
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಜನವರಿ 3ರ ಸೋಮವಾರದವರೆಗೂ ಒಟ್ಟು 31 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ಬೆಂಗಳೂರು ಬುಲ್ಸ್ ಅಗ್ರಸ್ಥಾನದಲ್ಲಿದ್ದರೆ, ದಬಾಂಗ್ ಡೆಲ್ಲಿ ದ್ವಿತೀಯ ಸ್ಥಾನ ಮತ್ತು ಪಾಟ್ನಾ ಪೈರೇಟ್ಸ್ ತೃತೀಯ ಸ್ಥಾನದಲ್ಲಿವೆ.
ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 31 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಜನವರಿ 3 ) ಒಟ್ಟು 2 ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಮತ್ತು ಯು ಮುಂಬಾ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ತಮಿಳ್ ತಲೈವಾಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 2 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..
ಪಂದ್ಯ 1: ಹರಿಯಾಣ ಸ್ಟೀಲರ್ಸ್ vs ಯು ಮುಂಬಾ
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಯು ಮುಂಬಾ ಉತ್ತಮ ಆರಂಭವನ್ನು ಪಡೆದುಕೊಂಡಿದ್ದರೆ ಹರಿಯಾಣ ಸ್ಟೀಲರ್ಸ್ ಹೇಳಿಕೊಳ್ಳುವಂತಹ ಉತ್ತಮ ಆರಂಭವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಈ ಬಾರಿಯ ಆವೃತ್ತಿಯಲ್ಲಿ ಇದುವರೆಗೂ ಒಟ್ಟು 5 ಪಂದ್ಯಗಳನ್ನಾಡಿರುವ ಯು ಮುಂಬಾ 2 ಪಂದ್ಯಗಳಲ್ಲಿ ಜಯ ಸಾಧಿಸಿ, 2 ಪಂದ್ಯಗಳಲ್ಲಿ ಸೋಲು ಕಂಡಿದೆ ಹಾಗೂ ಉಳಿದೊಂದು ಪಂದ್ಯವನ್ನು ಡ್ರಾ ಮಾಡಿಕೊಂಡು 17 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ ಹರಿಯಾಣ ಸ್ಟೀಲರ್ಸ್ ಕೂಡ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 5 ಪಂದ್ಯಗಳನ್ನಾಡಿದ್ದು ಎರಡರಲ್ಲಿ ಗೆದ್ದು 3 ಪಂದ್ಯಗಳಲ್ಲಿ ಸೋಲುವುದರ ಮೂಲಕ 12 ಅಂಕಗಳನ್ನು ಪಡೆದುಕೊಂಡು ಅಂಕ ಪಟ್ಟಿಯಲ್ಲಿ ಹತ್ತನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಇಂದು ಇತ್ತಂಡಗಳ ನಡುವೆ ನಡೆಯಲಿರುವ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 32ನೇ ಪಂದ್ಯವಾಗಿದ್ದು ಸಂಜೆ 7.30ಕ್ಕೆ ಆರಂಭವಾಗಲಿದೆ. ಇನ್ನು ಯು ಮುಂಬಾ ಈ ಬಾರಿಯ ಆವೃತ್ತಿಯ ಅಂಕಪಟ್ಟಿಯಲ್ಲಿ ಮಾತ್ರವಲ್ಲದೆ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ನಡೆದಿರುವ ಪಂದ್ಯಗಳಲ್ಲಿಯೂ ಕೂಡ ಮೇಲುಗೈಯನ್ನು ಸಾಧಿಸಿದೆ. ಇತ್ತಂಡಗಳ ನಡುವೆ ಇದುವರೆಗೂ ಒಟ್ಟು 9 ಪಂದ್ಯಗಳು ನಡೆದಿದ್ದು ಯು ಮುಂಬಾ 6 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ಹರಿಯಾಣ ಸ್ಟೀಲರ್ಸ್ ಕೇವಲ 3 ಪಂದ್ಯಗಳಲ್ಲಿ ಗೆದ್ದಿದೆ.
ಯು ಮುಂಬಾ ಸಂಭಾವ್ಯ ಆಡುವ ಬಳಗ: ಅಭಿಷೇಕ್ ಸಿಂಗ್ (ರೈಡರ್) ವಿ ಅಜಿತ್ ಕುಮಾರ್ (ರೈಡರ್) ಮೊಹ್ಸೆನ್ ಮಗ್ಸೌದ್ಲೌ (ಆಲ್ ರೌಂಡರ್) ಹರೇಂದ್ರ ಕುಮಾರ್ (ಎಡ ಕವರ್) ಸುನಿಲ್ ಸಿದ್ಧಗವ್ಲಿ (ರೈಟ್ ಕವರ್) ಫಾಜೆಲ್ ಅತ್ರಾಚಲಿ (ಎಡ ಮೂಲೆ) ರಿಂಕು (ಬಲ ಮೂಲೆ)
ಹರಿಯಾಣ ಸ್ಟೀಲರ್ಸ್ ಸಂಭಾವ್ಯ ಆಡುವ ಬಳಗ: ವಿಕಾಶ್ ಕಾಂಡೋಲಾ (ರೈಡರ್) ಮೀಟು ಶರ್ಮಾ (ರೈಡರ್) ರೋಹಿತ್ ಗುಲಿಯಾ (ಆಲ್-ರೌಂಡರ್) ಜೈದೀಪ್ ದಹಿಯಾ (ಎಡ ಕವರ್) ಮೋಹಿತ್ ನಂದಲ್ (ರೈಟ್ ಕವರ್) ಸುರೇಂದರ್ ನಾಡಾ (ಎಡ ಮೂಲೆ) ರವಿಕುಮಾರ್ (ಬಲ ಮೂಲೆ)
ಪಂದ್ಯ 2: ಯುಪಿ ಯೋಧಾ vs ತಮಿಳ್ ತಲೈವಾಸ್
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಯುಪಿ ಯೋಧಾ ಮತ್ತು ತಮಿಳ್ ತಲೈವಾಸ್ ಎರಡೂ ತಂಡಗಳು ಸಹ ಇಲ್ಲಿಯವರೆಗೂ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನವನ್ನು ಸಂಪಾದಿಸುವಲ್ಲಿ ವಿಫಲವಾಗಿವೆ. ಟೂರ್ನಿಯಲ್ಲಿ ಇದುವರೆಗೂ ಒಟ್ಟು 5 ಪಂದ್ಯಗಳನ್ನಾಡಿರುವ ತಮಿಳ್ ತಲೈವಾಸ್ 1 ಪಂದ್ಯದಲ್ಲಿ ಗೆದ್ದಿದ್ದು ಮತ್ತೊಂದು ಪಂದ್ಯದಲ್ಲಿ ಸೋತು ಉಳಿದ 3 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 14 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅತ್ತ ಟೂರ್ನಿಯಲ್ಲಿ ಇದುವರೆಗೂ ಒಟ್ಟು 5 ಪಂದ್ಯಗಳನ್ನಾಡಿರುವ ಯು ಪಿ ಯೋಧ 1 ಪಂದ್ಯದಲ್ಲಿ ಜಯ ಗಳಿಸಿದ್ದು 2 ಪಂದ್ಯಗಳಲ್ಲಿ ಸೋಲುಂಡಿದೆ ಹಾಗೂ ಇನ್ನುಳಿದ 2 ಪಂದ್ಯಗಳನ್ನು ಡ್ರಾ ಮಾಡಿಕೊಂಡು 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿದೆ. ಇನ್ನು ಇತ್ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 33ನೇ ಪಂದ್ಯವಾಗಿದ್ದು ರಾತ್ರಿ 8.30ಕ್ಕೆ ನಡೆಯಲಿದೆ. ಇನ್ನು ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಯುಪಿ ಯೋಧಾ ಮತ್ತು ತಮಿಳ್ ತಲೈವಾಸ್ ನಡುವೆ ನಡೆದಿರುವ ಪಂದ್ಯಗಳಲ್ಲಿ ರೋಚಕ ಹಣಾಹಣಿ ನಡೆದಿದ್ದು ಇತ್ತಂಡಗಳು ಸಹ ಬಹುತೇಕ ಸಮಬಲದ ಹೋರಾಟವನ್ನು ನಡೆಸಿವೆ. ಇತ್ತಂಡಗಳ ನಡುವೆ ಒಟ್ಟು 8 ಪಂದ್ಯಗಳು ನಡೆದಿದ್ದರೆ ಯುಪಿ ಯೋಧಾ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ತಮಿಳ್ ತಲೈವಾಸ್ 2 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದ 3 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
ಯುಪಿ ಯೋಧಾ ಸಂಭಾವ್ಯ ಆಡುವ ಬಳಗ: ಪರ್ದೀಪ್ ನರ್ವಾಲ್ (ರೈಡರ್) ಸುರೇಂದರ್ ಗಿಲ್ (ರೈಡರ್) ರೋಹಿತ್ ತೋಮರ್ (ರೈಡರ್) ಶುಭಮ್ ಕುಮಾರ್ ಬಲಿಯಾನ್ (ಎಡ ಕವರ್) ಅಶು ಸಿಂಗ್ (ಬಲ ಕವರ್) ಸುಮಿತ್ ಸಾಂಗ್ವಾನ್ (ಎಡ ಮೂಲೆ) ನಿತೇಶ್ ಕುಮಾರ್ (ಬಲ ಮೂಲೆ)
ತಮಿಳ್ ತಲೈವಾಸ್ ಸಂಭಾವ್ಯ ಆಡುವ ಬಳಗ: ಮಂಜೀತ್ ದಹಿಯಾ (ರೈಡರ್) ಅತುಲ್ ಎಂಎಸ್ (ರೈಡರ್) ಅಜಿಂಕ್ಯ ಪವಾರ್ (ರೈಡರ್) ಮೋಹಿತ್ ಜಖರ್ (ಎಡ ಕವರ್) ಸುರ್ಜೀತ್ (ಬಲ ಕವರ್) ಸಾಹಿಲ್ ಗುಲಿಯಾ (ಎಡ ಮೂಲೆ) ಸಾಗರ್ ರಥಿ (ಬಲ ಮೂಲೆ)
ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.