
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಜನವರಿ 10ರ ಸೋಮವಾರದವರೆಗೂ ಒಟ್ಟು 46 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ದಬಾಂಗ್ ಡೆಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಾಟ್ನಾ ಪೈರೇಟ್ಸ್ ದ್ವಿತೀಯ ಸ್ಥಾನ ಮತ್ತು ಬೆಂಗಳೂರು ಬುಲ್ಸ್ ತೃತೀಯ ಸ್ಥಾನದಲ್ಲಿವೆ.
ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 46 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಜನವರಿ 11 ) ಒಟ್ಟು 2 ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಯು ಮುಂಬಾ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಗುಜರಾತ್ ಜಿಯಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 2 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..
ಪಂದ್ಯ 1: ಪಾಟ್ನಾ ಪೈರೇಟ್ಸ್ vs ಯು ಮುಂಬಾ
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡ ಉತ್ತಮ ಆರಂಭವನ್ನು ಪಡೆದುಕೊಳ್ಳುವುದರ ಮೂಲಕ ಅಂಕ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದುಕೊಂಡಿದ್ದರೆ, ಅತ್ತ ಸಾಮಾನ್ಯ ಪ್ರದರ್ಶನವನ್ನು ನೀಡುವುದರ ಮೂಲಕ ಯು ಮುಂಬಾ ತಂಡ ಸಾಮಾನ್ಯ ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿಯ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 7 ಪಂದ್ಯಗಳನ್ನಾಡಿರುವ ಪಾಟ್ನಾ ಪೈರೇಟ್ಸ್ 5 ಪಂದ್ಯಗಳಲ್ಲಿ ಗೆದ್ದು 1 ಪಂದ್ಯದಲ್ಲಿ ಸೋತಿದ್ದು ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 29 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ 7 ಪಂದ್ಯಗಳನ್ನಾಡಿರುವ ಯು ಮುಂಬಾ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 1 ಪಂದ್ಯದಲ್ಲಿ ಸೋತು, 3 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 25 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಇನ್ನು ಇತ್ತಂಡಗಳ ನಡುವೆ ನಡೆಯಲಿರುವ ಇಂದಿನ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 47ನೇ ಪಂದ್ಯವಾಗಿದ್ದು ಸಂಜೆ 7.30ಕ್ಕೆ ಆರಂಭವಾಗಲಿದೆ. ಇನ್ನು ಈ ಬಾರಿಯ ಆವೃತ್ತಿಯ ಅಂಕಪಟ್ಟಿಯಲ್ಲಿ ಯು ಮುಂಬಾ ತಂಡಕ್ಕಿಂತ ಪಾಟ್ನಾ ಪೈರೇಟ್ಸ್ ತಂಡ ಉನ್ನತ ಸ್ಥಾನದಲ್ಲಿರಬಹುದು. ಆದರೆ ಇತ್ತಂಡಗಳ ನಡುವಿನ ಪ್ರೊ ಕಬಡ್ಡಿ ಲೀಗ್ ಇತಿಹಾಸದ ಮುಖಾಮುಖಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡದ ಮೇಲೆ ಯು ಮುಂಬಾ ತಂಡ ಸಂಪೂರ್ಣ ಹಿಡಿತವನ್ನು ಸಾಧಿಸಿ ಮೇಲುಗೈ ಹೊಂದಿದೆ. ಹೌದು, ಇತ್ತಂಡಗಳ ನಡುವೆ ಇದುವರೆಗೂ ನಡೆದಿರುವ ಒಟ್ಟು 14 ಪಂದ್ಯಗಳಲ್ಲಿ ಯು ಮುಂಬಾ 9 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಪಾಟ್ನಾ ಪೈರೇಟ್ಸ್ ಕೇವಲ 4 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಪಾಟ್ನಾ ಪೈರೇಟ್ಸ್ ಸಂಭಾವ್ಯ ಆಡುವ ಬಳಗ: ಮೋನು ಗೋಯತ್ (ರೈಡರ್) ಪ್ರಶಾಂತ್ ಕುಮಾರ್ ರೈ (ರೈಡರ್) ಸಚಿನ್ ತನ್ವರ್ (ರೈಡರ್) ಸಜಿನ್ ಚಂದ್ರಶೇಖರ್ (ಎಡ ಮುಖಪುಟ) ನೀರಜ್ ಕುಮಾರ್ (ಬಲ ಮುಖಪುಟ) ಮೊಹಮ್ಮದ್ರೇಜಾ ಶಾದ್ಲೂಯಿ (ಎಡ ಮೂಲೆ) ಸುನಿಲ್ ನರ್ವಾಲ್ (ಬಲ ಮೂಲೆ)
ಯು ಮುಂಬಾ ಸಂಭಾವ್ಯ ಆಡುವ ಬಳಗ: ಅಭಿಷೇಕ್ ಸಿಂಗ್ (ರೈಡರ್) ವಿ ಅಜಿತ್ ಕುಮಾರ್ (ರೈಡರ್) ಮೊಹ್ಸೇನ್ ಮಗ್ಸೌದ್ಲೌ (ಆಲ್ ರೌಂಡರ್) ಹರೇಂದ್ರ ಕುಮಾರ್ (ಎಡ ಕವರ್) ಆಶಿಶ್ ಸಾಂಗ್ವಾನ್ (ರೈಟ್ ಕವರ್) ಫಾಜೆಲ್ ಅತ್ರಾಚಲಿ (ಎಡ ಮೂಲೆ) ರಿಂಕು ಶರ್ಮಾ (ಬಲ ಮೂಲೆ)
ಪಂದ್ಯ 2: ತೆಲುಗು ಟೈಟಾನ್ಸ್ vs ಗುಜರಾತ್ ಜಿಯಂಟ್ಸ್
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿ ಅಂಕಪಟ್ಟಿಯ ಕೊನೆಯ 2 ಸ್ಥಾನಗಳನ್ನು ಪಡೆದುಕೊಂಡಿರುವ ತಂಡಗಳಾದ ಗುಜರಾತ್ ಜಯಂಟ್ಸ್ ಮತ್ತು ತೆಲುಗು ಟೈಟಾನ್ಸ್ ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಈ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 48ನೇ ಪಂದ್ಯವಾಗಿದ್ದು ರಾತ್ರಿ 8.30ಕ್ಕೆ ಆರಂಭವಾಗಲಿದೆ. ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇದುವರೆಗೂ ಒಟ್ಟು 7 ಪಂದ್ಯಗಳನ್ನಾಡಿರುವ ಗುಜರಾತ್ ಜಯಂಟ್ಸ್ 1 ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, 4 ಪಂದ್ಯಗಳಲ್ಲಿ ಸೋತಿದೆ ಹಾಗೂ ಉಳಿದೆರಡು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡು 15 ಅಂಕಗಳನ್ನು ಪಡೆದುಕೊಳ್ಳುವುದರೊಂದಿಗೆ ಅಂಕಪಟ್ಟಿಯಲ್ಲಿ 11ನೇ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 7 ಪಂದ್ಯಗಳನ್ನಾಡಿರುವ ತೆಲುಗು ಟೈಟಾನ್ಸ್ ಯಾವುದೇ ಪಂದ್ಯದಲ್ಲಿಯೂ ಕೂಡ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗದೇ, 5 ಪಂದ್ಯಗಳಲ್ಲಿ ಸೋತು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಇತ್ತಂಡಗಳ ನಡುವೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 4 ಪಂದ್ಯಗಳು ನಡೆದಿದ್ದು, ಈ ಪಂದ್ಯಗಳ ಪೈಕಿ ಗುಜರಾತ್ ಜಯಂಟ್ಸ್ 3 ಪಂದ್ಯಗಳಲ್ಲಿ ಗೆದ್ದಿದ್ದರೆ, ತೆಲುಗು ಟೈಟಾನ್ಸ್ ಕೇವಲ 1 ಪಂದ್ಯದಲ್ಲಿ ಗೆದ್ದಿದೆ.
ಗುಜರಾತ್ ಜಯಂಟ್ಸ್ ಸಂಭಾವ್ಯ ಆಡುವ ಬಳಗ: ರಾಕೇಶ್ ನರ್ವಾಲ್ (ರೈಡರ್) ರಾಕೇಶ್ (ರೈಡರ್) ಅಜಯ್ ಕುಮಾರ್ (ರೈಡರ್) ಪರ್ವೇಶ್ ಭೈನ್‌ವಾಲ್ (ಎಡ ಕವರ್) ಸುನಿಲ್ ಮಲಿಕ್ (ರೈಟ್ ಕವರ್) ಗಿರೀಶ್ ಎರ್ನಾಕ್ (ಎಡ ಮೂಲೆ) ರವೀಂದರ್ ಪಹಲ್ (ನಾಯಕ) (ಬಲ ಮೂಲೆ)
ತೆಲುಗು ಟೈಟಾನ್ಸ್ ಸಂಭಾವ್ಯ ಆಡುವ ಬಳಗ: ರೋಹಿತ್ ಕುಮಾರ್ (ನಾಯಕ) (ರೈಡರ್) ಸಿದ್ಧಾರ್ಥ್ ದೇಸಾಯಿ (ರೈಡರ್) ಅಂಕಿತ್ ಬೇನಿವಾಲ್ (ರೈಡರ್) ಸಿ ಅರುಣ್ (ಎಡ ಕವರ್) ಸುರಿಂದರ್ ಸಿಂಗ್ (ಬಲ ಕವರ್) ಸಂದೀಪ್ ಕಾಂಡೋಲ (ಎಡ ಮೂಲೆ) ರುತುರಾಜ್ ಕೊರವಿ (ಬಲ ಮೂಲೆ)
ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.