
ಕಳೆದ ವರ್ಷದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಪಂದ್ಯದ ಮೂಲಕ ಆರಂಭವಾಗಿದ್ದ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಇದೀಗ ಪ್ಲೇ ಆಫ್ ಹಂತಕ್ಕೆ ಬಂದು ತಲುಪಿದೆ. ಹೌದು, ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷ ನಡೆಯದೇ ಇದ್ದ ಪ್ರೋ ಕಬಡ್ಡಿ ಲೀಗ್ ಇದೀಗ ಬಯೋ ಬಬಲ್ ವ್ಯವಸ್ಥೆಯೊಂದಿಗೆ ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು 12 ತಂಡಗಳ ಪೈಕಿ 6 ತಂಡಗಳು ಪ್ಲೇಆಫ್ ಸುತ್ತನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ.
ಇನ್ನು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಲೀಗ್ ಹಂತದಲ್ಲಿ ಒಟ್ಟು 132 ಪಂದ್ಯಗಳು ಸತತ 60 ದಿನಗಳಲ್ಲಿ ನಡೆದಿದ್ದು, ಈ ಲೀಗ್ ಹಂತದ ಪಂದ್ಯಗಳು ಮುಗಿಯುವ ಸಮಯಕ್ಕೆ ಅಂಕಪಟ್ಟಿಯಲ್ಲಿ ಟಾಪ್ 6 ಸ್ಥಾನಗಳನ್ನು ಪಡೆದುಕೊಂಡಿರುವ ತಂಡಗಳಾದ ಪಾಟ್ನಾ ಪೈರೇಟ್ಸ್, ದಬಾಂಗ್ ಡೆಲ್ಲಿ, ಯುಪಿ ಯೋಧಾ, ಗುಜರಾತ್ ಜೈಂಟ್ಸ್, ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ಪ್ಲೇ ಆಫ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿವೆ. ಹೀಗೆ ಹೆಚ್ಚು ಪಂದ್ಯಗಳನ್ನು ಗೆದ್ದು ಅಧಿಕ ಅಂಕ ಪಡೆದುಕೊಂಡು ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನಗಳಲ್ಲಿರುವ ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ನೇರವಾಗಿ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದು, ಉಳಿದ 4 ತಂಡಗಳಾದ ಯುಪಿ ಯೋಧಾ, ಗುಜರಾತ್ ಜೈಂಟ್ಸ್, ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ಎಲಿಮಿನೇಟರ್ ಸುತ್ತಿನ 2 ಪಂದ್ಯಗಳಲ್ಲಿ ಸೆಣಸಾಟ ನಡೆಸಲಿವೆ.
ಹೀಗೆ ಈ 4 ತಂಡಗಳು ಸೆಣಸಾಡಲಿರುವ ಎಲಿಮಿನೇಟರ್ ಸುತ್ತಿನಲ್ಲಿ ಒಟ್ಟು 2 ಪಂದ್ಯಗಳು ನಡೆಯಲಿದ್ದು, ಎರಡೂ ಪಂದ್ಯಗಳು ಸಹ ಫೆಬ್ರವರಿ 21ರ ಸೋಮವಾರದಂದು ಜರುಗಲಿವೆ. ಹೀಗೆ ನಡೆಯಲಿರುವ ಎಲಿಮಿನೇಟರ್ ಸುತ್ತಿನ ಪಂದ್ಯಗಳ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.
ಎಲಿಮಿನೇಟರ್ 1: ಯುಪಿ ಯೋಧಾ vs ಪುಣೇರಿ ಪಲ್ಟನ್
ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಎಲಿಮಿನೇಟರ್ 1 ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನ ಹಾಗೂ ಆರನೇ ಸ್ಥಾನ ಪಡೆದುಕೊಂಡಿರುವ ತಂಡಗಳು ಸೆಣಸಾಟ ನಡೆಸಲಿವೆ. ಹೀಗಾಗಿ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿರುವ ಯುಪಿ ಯೋಧಾ ಮತ್ತು ಆರನೇ ಸ್ಥಾನದಲ್ಲಿರುವ ಪುಣೇರಿ ಪಲ್ಟನ್ ತಂಡಗಳು ಈ ಪಂದ್ಯದಲ್ಲಿ ಸೆಣಸಾಟ ನಡೆಸಲಿದ್ದು, ಪಂದ್ಯ ಇಂದು ( ಫೆಬ್ರವರಿ 21 ) ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಲಿರುವ ತಂಡ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿದ್ದು ಸೆಮಿಫೈನಲ್ 1 ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಸೆಣಸಾಟ ನಡೆಸಲಿದೆ ಹಾಗೂ ಈ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಯುಪಿ ಯೋಧಾ ಸಂಭಾವ್ಯ ಆಡುವ ಬಳಗ: ಪ್ರದೀಪ್ ನರ್ವಾಲ್, ಸುರಿಂದರ್ ಗಿಲ್, ಶುಭಂ ಕುಮಾರ್, ಶ್ರೀಕಾಂತ್ ಜಾಧವ್, ನಿತೇಶ್ ಕುಮಾರ್, ಸುಮಿತ್, ಅಶು ಸಿಂಗ್
ಪುಣೇರಿ ಪಲ್ಟನ್ ಸಂಭಾವ್ಯ ಆಡುವ ಬಳಗ: ಮೋಹಿತ್ ಗೋಯತ್, ಅಭಿನೇಶ್ ನಡರಾಜನ್, ಸಂಕೇತ್ ಸಾವಂತ್, ಅಸ್ಲಂ ಇನಾಮದಾರ್, ನಿತಿನ್ ತೋಮರ್, ಸೋಂಬಿರ್, ವಿಶಾಲ್ ಭಾರದ್ವಾಜ್
ಎಲಿಮಿನೇಟರ್ 2: ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್
ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಎಲಿಮಿನೇಟರ್ 2 ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ತಂಡ ಮತ್ತು ಐದನೇ ಸ್ಥಾನದಲ್ಲಿರುವ ತಂಡಗಳು ಸೆಣಸಾಟ ನಡೆಸಲಿವೆ. ಹೀಗಾಗಿ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ಮತ್ತು ಐದನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ತಂಡಗಳು ಸೆಣಸಾಡಲಿವೆ. ಇನ್ನು ಈ ಪಂದ್ಯ ಇಂದು ( ಫೆಬ್ರವರಿ 21 ) ರಾತ್ರಿ 8.30ಕ್ಕೆ ಆರಂಭಗೊಳ್ಳಲಿದೆ. ಹಾಗೂ ಈ ಪಂದ್ಯದಲ್ಲಿ ಜಯ ಗಳಿಸಲಿರುವ ತಂಡ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿದ್ದು ಫೆಬ್ರವರಿ 23ರಂದು ನಡೆಯಲಿರುವ ಸೆಮಿಫೈನಲ್ 2 ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ. ಅತ್ತ ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರ ಬೀಳಲಿದೆ.
ಬೆಂಗಳೂರು ಬುಲ್ಸ್ ಸಂಭಾವ್ಯ ಆಡುವ ಬಳಗ: ಪವನ್ ಸೆಹ್ರಾವತ್, ಮಯೂರ್ ಕದಮ್, ಮಹೇಂದ್ರ ಸಿಂಗ್, ಭಾರತ, ಚಂದ್ರನ್ ರಂಜಿತ್, ಸೌರಭ್ ನಂದಲ್, ಅಮನ್
ಗುಜರಾತ್ ಜೈಂಟ್ಸ್ ಸಂಭಾವ್ಯ ಆಡುವ ಬಳಗ: ಅಜಯ್ ಕುಮಾರ್, ಸುನಿಲ್ ಕುಮಾರ್, ಪ್ರವೇಶ್ ಭೈನ್ಸ್ವಾಲ್, ರಾಕೇಶ್, ಮಹೇಂದ್ರ ರಜಪೂತ್, ಹಾಡಿ ಶೋಷ್ಟೋರಕ್, ಗಿರೀಶ್ ಮಾರುತಿ.
ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.