For Quick Alerts
ALLOW NOTIFICATIONS  
For Daily Alerts

PKL 2022: ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಸೋಲಿಸಿ ಹಳೇ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು ಬುಲ್ಸ್?

PKL 2022: Semi Final 2, Dabang Delhi vs Bengaluru Bulls - Date, Time, Live Streaming Info in kannada

2019ರಲ್ಲಿ ನಡೆದಿದ್ದ ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ನಂತರ ಕೊರೋನಾವೈರಸ್ ಆಗಮನವಾದ ಕಾರಣದಿಂದಾಗಿ ಪ್ರೋ ಕಬಡ್ಡಿ ಲೀಗ್ ಟೂರ್ನಿ ಆಯೋಜನೆಯಾಗಿರಲಿಲ್ಲ. ಹೀಗೆ ಕೊರೋನಾವೈರಸ್ ಹೊಡೆತದಿಂದ ಆಯೋಜನೆ ಆಗದೇ ಇದ್ದ ಪ್ರೋ ಕಬಡ್ಡಿ ಲೀಗ್ ಎಂಟನೇ ಆವೃತ್ತಿ ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಕಟ್ಟುನಿಟ್ಟಿನ ಬಯೋ ಬಬಲ್ ವ್ಯವಸ್ಥೆಯೊಂದಿಗೆ ಆರಂಭವಾಯಿತು. ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ತಂಡದ ವಿರುದ್ಧ ಸೆಣಸಾಟವನ್ನು ನಡೆಸಿದ ಪವನ್ ಶೆರಾವತ್ ನೇತೃತ್ವದ ಬೆಂಗಳೂರು ಬುಲ್ಸ್ ಇದೀಗ ಸೆಮಿಫೈನಲ್ ತಲುಪಿದೆ. ಹೌದು, ಕಳೆದ ಡಿಸೆಂಬರ್ 22ರಂದು ಆರಂಭವಾಗಿದ್ದ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಲೀಗ್ ಹಂತದ ಒಟ್ಟು 132 ಪಂದ್ಯಗಳು ಯಾವುದೇ ಅಂತರವಿಲ್ಲದೆ ಸತತವಾಗಿ 60 ದಿನಗಳ ಕಾಲ ನಡೆದಿದ್ದು, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಪಾಟ್ನಾ ಪೈರೇಟ್ಸ್ ಹಾಗೂ ದ್ವಿತೀಯ ಸ್ಥಾನ ಪಡೆದ ದಬಾಂಗ್ ಡೆಲ್ಲಿ ತಂಡಗಳು ನೇರವಾಗಿ ಸೆಮಿಫೈನಲ್ ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿದ್ದವು.

ಇನ್ನುಳಿದಂತೆ ಅಂಕಪಟ್ಟಿಯಲ್ಲಿ 3, 4, 5 ಮತ್ತು 6ನೇ ಸ್ಥಾನಗಳನ್ನು ಕ್ರಮವಾಗಿ ಪಡೆದುಕೊಂಡಿದ್ದ ಯುಪಿ ಯೋಧಾ, ಗುಜರಾತ್ ಜೈಂಟ್ಸ್, ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳು ಎಲಿಮಿನೇಟರ್ ಸುತ್ತಿನಲ್ಲಿ ಹಣಾಹಣಿಯನ್ನು ನಡೆಸಿದವು. ಈ ಎಲಿಮಿನೇಟರ್ ಪಂದ್ಯಗಳ ಹಣಾಹಣಿಯಲ್ಲಿ ಪುಣೇರಿ ಪಲ್ಟನ್ ತಂಡಕ್ಕೆ ಸೋಲುಣಿಸಿದ ಯುಪಿ ಯೋಧಾ ಹಾಗೂ ಗುಜರಾತ್ ಜೈಂಟ್ಸ್ ತಂಡಕ್ಕೆ ಮಣ್ಣು ಮುಕ್ಕಿಸಿದ ಬೆಂಗಳೂರು ಬುಲ್ಸ್ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿವೆ. ಕಳೆದ ಬಾರಿಯ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಸೋಲನ್ನು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದ ಯುಪಿ ಯೋಧಾ ಈ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದು ಪಾಟ್ನಾ ಪೈರೇಟ್ಸ್ ವಿರುದ್ಧ ಸೆಣಸಾಟವನ್ನು ನಡೆಸಿದರೆ, ಕಳೆದ ಬಾರಿಯ ಹಾಗೆ ಈ ಬಾರಿಯೂ ಕೂಡ ಸೆಮಿಫೈನಲ್ ತಲುಪಿರುವ ಬೆಂಗಳೂರು ಬುಲ್ಸ್ ಕಳೆದ ಆವೃತ್ತಿಯಂತೆ ಈ ಆವೃತ್ತಿಯಲ್ಲಿಯೂ ಸೆಮಿಫೈನಲ್ ಹಂತದಲ್ಲಿ ದಬಾಂಗ್ ಡೆಲ್ಲಿ ವಿರುದ್ಧವೇ ಸೆಣಸಾಟವನ್ನು ನಡೆಸಲಿದೆ.

ಬೆಂಗಳೂರು ಬುಲ್ಸ್ ತಂಡಕ್ಕೆ ಇದು ಸೇಡಿನ ಸಮಯ

2019ರ ಪ್ರೋ ಕಬಡ್ಡಿ ಲೀಗ್ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ಯೋಧಾ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಬೆಂಗಳೂರು ಬುಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಸೆಣಸಾಟವನ್ನು ನಡೆಸಿತ್ತು. ಈ ಮಹತ್ವದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 44 ಅಂಕ ಗಳಿಸಿದರೆ, ಬೆಂಗಳೂರು ಬುಲ್ಸ್ 38 ಅಂಕಗಳನ್ನು ಪಡೆದುಕೊಂಡು ಸೋಲನ್ನು ಅನುಭವಿಸಿತ್ತು. ಹಾಗೂ ಈ ಪಂದ್ಯದಲ್ಲಿ ಗೆದ್ದ ದಬಾಂಗ್ ಡೆಲ್ಲಿ ಫೈನಲ್ ಪ್ರವೇಶಿಸಿ ಆ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋಲನ್ನು ಅನುಭವಿಸಿತ್ತು. ಹೀಗೆ ಸೆಮಿಫೈನಲ್ ಹಂತದವರೆಗೂ ಯಶಸ್ವಿಯಾಗಿ ತಲುಪಿ ದಬಾಂಗ್ ಡೆಲ್ಲಿ ವಿರುದ್ಧ ಸೋಲನ್ನು ಅನುಭವಿಸಿದ್ದ ಬೆಂಗಳೂರು ಬುಲ್ಸ್ ತಂಡಕ್ಕೆ ಇದೀಗ ಆ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಒದಗಿಬಂದಿದೆ. ಹೌದು, ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಕಳೆದ ಆವೃತ್ತಿಯ ಹಾಗೆ ಬೆಂಗಳೂರು ಬುಲ್ಸ್ ತಂಡಕ್ಕೆ ದಬಾಂಗ್ ಡೆಲ್ಲಿ ತಂಡ ಎದುರಾಳಿಯಾಗಿದ್ದು, ಈ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡಕ್ಕೆ ಬೆಂಗಳೂರು ಬುಲ್ಸ್ ಸೋಲುಣಿಸಿದರೆ ಕಳೆದ ಆವೃತ್ತಿಯ ಸೆಮಿಫೈನಲ್ ಸೋಲಿನ ಸೇಡನ್ನು ತೀರಿಸಿಕೊಳ್ಳಬಹುದಾಗಿದೆ.

ಇನ್ನು ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳ ನಡುವೆ ಒಟ್ಟು 16 ಮುಖಾಮುಖಿ ಪಂದ್ಯಗಳು ನಡೆದಿದ್ದು, ದಬಾಂಗ್ ಡೆಲ್ಲಿ 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಬೆಂಗಳೂರು ಬುಲ್ಸ್ 6 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಇನ್ನು ಇತ್ತಂಡಗಳ ನಡುವಿನ ಈ ಬಾರಿಯ ಆವೃತ್ತಿಯ ಸೆಮಿಫೈನಲ್ 2ನೇ ಪಂದ್ಯ ಇಂದು (ಫೆಬ್ರವರಿ 23) ರಾತ್ರಿ 8.30ಕ್ಕೆ ಆರಂಭಗೊಳ್ಳಲಿದೆ.

ದಬಾಂಗ್ ಡೆಲ್ಲಿ ಸಂಭಾವ್ಯ ಆಡುವ ಬಳಗ: ನವೀನ್ ಕುಮಾರ್, ಸಂದೀಪ್ ನರ್ವಾಲ್, ಮಂಜೀತ್ ಛಿಲ್ಲರ್, ಜೋಗಿಂದರ್ ನರ್ವಾಲ್, ವಿಜಯ್, ಕ್ರಿಶನ್, ಅಶು ಮಲಿಕ್/ನೀರಜ್ ನರ್ವಾಲ್.

ಬೆಂಗಳೂರು ಬುಲ್ಸ್ ಸಂಭಾವ್ಯ ಆಡುವ ಬಳಗ: ಪವನ್ ಸೆಹ್ರಾವತ್, ಚಂದ್ರನ್ ರಂಜಿತ್, ಭರತ್, ಮಹೇಂದ್ರ ರಜಪೂತ್, ಅಮನ್, ಸೌರಭ್ ನಂದಲ್, ಮಯೂರ್ ಕದಮ್.

ಸೆಮಿಫೈನಲ್ 1 ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ vs ಯುಪಿ ಯೋಧಾ ಹಣಾಹಣಿ

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ಸೆಣಸಾಟ ನಡೆಸಿದರೆ, ಇದಕ್ಕೂ ಮುನ್ನ ನಡೆಯಲಿರುವ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಕಣಕ್ಕಿಳಿಯಲಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಇಂದು ( ಫೆಬ್ರವರಿ 23 ) ರಾತ್ರಿ 7.30ಕ್ಕೆ ಆರಂಭವಾಗಲಿದೆ. ಇನ್ನು ಇತ್ತಂಡಗಳ ನಡುವೆ ಪ್ರೋ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇದುವರೆಗೂ ಒಟ್ಟು 10 ಮುಖಾಮುಖಿ ಪಂದ್ಯಗಳು ನಡೆದಿದ್ದು, ಪಾಟ್ನಾ ಪೈರೇಟ್ಸ್ 5 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಯುಪಿ ಯೋಧಾ 4 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಪಾಟ್ನಾ ಪೈರೇಟ್ಸ್ ಸಂಭಾವ್ಯ ಆಡುವ ಬಳಗ: ಸಚಿನ್, ನೀರಜ್ ಕುಮಾರ್, ಸಜೀನ್ಸ್, ಪ್ರಶಾಂತ್ ಕುಮಾರ್, ಗುಮನ್ ಸಿಂಗ್, ಸುನಿಲ್, ಮೊಹಮ್ಮದ್ರೇಜಾ ಮಾರ್ಕ್.

ಯುಪಿ ಯೋಧಾ ಸಂಭಾವ್ಯ ಆಡುವ ಬಳಗ: ಪ್ರದೀಪ್ ನರ್ವಾಲ್, ಅಶು ಸಿಂಗ್, ಶುಭಂ ಕುಮಾರ್, ಗುರುದೀಪ್, ಸುರೇಂದರ್ ಗಿಲ್, ನಿತೇಶ್ ಕುಮಾರ್, ಸುಮಿತ್.

ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

Story first published: Wednesday, February 23, 2022, 14:26 [IST]
Other articles published on Feb 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+