
ಶನಿವಾರ ನಡೆದ ಮೂರು ಪಂದ್ಯಗಳು ಕೂಡ ರೋಚಕವಾಗಿ ಟೈ ಕಂಡ ನಂತರ ಭಾನುವಾರದ ಪಂದ್ಯಗಳಿಗೆ ಕ್ರಿಕೆಟ್ ಪ್ರೇಮಿಗಳು ಸಜ್ಜಾಗಿದ್ದಾರೆ. ಆದರೆ ಭಾನುವಾರ ಎರಡು ಪಂದ್ಯಗಳು ಮಾತ್ರವೇ ಇರಲಿದೆ. ಈ ಪಂದ್ಯಗಳಲ್ಲಿಯೂ ಆಯಾಯ ತಂಡಗಳ ಆಟಗಾರರಿಂದ ರೋಚಕ ಸೆಣೆಸಾಟ ನಡೆಯುವ ನಿರೀಕ್ಷೆಯಿದೆ. ಅದರಲ್ಲೂ ಬೆಂಗಳುತು ಬುಲ್ಸ್ ತಂಡ ಇಂದು ಕಣಕ್ಕಿಳಿಯುತ್ತಿದ್ದು ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇಂದು ನಡೆಯಲಿರುವ ಪಂದ್ಯದಲ್ಲಿ ಮೊದಲಿಗೆ ಗುಜರಾತ್ ಜೈಂಟ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಅದಾದ ಬಳಿಕ ಬೆಂಗಳೂರು ಬುಲ್ಸ್ ತಂಡಕ್ಕೆ ಈ ಬಾರಿಯ ಟೂರ್ನಿಯಲ್ಲಿ ಪರದಾಟ ನಡೆಸುತ್ತಿರುವ ಪುಣೇರಿ ಪಲ್ತಾನ್ ತಂಡ ಎದುರಾಗಲಿದೆ.
ಗುಜರಾತ್ ಜೈಂಟ್ಸ್ vs ಹರ್ಯಾಣ ಸ್ಟೀಲರ್ಸ್ ಪ್ರಿವ್ಯೂ: ಗುಜರಾತ್ ಜೈಂಟ್ಸ್ ತಂಡದ ಆಟಗಾರರು ಉತ್ತಮ ಆರಂಬವನ್ನು ಪಡೆದುಕೊಂಡಿದ್ದರು ಕೂಡ ಸದ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕಿಂತ ಕೆಳಕ್ಕಿಳಿದಿದ್ದಾರೆ. ಆದರೆ ಉಳಿದ ಎಲ್ಲಾ ತಮಡಗಳಿಗೆ ಹೋಲಿಸಿದರೆ ಗುಜರಾತ್ ಒಂದ್ಯ ಪಂದ್ಯ ಕಡಿಮೆ ಆಡಿದ್ದಾರೆ. ಕೋಚ್ ಮನ್‌ಪ್ರೀತ್ ಸಿಂಗ್ ಅವರ ಆಟಗಾರರು ಸೋಲಿಸುವುದು ಎದುರಾಳಿಗಳಿಗೆ ಸುಲಭವಲ್ಲ. ಆದರೆ ತೀವ್ರ ಪೈಪೋಟಿಯ ಪಂದ್ಯಗಳಲ್ಲಿ ಗುಜರಾತ್ ಜೈಂಟ್ಸ್ ತಂಡ ಗೆಲುವು ಸಾಧಿಸಲು ವಿಫಲವಾಗಿದೆ. ಇದರ ಪರಿಣಾಮವಾಗಿಯೇ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಟೈನಲ್ಲಿ ಅಂತ್ಯಕಂಡಿದೆ. ಈ ರೀತಿಯ ಪೈಪೋಟಿಯ ಪಂದ್ಯಗಳಲ್ಲಿ ಮೇಲುಗೈ ಸಾಧಿಸಲು ಯಶಸ್ವಿಯಾದರೆ ಈ ತಂಡ ಶೀಘ್ರವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಇನ್ನು ಗುಜರಾತ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯುವ ಹರ್ಯಾಣ ಸ್ಟೀಲರ್ಸ್ ತಂಡ ಈವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವು್ದು ಕೇವಲ ಒಂದು ಪಂದ್ಯವನ್ನು ಮಾತ್ರ. ಮೊದಲ ಪಂದ್ಯದಿಂದಲೇ ಕಳಪೆ ಆರಂಭವನ್ನು ಪಡೆದ ಹರ್ಯಾಣ ಸ್ಟೀಲರ್ಸ್ ತಂಡದ ಕೆಟ್ಟ ಪ್ರದರ್ಶನ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ 42-28 ಅಂತರದಿಮದ ಸೋಲುವ ಮೂಲಕ ಮುಂದುವರಿದಿದೆ. ಈ ಕಳಪೆ ಪ್ರದರ್ಶನದ ಕಾರಣದಿಂದ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ ಹರ್ಯಾಣ ತಂಡ. ಅದರಲ್ಲೂ ರೈಡಿಂಗ್ ವಿಭಾಗದ ಪ್ರದರ್ಶನ ಕಳವಳಕಾರಿಯಾಗಿದೆ. ಯುವ ಆಟಗಾರ ಮೀಟೂ ಮಹೇಂದರ್ ಮಾತ್ರ ಭರವಸೆಯ ಪ್ರದರ್ಶನ ನೀಡಿದ್ದಾರೆ. ಇನ್ನು ತಂಡದ ರಕ್ಷಣಾ ವಿಭಾಗದಲ್ಲಿಯೂ ಅನುಭವಿ ಸುರೇಂದರ್ ನಾಡಾ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ಈವರೆಗೆ ವಿಫಲವಾಗಿದ್ದಾರೆ. ಆದರೆ ಹರ್ಯಾಣ ಸ್ಟೀಲರ್ಸ್ ತಂಡ ಸಾಕಷ್ಟು ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ತಂಡ ಎಂಬುದರಲ್ಲಿ ಅನುಮಾನವಿಲ್ಲ. ತಂಡ ಗೆಲುವಿನ ಲಯಕ್ಕೆ ಮರಳಿದರೆ ಎದುರಾಳಿಗೆ ಕಂಠಕವಾಗುವುದರಲ್ಲಿ ಅನುಮಾನವಿಲ್ಲ.
ಹರ್ಯಾಣ ಸ್ಟೀಲರ್ಸ್ vs ಗುಜರಾತ್ ಜೈಂಟ್ಸ್ ಹೆಡ್ ಟು ಹೆಡ್: ಹರ್ಯಾಣ ಸ್ಟೀಲರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಈವರೆಗೆ ಮುಖಾಮುಖಿತಾಗಿರುವ 8 ಪಂದ್ಯಗಳ ಪೈಕಿ ಹರಿಯಾಣ ಸ್ಟೀಲರ್ಸ್ ತಂಡ ಐದು ಬಾರಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿದೆ. ಕೇವಲ ಎರಡು ಬಾರಿ ಮಾತ್ರವೇ ಗುಜರಾತ್ ಜೈಂಟ್ಸ್ ತಂಡಕ್ಕೆ ಶರಣಾಗಿದೆ. ಉಭಯ ತಂಡಗಳ ನಡುವಿನ ಒಂದು ಪಂದ್ಯ ಟೈನಲ್ಲಿಅಂತ್ಯವಾಗಿದೆ.
ಬೆಂಗಳೂರು ಬುಲ್ಸ್ vs ಪುಣೆರಿ ಪಲ್ತಾನ್ಸ್: ಪುಣೇರಿ ಪಲ್ತಾನ್ಸ್ ತಂಡ ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಐದು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಭಾರೀ ಹಿನ್ನೆಡೆ ಕಂಡಿದೆ. ಕೋಚ್ ಅನುಪ್ ಕುಮಾರ್ ತಂಡಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಲು ಹೆಣಗಾಡುತ್ತಿದೆ. ತಂಡದ ರಕ್ಷಣಾ ವಿಭಾಗದ ವಿರುದ್ಧ ಎದುರಾಳಿ ತಂಡಗಳು ಸುಲಭವಾಗಿ ಅಂಕಗಳನ್ನು ಗಳಿಸುತ್ತಿದೆ. ಇತ್ತ ರೈಡಿಂಗ್ ವಿಭಾಗದಲ್ಲಿ ಕೂಡ ಪಲ್ತಾನ್‌ಗಳು ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಅನುಭವಿ ಹಾಗೂ ಯುವ ಆಟಗಾರರನ್ನು ಹೊಂದಿರುವ ಪುಣೆರಿ ಪಲ್ತಾನ್ ತಂಡ ಶೀಘ್ರವಾಗಿ ಲಯಕ್ಕೆ ಮರಳಿದರೆ ಮಾತ್ರವೇ ಎದುರಾಳಿಗಳ ಪೈಪೋಟಿಯನ್ನು ಎದುರಿಸಲು ಸಾಧ್ಯವಾಗಲಿದೆ.
ಸದ್ಯ ಅಂಕಪಟ್ಟಿಯ ಅಗ್ರ ಸ್ಥಾನಿಯಾಗಿರುವ ದಬಾಂಗ್ ಡೆಲ್ಲಿ ಕೆ.ಸಿಗಿಂತ ಕೇವಲ ಮೂರು ಅಂಕ ಕಡಿಮೆ ಪಡೆದುಕೊಂಡಿರುವ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ರಾತ್ರಿ ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಹಿನ್ನೆಡೆಯನ್ನು ಅನುಭವಿಸಿದರು ಕೂಡ ಬಳಿಕ ತಿರುಗಿಬಿದ್ದು ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಬಲಿಷ್ಠ ಬೆಂಗಳೂರು ಬುಲ್ಸ್ ತಮಡವನ್ನು ಮಣಿಸುವುದು ಎಷ್ಟು ಕಷ್ಟ ಎಂಬುದು ಎದುರಾಳಿಗಳಿಗೆ ಅರಿವಾಗುತ್ತದೆ. ಭಾನುವಾರದ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಬೆಂಗಳುರು ಬುಲ್ಸ್ ತಂಡ ಎದುರು ನೋಡುತ್ತಿದೆ.
ಬೆಂಗಳೂರು ಬುಲ್ಸ್ vs ಪುಣೆರಿ ಪಲ್ತಾನ್ಸ್ ಹೆಡ್ ಟು ಹೆಡ್: ಪಿಕೆಎಲ್‌ನಲ್ಲಿ ಪುಣೇರಿ ಪಲ್ತಾನ್ ಮತ್ತು ಬೆಂಗಳೂರು ಬುಲ್ಸ್ ಈವರೆಗೆ ಒಟ್ಟು 12 ಬಾರಿ ಸೆಣಸಿದೆ. ಇದರಲ್ಲಿ ಪಲ್ತಾನ್ ತಂಎ 7 ಬಾರಿ ಗೆದ್ದು ಮುನ್ನಡೆಯನ್ನು ಸಾಧಿಸಿದ್ದರೆ 5 ಬಾರಿ ಬೆಂಗಳೂರು ತಂಡ ಗೆದ್ದುಕೊಂಡಿದೆ.