುಂಬಾ ಸ್ಪಷ್ಟ ಮೇಲುಗೈ ಸಾಧಿಸಿದೆ. ಇತ್ತಂಡಗಳು ಇದುವರೆಗೂ ಒಟ್ಟು 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಯು ಮುಂಬಾ 4 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ತಮಿಳ್ ತಲೈವಾಸ್ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ.
ತಮಿಳ್ ತಲೈವಾಸ್ ಸಂಭಾವ್ಯ ತಂಡ: ಮಂಜೀತ್ ದಹಿಯಾ (ರೈಡರ್) ಕೆ ಪ್ರಪಂಜನ್ (ರೈಡರ್) ಭವಾನಿ ರಜಪೂತ್ (ರೈಡರ್) ಮೋಹಿತ್ ಜಖರ್ (ಎಡ ಕವರ್) ಸುರ್ಜೀತ್ (ಬಲ ಕವರ್) ಸಾಹಿಲ್ ಗುಲಿಯಾ (ಎಡ ಮೂಲೆ) ಸಾಗರ್ ರಥಿ (ಬಲ ಮೂಲೆ)
ಯು ಮುಂಬಾ ಸಂಭಾವ್ಯ ತಂಡ: ಅಭಿಷೇಕ್ ಸಿಂಗ್ (ರೈಡರ್) ವಿ ಅಜಿತ್ ಕುಮಾರ್ (ರೈಡರ್) ಶಿವಂ (ಆಲ್ ರೌಂಡರ್) ಹರೇಂದ್ರ ಕುಮಾರ್ (ಎಡ ಕವರ್) ಮೊಹ್ಸೆನ್ ಮಗ್ಸೌದ್ಲೌ (ರೈಟ್ ಕವರ್) ಫಾಜೆಲ್ ಅತ್ರಾಚಲಿ (ಎಡ ಮೂಲೆ) ರಿಂಕು (ಬಲ ಮೂಲೆ)
ಪಂದ್ಯ 2: ಯುಪಿ ಯೋಧಾ vs ಜೈಪುರ್ ಪಿಂಕ್ ಪ್ಯಾಂಥರ್ಸ್
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಯುಪಿ ಯೋಧಾ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಅಂಕಪಟ್ಟಿಯಲ್ಲಿ ಸಮಬಲವನ್ನು ಸಾಧಿಸಿವೆ. ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಯುಪಿ ಯೋಧಾ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ತಲಾ ಎರಡೆರಡು ಪಂದ್ಯಗಳಲ್ಲಿ ಕಣಕ್ಕಿಳಿದು, ಎರಡೂ ತಂಡಗಳು ಸಹ ತಲಾ ಒಂದೊಂದು ಪಂದ್ಯದಲ್ಲಿ ಸೋತಿದ್ದರೆ ಮತ್ತೊಂದು ಪಂದ್ಯದಲ್ಲಿ ಜಯ ಗಳಿಸಿವೆ. ಇನ್ನು ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಯುಪಿ ಯೋಧಾ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ಇದುವರೆಗೂ ಒಟ್ಟು 5 ಪಂದ್ಯಗಳಲ್ಲಿ ಸೆಣಸಾಟವನ್ನು ನಡೆಸಿದ್ದು ಯುಪಿ ಯೋಧಾ 3 ಪಂದ್ಯಗಳಲ್ಲಿ ಗೆದ್ದಿದ್ದರೆ, ಜೈಪುರ್ ಪಿಂಕ್ ಪ್ಯಾಂಥರ್ಸ್ 2 ಪಂದ್ಯಗಳಲ್ಲಿ ಗೆದ್ದಿದೆ.
ಯುಪಿ ಯೋಧಾ ಸಂಭಾವ್ಯ ತಂಡ:
ಪರ್ದೀಪ್ ನರ್ವಾಲ್ (ರೈಡರ್) ಶ್ರೀಕಾಂತ್ ಜಾಧವ್ (ರೈಡರ್) ಸುರೇಂದರ್ ಗಿಲ್ (ರೈಡರ್) ಗುರ್ದೀಪ್ (ಎಡ ಕವರ್) ಅಶು ಸಿಂಗ್ (ಬಲ ಕವರ್) ಸುಮಿತ್ ಸಾಂಗ್ವಾನ್ (ಎಡ ಮೂಲೆ) ನಿತೇಶ್ ಕುಮಾರ್ (ಬಲ ಮೂಲೆ)
ಜೈಪುರ್ ಪಿಂಕ್ ಪ್ಯಾಂಥರ್ಸ್ ಸಂಭಾವ್ಯ ತಂಡ:
ಅರ್ಜುನ್ ದೇಶ್ವಾಲ್ (ರೈಡರ್) ದೀಪಕ್ ಹೂಡಾ (ಆಲ್-ರೌಂಡರ್) ನಿತಿನ್ ರಾವಲ್ (ಆಲ್ ರೌಂಡರ್) ವಿಶಾಲ್ ಲಾಥರ್ (ಎಡ ಕವರ್) ಅಮಿತ್ ಖಾರ್ಬ್ (ರೈಟ್ ಕವರ್ )
ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications