
ಪ್ರೊ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯ 32ನೇ ಪಂದ್ಯದಲ್ಲಿ ಇಂದು ಯು ಮುಂಬಾ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಸೆಣಸಾಟ ನಡೆಸಿದ್ದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಹಾಗೂ ಇದೇ ದಿನದಂದು ನಡೆದ ಟೂರ್ನಿಯ 33ನೇ ಪಂದ್ಯದಲ್ಲಿ ಯುಪಿ ಯೋಧಾ ತಂಡದ ವಿರುದ್ಧ ತಮಿಳ್ ತಲೈವಾಸ್ ತಂಡ ಗೆದ್ದು ಬೀಗಿದೆ.
ಮೊದಲಿಗೆ ಯು ಮುಂಬಾ ಮತ್ತು ಹರಿಯಾಣ ಸ್ಟೀಲರ್ಸ್ ನಡುವೆ ನಡೆದ ಪಂದ್ಯ 24 - 24 ಅಂಕಗಳಿಂದ ಡ್ರಾನಲ್ಲಿ ಅಂತ್ಯಗೊಂಡಿದೆ. ಯು ಮುಂಬಾ ತಂಡದ ನಾಯಕ ಫಜಲ್ ಅತ್ರಾಚಲಿ 4 ರೇಡಿಂಗ್ ಅಂಕಗಳನ್ನು ಪಡೆದರೆ ಇನ್ನುಳಿದ ಬಹುತೇಕ ಅಂಕಗಳನ್ನು ಡಿಫೆನ್ಸ್ ವಿಭಾಗ ಪಡೆಯಿತು. ಹೌದು, ಯು ಮುಂಬಾ ತಂಡದ ಡಿಫೆನ್ಸ್ ವಿಭಾಗ ಹರಿಯಾಣ ಸ್ಟೀಲರ್ಸ್ ಆಟಗಾರರನ್ನು ಕಟ್ಟಿಹಾಕುವ ಮುಖಾಂತರವೇ ಹೆಚ್ಚು ಅಂಕಗಳನ್ನು ಪಡೆಯಿತು. ಅತ್ತ ಹರಿಯಾಣ ಸ್ಟೀಲರ್ಸ್ ಪರ ಆಲ್ ರೌಂಡರ್ ಆಟಗಾರ ರೋಹಿತ್ ಗುಲಿಯಾ 8 ಅಂಕಗಳನ್ನು ಪಡೆದುಕೊಂಡರೆ ಉಳಿದ ಬಹುಪಾಲು ಅಂಕಗಳನ್ನು ಡಿಫೆನ್ಸ್ ವಿಭಾಗ ಪಡೆದುಕೊಂಡಿತು.
ಯು ಮುಂಬಾ ಮತ್ತು ಹರಿಯಾಣ ಸ್ಟೀಲರ್ಸ್ ಎರಡೂ ತಂಡಗಳಲ್ಲಿಯೂ ಕಠಿಣ ಡಿಫೆನ್ಸ್ ವಿಭಾಗವಿದ್ದ ಕಾರಣದಿಂದಾಗಿ ಎರಡೂ ತಂಡಗಳ ರೈಡಿಂಗ್ ವಿಭಾಗ ಹೆಚ್ಚಿನ ರೇಡ್ ಅಂಕಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಪಂದ್ಯದ ಮೊದಲಾರ್ಧ ಕಡಿಮೆ ಅಂಕಗಳಿಂದ ಕೂಡಿತ್ತು. ಯು ಮುಂಬಾ ತಂಡದ ರಿಂಕು ಮೊದಲಿಗೆ ತೊಡೆ ತಟ್ಟುವುದರ ಮೂಲಕ ಅಂಕಗಳ ಖಾತೆ ತೆರೆದರೆ ನಂತರ ನಾಯಕ ಫಜಲ್ ಅತ್ರಾಚಲಿ ಕೂಡ ಅಂಕಗಳನ್ನು ಕಲೆ ಹಾಕಿದರು. ಅತ್ತ ಯು ಮುಂಬಾ ಆಟಗಾರರನ್ನು ಅಚ್ಚುಕಟ್ಟಾಗಿ ಟ್ಯಾಕಲ್ ಮಾಡುವ ಮೂಲಕ ನಿಭಾಯಿಸಿದ ಹರಿಯಾಣ ಸ್ಟೀಲರ್ಸ್ ಮಧ್ಯಂತರದಲ್ಲಿ 12-10 ಅಂಕಗಳಿಂದ ಯು ಮುಂಬಾ ವಿರುದ್ಧ ಮುನ್ನಡೆಯನ್ನು ಸಾಧಿಸಿತು.
ನಂತರ ಆರಂಭವಾದ ದ್ವಿತೀಯಾರ್ಧದಲ್ಲಿ ಕೂಡ ಹರಿಯಾಣ ಸ್ಟೀಲರ್ಸ್ ಸುರೇಂದರ್ ನಾಡಾ ನೇತೃತ್ವದಲ್ಲಿ ತನ್ನ ಅಬ್ಬರದ ಡಿಫೆನ್ಸ್ ಮುಂದುವರೆಸಿತು. ಹರಿಯಾಣ ಸ್ಟೀಲರ್ಸ್ ಸಮರ್ಥನೆಯ ಡಿಫೆನ್ಸ್ ಮುಂದೆ ಯು ಮುಂಬಾದ ಘಟಾನುಘಟಿ ಅಭಿಷೇಕ್ ಸಿಂಗ್ ಕೂಡ ಸಪ್ಪೆಯಾಗಿಬಿಟ್ಟರು. ನಂತರ ಯು ಮುಂಬಾದ ಯುವ ಕೋಚ್ ರಾಜ್ ಗುರು ಸುಬ್ರಮಣಿಯನ್ ಅಭಿಷೇಕ್ ಸಿಂಗ್ ಬದಲು ಅಜಿಂಕ್ಯ ಕಪ್ರೆ ಅವರನ್ನು ರೇಡ್ ಮಾಡಲು ಕಳುಹಿಸಿದ ಪರಿಣಾಮ ಎದುರಾಳಿ ತಂಡದ ಮೂವರು ಆಟಗಾರರು ಕಣದಿಂದ ಹೊರ ಬಿದ್ದರು. ಹೀಗೆ ಯು ಮುಂಬಾ 8 ನಿಮಿಷಗಳು ಬಾಕಿ ಇರುವಾಗ ಹರಿಯಾಣ ಸ್ಟೀಲರ್ಸ್ ತಂಡವನ್ನು ಆಲ್ ಔಟ್ ಮಾಡಿ 3 ಅಂಕಗಳ ಮುನ್ನಡೆಯನ್ನು ಸಾಧಿಸಿತ್ತು. ಪಂದ್ಯದ ಅಂತಿಮ 5 ನಿಮಿಷಗಳಲ್ಲಿ 2 ಅಂಕಗಳ ಮುನ್ನಡೆಯನ್ನು ಯು ಮುಂಬಾ ಸಾಧಿಸಿದ್ದರೂ ಸಹ ಅಂತಿಮವಾಗಿ ಹರಿಯಾಣ ಸ್ಟೀಲರ್ಸ್ ಆಟಗಾರರ ಟ್ಯಾಕಲ್ ಮುಂದೆ ಅಂಕಗಳನ್ನು ಕಳೆದುಕೊಂಡಿತು. ಈ ಮೂಲಕ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯಗೊಂಡಿತ್ತು.
ಇನ್ನು ಇದೇ ದಿನದಂದು ನಡೆದ ಯುಪಿ ಯೋಧಾ ಮತ್ತು ತಮಿಳ್ ತಲೈವಾಸ್ ನಡುವಿನ ಪಂದ್ಯದಲ್ಲಿ ತಮಿಳ್ ತಲೈವಾಸ್ ಯುಪಿ ಯೋಧಾ ವಿರುದ್ಧ 39 - 33 ಅಂಕಗಳ ಅಂತರದ ಗೆಲುವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.
ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.