
ಪ್ರೋ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯಲ್ಲಿ ಇಂದು (ಜನವರಿ 13) ತಮಿಳ್ ತಲೈವಾಸ್ ಮತ್ತು ಬೆಂಗಾಲ್ ವಾರಿಯರ್ಸ್ ಹಾಗೂ ಯು ಮುಂಬಾ ಮತ್ತು ಪುಣೇರಿ ಪಲ್ಟಾನ್ ನಡುವೆ ಸೆಣಸಾಟ ನಡೆಯಿತು. ಈ ಪಂದ್ಯಗಳಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ಜಯ ಸಾಧಿಸಿದರೆ, ಯು ಮುಂಬಾ ವಿರುದ್ಧ ಪುಣೇರಿ ಪಲ್ಟಾನ್ ಜಯ ಸಾಧಿಸಿದೆ.
ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಂದು ನಡೆದ ಮೊದಲನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ತಮಿಳ್ ತಲೈವಾಸ್ ತಂಡದ ವಿರುದ್ಧ 37 - 28 ಅಂಕಗಳ ಅಂತರದಲ್ಲಿ ಭರ್ಜರಿ ಜಯವನ್ನು ಸಾಧಿಸಿದೆ. ಈ ಪಂದ್ಯದ ಮೂಲಕ ಬೆಂಗಾಲ್ ವಾರಿಯರ್ಸ್ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ತನ್ನ ನಾಲ್ಕನೇ ಗೆಲುವನ್ನು ಸಾಧಿಸಿದ್ದು, ತಮಿಳ್ ತಲೈವಾಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಎರಡನೇ ಸೋಲನ್ನು ಕಂಡಿದೆ.
ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಣಿಂದರ್ ಸಿಂಗ್ ಸೂಪರ್ 10 ( ಒಟ್ಟು 12 ಅಂಕಗಳು ) ಕಲೆ ಹಾಕಿದರೆ, ಡಿಫೆಂಡರ್ ಆಟಗಾರರಾದ ಅಮಿತ್ ಮತ್ತು ರಣ್ ಸಿಂಗ್ ಉತ್ತಮ ಡಿಫೆನ್ಸ್ ಮಾಡುವಲ್ಲಿ ಯಶಸ್ವಿಯಾದರು. ಪಂದ್ಯದ ಮೊದಲನೇ ಭಾಗದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಮಣಿಂದರ್ ಸಿಂಗ್ ಅವರನ್ನು ತಮಿಳ್ ತಲೈವಾಸ್ ತಂಡದ ಸುರ್ಜೀತ್ ಮತ್ತು ಸಾಗರ್ ಟ್ಯಾಕಲ್ ಮಾಡುವುದರ ಮೂಲಕ ಆರಂಭಿಸಿದರು. ಇದೇ ಸಮಯದಲ್ಲಿ ಮತ್ತೊಂದೆಡೆ ತಮಿಳ್ ತಲೈವಾಸ್ ತಂಡದ ಮಂಜೀತ್ ಸೂಪರ್ ರೈಡಿಂಗ್ ಮಾಡುವ ಮೂಲಕ ತಮಿಳ್ ತಲೈವಾಸ್ ತಂಡ ಶುಭಾರಂಭವನ್ನು ಮಾಡಿತು. ಆದರೆ ಬೆಂಗಾಲ್ ವಾರಿಯರ್ಸ್ ತಂಡದ ಅಮಿತ್ ನರ್ವಲ್ ಪಂದ್ಯದ ಐದನೇ ನಿಮಿಷದಲ್ಲಿ ಮಾಡಿದ ಸೂಪರ್ ಟ್ಯಾಕಲ್ ಅಂಕಗಳಲ್ಲಿ ಸಮತೋಲನವನ್ನು ಸಾಧಿಸುವಲ್ಲಿ ಸಹಕರಿಸಿತು.
ಈ ಸಮಯದಲ್ಲಿ ತಮಿಳ್ ತಲೈವಾಸ್ ತಂಡದ ಸುರ್ಜಿತ್ 2 ಸೂಪರ್ ಟ್ಯಾಕಲ್ ಮಾಡಿದರಾದರೂ ಮಧ್ಯಂತರಕ್ಕೆ ಇನ್ನೂ 7 ನಿಮಿಷಗಳು ಬಾಕಿ ಇರುವಾಗ ಬೆಂಗಾಲ್ ವಾರಿಯರ್ಸ್ ತಂಡ ತಮಿಳ್ ತಲೈವಾಸ್ ತಂಡವನ್ನು ಆಲ್ ಔಟ್ ಮಾಡಿತು. ಹೀಗೆ ಪಂದ್ಯದ ಮಧ್ಯಂತರದಲ್ಲಿ ಬೆಂಗಾಲ್ ವಾರಿಯರ್ಸ್ ತಮಿಳ್ ತಲೈವಾಸ್ ವಿರುದ್ಧ 20 - 16 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಇನ್ನು ಪಂದ್ಯದ ದ್ವಿತೀಯಾರ್ಧದ ಮೊದಲ ಹತ್ತು ನಿಮಿಷಗಳಲ್ಲಿ ಇತ್ತಂಡಗಳು ಕೂಡ ಸುರಕ್ಷತೆಯ ಆಟವನ್ನಾಡಿದವು. ದ್ವಿತೀಯಾರ್ಧದಲ್ಲಿ ತಮಿಳ್ ತಲೈವಾಸ್ ತಂಡದ ಡಿಫೆನ್ಸ್ ವಿಭಾಗ ಉತ್ತಮ ಡಿಫೆನ್ಸ್ ಮಾಡುವಲ್ಲಿ ವಿಫಲವಾಯಿತು ಮತ್ತು ಮಂಜೀತ್ ಕೂಡ ರೈಡಿಂಗ್ ಪಾಯಿಂಟ್ ಕಲೆಹಾಕುವಲ್ಲಿ ವಿಫಲರಾದರು. ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ರಣ್ ಸಿಂಗ್ ಎಡ ಮೂಲೆಯಲ್ಲಿ ಆಕರ್ಷಕ ಟ್ಯಾಕಲ್ ಮಾಡಿದ್ದು ತಮಿಳ್ ತಲೈವಾಸ್ ತಂಡವನ್ನು ಆಲ್ ಔಟ್ ಮಾಡುವಲ್ಲಿ ಸಹಕಾರಿಯಾಯಿತು.
ಪಂದ್ಯ ಮುಗಿಯಲು ಇನ್ನೂ 7 ನಿಮಿಷಗಳು ಬಾಕಿ ಇರುವಾಗ 11 ಅಂಕಗಳ ಮುನ್ನಡೆಯನ್ನು ಸಾಧಿಸಿದ್ದ ಬೆಂಗಾಲ್ ವಾರಿಯರ್ಸ್ ಪಂದ್ಯದ ಅಂತಿಮ ಕ್ಷಣಗಳಲ್ಲಿ ಬೇಡದ ಆಟಕ್ಕೆ ಕೈಹಾಕಿ ಅಂಕ ಕಳೆದುಕೊಳ್ಳುವ ಕೆಲಸವನ್ನು ಮಾಡಲಿಲ್ಲ. ಈ ಮೂಲಕ ತಮಿಳ್ ತಲೈವಾಸ್ ವಿರುದ್ಧ ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ 37 - 28 ಅಂತರದ ಗೆಲುವನ್ನು ಸುಲಭವಾಗಿ ದಾಖಲಿಸಿತು.
ಇನ್ನು ಇದೇ ದಿನದಂದು ನಡೆದ ದ್ವಿತೀಯ ಪಂದ್ಯದಲ್ಲಿ ಯು ಮುಂಬಾ ಮತ್ತು ಪುನೇರಿ ಪಲ್ಟಾನ್ಸ್ ತಂಡಗಳು ಸೆಣಸಾಟ ನಡೆಸಿದ್ದು, ಪುನೇರಿ ಪಲ್ಟಾನ್ ಯು ಮುಂಬಾ ವಿರುದ್ಧ 42 - 23 ಅಂಕಗಳ ಅಂತರದಲ್ಲಿ ಜಯವನ್ನು ಸಾಧಿಸಿದೆ.