
ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಯು ಮುಂಬಾ ಅಬ್ಬರಿಸಿದ್ರೆ, ಗುಜರಾತ್ ಜಾಯಿಂಟ್ಸ್ ವಿರುದ್ಧ , ಮೂರು ಬಾರಿಯ ಚಾಂಪಿಯನ್ ಪಾಟ್ನ ಪೈರೇಟ್ಸ್ ಕೇವಲ ಒಂದು ಪಾಯಿಂಟ್ಸ್ ಅಂತರದ ರೋಚಕ ಗೆಲುವು ಸಾಧಿಸಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ 24 ರೈಡಿಂಗ್ ಪಾಯಿಂಟ್ಸ್ ಮೂಲಕ ಅಬ್ಬರದ ಆಟವಾಡಿದ್ರೆ, ತೆಲುಗು ಟೈಟನ್ಸ್ 23 ಪಾಯಿಂಟ್ಸ್‌ಗಳನ್ನ ರೈಡಿಂಗ್ ಮೂಲಕ ಕಲೆಹಾಕಿದೆ. ಯು ಮುಂಬಾ 17 ಟ್ಯಾಕಲ್ ಪಾಯಿಂಟ್ಸ್ ಕಲೆಹಾಕಿದ್ರೆ, ಲುಗು ಟೈಟನ್ಸ್ 12 ಪಾಯಿಂಟ್ಸ್ ತಲುಪಿದೆ.
ಯು ಮುಂಬಾ ಪರ ಅಭಿಷೇಕ್ ಸಿಂಗ್ ಒಟ್ಟು 13 ಪಾಯಿಂಟ್ಸ್‌ನೊಂದಿಗೆ ಯಶಸ್ವಿ ರೈಡರ್ ಎನಿಸಿಕೊಂಡ್ರೆ, ವಿ. ಅಜಿತ್ ಕುಮಾರ್ 8 ಪಾಯಿಂಟ್ಸ್‌ನೊಂದಿಗೆ ಉತ್ತಮ ಸಾಥ್ ನೀಡಿದ್ರು. ರಿಂಕು ಏಳು ಟ್ಯಾಕಲ್ ಪಾಯಿಂಟ್‌ನೊಂದಿಗೆ ಮಿಂಚಿದ್ರೆ, ಅಫ್ಘಾನಿಸ್ತಾನದ ಫಜೇಲ್ ಅತ್ರಾಚಲಿ ಹಾಗೂ ಭಾರತದ ಹರೇಂದ್ರ ಕುಮಾರ್ ತಲಾ 4 ಟ್ಯಾಕಲ್ ಪಾಯಿಂಟ್ಸ್ ಗಿಟ್ಟಿಸಿದ್ರು.
ಇನ್ನು ತೆಲುಗು ಟೈಟನ್ಸ್ ಪರ ಗಲ್ಲಾ ರಾಜು 8, ರಾಕೇಶ್ ಗೌಡ 7, ಅಂಕಿತ್ ಬೆನಿವಾಲ್ 6 ಪಾಯಿಂಟ್ಸ್ ಪಡೆದರು. ಆದ್ರೂ ಕ್ಷೇತ್ರ ರಕ್ಷಣೆಯಲ್ಲಿ ಎಡವಿದ ತೆಲುಗು ಟೈಟನ್ಸ್ 38-48 ಪಾಯಿಂಟ್ಸ್‌ನೊಂದಿಗೆ ಯು ಮುಂಬಾಗೆ ಶರಣಾಗಿದೆ.
ಎರಡನೇ ಪಂದ್ಯದಲ್ಲಿ ಗುಜರಾತ್ ಜಾಯಿಂಟ್ಸ್ ಮತ್ತು ಚಾಂಪಿಯನ್ ತಂಡ ಪಾಟ್ನ ಪೈರೇಟ್ಸ್ ಜಿದ್ದಾಜಿದ್ದಿನ ಕದನಕ್ಕೆ ಸಾಕ್ಷಿಯಾದವು. ಪಂದ್ಯದ ಕೊನೆಯವರೆಗೂ ವಿಜಯ ಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂದು ತಿಳಿಯದಷ್ಟು ರೋಚಕ ಪಂದ್ಯವಾಗಿತ್ತು. ಅಂತಿಮವಾಗಿ ಅತಿ ಹೆಚ್ಚು ಬಾರಿ ಚಾಂಪಿಯನ್ ಆಗಿರುವ ಪಾಟ್ನ ಪೈರೇಟ್ಸ್ 27-26 ಪಾಯಿಂಟ್ಸ್‌ಗಳ ಕೂದಲೆಳೆಯ ಅಂತರದಲ್ಲಿ ಪಂದ್ಯ ಜಯಿಸಿತು.
ಪಾಟ್ನ ಪರ ಪ್ರಶಾಂತ್ ಕುಮಾರ್ ರೈ 8 ಪಾಯಿಂಟ್ಸ್, ಸಚಿನ್ 6, ಸಜಿನ್ ಚಂದ್ರಶೇಖರ್ 5 ಪಾಯಿಂಟ್ಸ್ ಕಲೆಹಾಕಿದರು. ಗುಜರಾತ್ ಪರ ಮಹೇಂದ್ರ ಗಣೇಶ್ ರಜಪೂತ್ ಹಾಗೂ ರಾಕೇಶ್ ನರ್ವಾಲ್ ಯಶಸ್ವಿ ರೈಡರ್ ಆಗಿ ಕಾಣಿಸಿಕೊಂಡ್ರು.
ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿ ದಬಾಂಗ್ ಡೆಲ್ಲಿ ಸ್ಥಾನ ಪಡೆದಿದ್ದು, ಪಾಟ್ನ ಪೈರೇಟ್ಸ್ ಕೂಡ ಏರಿಕೆ ದಾಖಲಿಸಿದೆ.