ಪ್ರೋ ಕಬಡ್ಡಿ ಲೀಗ್: ಡೆಲ್ಲಿ ಗೆದ್ದ ನಂತರ ಅಂಕಪಟ್ಟಿಯಲ್ಲಿ 2 ಸ್ಥಾನ ಕುಸಿದ ಬೆಂಗಳೂರು ಬುಲ್ಸ್

ಪ್ರೋ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯಲ್ಲಿ ಇಂದು ( ಜನವರಿ 18 ) 2 ಪಂದ್ಯಗಳು ನಡೆದಿದ್ದು, ಪ್ರಥಮ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಪಾಟ್ನಾ ಪೈರೇಟ್ಸ್ ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಗುಜರಾತ್ ಜಿಯಂಟ್ಸ್ ಮತ್ತು ಯು ಮುಂಬಾ ತಂಡಗಳು ಸೆಣಸಾಟ ನಡೆಸಿವೆ.
ದಬಾಂಗ್ ಡೆಲ್ಲಿ ಮತ್ತು ಪಾಟ್ನಾ ಪೈರೇಟ್ಸ್ ನಡುವಿನ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 32 - 29 ಅಂಕಗಳ ಅಂತರದಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ದಬಾಂಗ್ ಡೆಲ್ಲಿ ವಿರುದ್ಧ ಸೋತಿರುವ ಪಾಟ್ನಾ ಪೈರೇಟ್ಸ್ ತಂಡ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲೇ ಉಳಿದುಕೊಂಡಿದ್ದು, ಈ ಪಂದ್ಯದ ಫಲಿತಾಂಶ ಬೆಂಗಳೂರು ಬುಲ್ಸ್ ತಂಡದ ಮೇಲೆ ಪರಿಣಾಮ ಬೀರಿದೆ. ಹೌದು, ಈ ಪಂದ್ಯ ಆರಂಭಕ್ಕೂ ಮುನ್ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಬೆಂಗಳೂರು ಬುಲ್ಸ್ ಪಂದ್ಯ ಮುಗಿದ ನಂತರ ತೃತೀಯ ಸ್ಥಾನಕ್ಕೆ ಕುಸಿತ ಕಂಡಿದೆ.
ದಬಾಂಗ್ ಡೆಲ್ಲಿ ತಂಡದ ಪ್ರಮುಖ ಆಟಗಾರ ಮಂಜೀತ್ ಚಿಲ್ಲಾರ್ ಪಂದ್ಯದ ಕೊನೆಯ ರೈಡ್ ವೇಳೆ ಟ್ಯಾಕಲ್ ಮಾಡುವ ಮೂಲಕ ದಬಾಂಗ್ ಡೆಲ್ಲಿ ತಂಡಕ್ಕೆ ಜಯವನ್ನು ತಂದುಕೊಟ್ಟರು. ಜತೆಗೆ ತಂಡದ ಮತ್ತೋರ್ವ ಆಟಗಾರನಾದ ಆಲ್ ರೌಂಡರ್ ಸಂದೀಪ್ ನರ್ವಾಲ್ 8 ಅಂಕಗಳನ್ನು ಗಳಿಸುವ ಮೂಲಕ ದಬಂಗ್ ಡೆಲ್ಲಿ ತಂಡವನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಂತೆ ಮಾಡಿದ್ದಾರೆ. ಪಂದ್ಯದ ಆರಂಭದಲ್ಲಿ ಅಬ್ಬರಿಸಿದ್ದ ಪಾಟ್ನಾ ಪೈರೇಟ್ಸ್ ಎಂದಿನಂತೆ ಡಿಫೆನ್ಸ್ ವಿಭಾಗದ ಲೋಪದಿಂದ ಪಂದ್ಯದಲ್ಲಿ ಸೋಲನ್ನು ಅನುಭವಿಸಬೇಕಾಗಿ ಬಂತು. ಆರಂಭದಲ್ಲಿ ಮುಂಚೂಣಿಯಲ್ಲಿದ್ದ ಪಾಟ್ನಾ ಪೈರೇಟ್ಸ್ ತಂಡಕ್ಕೆ ದಬಾಂಗ್ ಡೆಲ್ಲಿ ತಂಡದ ರೈಡರ್ ವಿಜಯ್ ಆಘಾತ ನೀಡಿದರು ಹಾಗೂ ದಬಾಂಗ್ ಡೆಲ್ಲಿ ಪಟ್ನಾ ಪೈರೇಟ್ಸ್ ತಂಡವನ್ನು ಹತ್ತನೇ ನಿಮಿಷದಲ್ಲಿ ಆಲ್ ಔಟ್ ಮಾಡುವ ಮೂಲಕ 4 ಅಂಕಗಳ ಮುನ್ನಡೆಯನ್ನು ಸಾಧಿಸಿತು. ದಬಾಂಗ್ ಡೆಲ್ಲಿಯ ಡಿಫೆನ್ಸ್ ವಿಭಾಗದಲ್ಲಿ ಮಂಜೀತ್ ಚಿಲಾರ್ ಮತ್ತು ಸಂದೀಪ್ ನರ್ವಾಲ್ ಅನುಭವದ ಆಟ ಪಾಟ್ನಾ ಪೈರೇಟ್ಸ್ ಆಟಗಾರರನ್ನು ಕಟ್ಟಿಹಾಕಿತು.
ಹಾಗೂ ಪಾಟ್ನಾ ಪೈರೇಟ್ಸ್ ತಂಡದ ಆಟಗಾರ ಸಜಿನ್ ಜಿ ಮಂಡಿಯ ಗಾಯಕ್ಕೊಳಗಾಗಿ ಪಂದ್ಯದಿಂದ ಹೊರ ಬಿದ್ದದ್ದು ಪಟ್ನಾ ಪೈರೇಟ್ಸ್ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಹೀಗೆ ಪಂದ್ಯದ ಮೊದಲಾರ್ಧದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಸಂಪೂರ್ಣ ಹಿಡಿತವನ್ನು ಸಾಧಿಸಿದ ದಬಾಂಗ್ ಡೆಲ್ಲಿ 19-10 ಅಂಕಗಳ ಮುನ್ನಡೆಯನ್ನು ಮಧ್ಯಂತರದಲ್ಲಿ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಲಯ ಕಂಡುಕೊಂಡ ಪಾಟ್ನಾ ಪೈರೇಟ್ಸ್ ತಂಡದ ಗುಮನ್ ಸಿಂಗ್ ಮತ್ತು ಸಚಿನ್ ದಬಾಂಗ್ ಡೆಲ್ಲಿ ತಂಡದ ಡಿಫೆನ್ಸ್ ವಿಭಾಗದ ಮೇಲೆ ಸವಾರಿ ಮಾಡಿದರು. ಹಾಗೂ ದಬಾಂಗ್ ಡೆಲ್ಲಿ ತಂಡವನ್ನು ಪಾಟ್ನಾ ಪೈರೇಟ್ಸ್ ಹತ್ತನೆ ನಿಮಿಷಕ್ಕೆ ಆಲ್ ಔಟ್ ಮಾಡಿತು. ಈ ಸಮಯಕ್ಕೆ ಪಾಟ್ನಾ ಪೈರೇಟ್ಸ್ ದಬಾಂಗ್ ಡೆಲ್ಲಿ ತಂಡದ ಮುನ್ನಡೆಯನ್ನು 1 ಅಂಕಕ್ಕೆ ತಗ್ಗಿಸಿತು.
ಆದರೆ ಇದರ ಬೆನ್ನಲ್ಲೇ ದಬಾಂಗ್ ಡೆಲ್ಲಿ ತಂಡದ ಸಂದೀಪ್ ನರ್ವಾಲ್ 2 ಅಂಕಗಳ ರೈಡ್ ಮಾಡಿ 3 ಅಂಕಗಳ ಮುನ್ನಡೆಯನ್ನು ತಂಡಕ್ಕೆ ತಂದುಕೊಡುವುದರ ಮೂಲಕ ಪಾಟ್ನಾ ಪೈರೇಟ್ಸ್ ಮೇಲೆ ಒತ್ತಡ ಹೇರಿದರು. ಅಂತಿಮವಾಗಿ ಪಂದ್ಯ ಮುಗಿಯಲು ಇನ್ನೂ 3 ನಿಮಿಷಗಳು ಬಾಕಿ ಇರುವಾಗ ದಬಾಂಗ್ ಡೆಲ್ಲಿ 4 ಅಂಕಗಳ ಮುನ್ನಡೆಯನ್ನು ಸಾಧಿಸಿತು. ಪಟ್ನಾ ಪೈರೇಟ್ಸ್ ತನ್ನ ಅಂತಿಮ ರೈಡ್‌ನಲ್ಲಿ 2 ಅಂಕಗಳ ಅಗತ್ಯತೆಯನ್ನು ಹೊಂದಿತ್ತು ಆದರೆ, ದಬಾಂಗ್ ಡೆಲ್ಲಿ ತಂಡದ ಮಂಜಿತ್ ಚಿಲ್ಲಾರ್ 2 ಅಂಕಗಳ ಟ್ಯಾಕಲ್ ಮಾಡುವ ಮೂಲಕ ದಬಾಂಗ್ ಡೆಲ್ಲಿ ಗೆಲುವಿನ ಕೇಕೆ ಹಾಕಿತು. ಈ ಗೆಲುವಿನ ಮೂಲಕ ಟೂರ್ನಿಯಲ್ಲಿನ ತನ್ನ ಏಳನೇ ಜಯವನ್ನು ಸಾಧಿಸಿದ ದಬಾಂಗ್ ಡೆಲ್ಲಿ ಒಟ್ಟು 42 ಅಂಕಗಳನ್ನು ಹೊಂದುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications