
ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಪುಣೇರಿ ಪಲ್ಟನ್ ಅಬ್ಬರಿಸಿದ್ರೆ, ಬೆಂಗಳೂರು ಬುಲ್ಸ್ ವಿರುದ್ಧ ಯುಪಿ ಯೋಧಾ ಭರ್ಜರಿ ಗೆಲುವು ದಾಖಲಿಸಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ 20 ರೈಡಿಂಗ್ ಪಾಯಿಂಟ್ಸ್ ಮೂಲಕ ಅಬ್ಬರದ ಆಟವಾಡಿದ್ರೆ, ಬೆಂಗಾಲ್ ವಾರಿಯರ್ಸ್ 25 ಪಾಯಿಂಟ್ಸ್‌ಗಳನ್ನ ರೈಡಿಂಗ್ ಮೂಲಕ ಕಲೆಹಾಕಿದೆ. ಆದ್ರೆ ಪುಣೇರಿ ಪಲ್ಟನ್ 13 ಟ್ಯಾಕಲ್ ಪಾಯಿಂಟ್ಸ್ ಕಲೆಹಾಕಿದ್ರೆ, ಬೆಂಗಾಲ್ ವಾರಿಯರ್ಸ್ ಕ್ಷೇತ್ರ ರಕ್ಷಣೆಯಲ್ಲಿ ಎಡವಿ ಕೇವಲ 2 ಪಾಯಿಂಟ್ಸ್ ಪಡೆದು ಸೋಲಿಗೆ ಶರಣಾಯಿತು.
ಪುಣೇರಿ ಪಲ್ಟನ್ ಪರ ಅಸ್ಲಾಂ ಇನಾಮ್‌ದಾಆರ್ ಒಟ್ಟು 17 ಪಾಯಿಂಟ್ಸ್‌ನೊಂದಿಗೆ ಯಶಸ್ವಿ ರೈಡರ್ ಎನಿಸಿಕೊಂಡ್ರೆ, ಅಭಿನೇಷ್ 5 ಪಾಯಿಂಟ್ಸ್‌ನೊಂದಿಗೆ ಉತ್ತಮ ಸಾಥ್ ನೀಡಿದ್ರು.
ಇನ್ನು ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ 13, ಆಕಾಶ್ 8 ಪಾಯಿಂಟ್ಸ್ ಪಡೆದರು. ಆದ್ರೂ ಕ್ಷೇತ್ರ ರಕ್ಷಣೆಯಲ್ಲಿ ಬೆಂಗಾಲ್ 27-39 ಪಾಯಿಂಟ್ಸ್‌ನೊಂದಿಗೆ ಪುಣೇರಿ ಪಲ್ಟನ್‌ಗೆ ಶರಣಾಗಿದೆ.
ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯುಪಿ ಯೋಧಾ ಮುಖಾಮುಖಿಯಾಗಿದ್ದು, ಒನ್ ಸೈಡ್ ಮ್ಯಾಚ್‌ನಂತೆ ಕಂಡುಬಂದಿತು. ಇದು ಪ್ರದೀಪ್ ನರ್ವಲ್ ವಿರುದ್ಧ ಪವನ್ ಸೆಹ್ರಾವತ್ ಫೈಟ್‌ನಂತೆ ಕಾಣಿಸಿತ್ತೇ ವಿನಃ ಯಾರು ನಿರೀಕ್ಷೆಗೆ ತಕ್ಕಂತೆ ಆಟವಾಡಲಿಲ್ಲ. ಅಂತಿಮವಾಗಿ ಯುಪಿ ಯೋಧಾ ಬುಲ್ಸ್ ವಿರುದ್ಧ 42-27 ಪಾಯಿಂಟ್ಸ್‌ಗಳಿಂದ ಗೆದ್ದಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 6ನೇ ಸ್ಥಾನಕ್ಕೆ ಜಿಗಿದಿದೆ.
ಯುಪಿ ಯೋಧಾ ಪರ ಶ್ರೀಕಾಂತ್ ಜಾಧವ್ 15 ಪಾಯಿಂಟ್ಸ್, ಸುರೇಂದ್ರ ಗಿಲ್ ಮತ್ತು ಮೊಹಮ್ಮದ್ ತಾಗಿ ತಲಾ 5 ಪಾಯಿಂಟ್ಸ್ ಕಲೆಹಾಕಿದ್ರು. ಸುಮಿತ್ ಅತಿ ಹೆಚ್ಚು ಅಂದ್ರೆ ನಾಲ್ಕು ಟ್ಯಾಕಲ್ ಪಾಯಿಂಟ್ಸ್ ಗಿಟ್ಟಿಸಿದ್ರು.
ಅತ್ತ ಬೆಂಗಳೂರು ಬುಲ್ಸ್ ಪರ ಭರತ್ 11 ಪಾಯಿಂಟ್ಸ್, ಪವನ್ ಕುಮಾರ್ 5 ಪಾಯಿಂಟ್ಸ್ ಕಲೆಹಾಕಿದ್ದೇ ಹೆಚ್ಚು. ಬುಲ್ಸ್ ಈ ಪಂದ್ಯ ಸೋತಿದ್ದರೂ ತನ್ನ ಮೂರನೇ ಸ್ಥಾನವನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿ ದಬಾಂಗ್ ಡೆಲ್ಲಿ ಸ್ಥಾನ ಪಡೆದಿದ್ದು, ಪಾಟ್ನ ಪೈರೇಟ್ಸ್ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ಬುಲ್ಸ್ 28 ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನ ಅಲಂಕರಿಸಿದೆ.