
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಜನವರಿ 24ರ ಸೋಮವಾರದವರೆಗೂ ಒಟ್ಟು 76 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ಬೆಂಗಳೂರು ಬುಲ್ಸ್ ಅಗ್ರಸ್ಥಾನದಲ್ಲಿದ್ದರೆ, ದಬಾಂಗ್ ಡೆಲ್ಲಿ ದ್ವಿತೀಯ ಸ್ಥಾನ ಮತ್ತು ಬೆಂಗಾಲ್ ವಾರಿಯರ್ಸ್ ತೃತೀಯ ಸ್ಥಾನದಲ್ಲಿವೆ.
ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 76 ಪಂದ್ಯಗಳು ಈಗಾಗಲೇ ಯಶಸ್ವಿಯಾಗಿ ಮುಗಿದಿದ್ದು ಇದೀಗ ಟೂರ್ನಿಗೆ ಕೊರೋನಾ ಕಂಟಕ ಶುರುವಾಗಿದೆ. ಹೌದು, ಪ್ರತಿದಿನದಂತೆ ಇಂದಿನ ದಿನ ಕೂಡ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಎರಡೆರಡು ಪಂದ್ಯಗಳು ನಡೆಯಬೇಕಿತ್ತು. ಆದರೆ 2 ತಂಡಗಳ ಹಲವಾರು ಆಟಗಾರರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಆ ತಂಡಗಳಿಗೆ ಕಣಕ್ಕಿಳಿಯಲು ಬೇಕಾದ ಆಟಗಾರರ ಕೊರತೆಯುಂಟಾಗಿ ತಂಡ ರಚಿಸುವಲ್ಲಿ ವಿಫಲವಾಗಿವೆ.
ಕಠಿಣವಾದ ಬಯೋ ಬಬಲ್ ವ್ಯವಸ್ಥೆ ಇದ್ದರೂ ಸಹ ಕೊರೋನಾ ಸೋಂಕು ಆಟಗಾರರಿಗೆ ತಗುಲಿದ್ದು, ಸೋಂಕಿಗೆ ಒಳಗಾಗಿರುವ ಆಟಗಾರರನ್ನು ಪ್ರತ್ಯೇಕವಾಗಿ ಐಸೊಲೇಟ್ ಮಾಡಲಾಗಿದ್ದು, ಲಭ್ಯವಿರುವ ತಂಡಗಳನ್ನು ಬಳಸಿಕೊಂಡು ಟೂರ್ನಿಯನ್ನು ಮುನ್ನಡೆಸಲಾಗುತ್ತಿದೆ. ಎರಡು ತಂಡಗಳ ಆಟಗಾರರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿಯನ್ನು ಮಾತ್ರ ಆಯೋಜಕರು ಹಂಚಿಕೊಂಡಿದ್ದು ಯಾವ ಯಾವ ಆಟಗಾರರು ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಇನ್ನು ಪ್ರೊ ಕಬಡ್ಡಿ ಲೀಗ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬದಲಾಯಿಸಲ್ಪಟ್ಟಿರುವ ಪಂದ್ಯಗಳ ವೇಳಾ ಪಟ್ಟಿಗಳನ್ನು ಟ್ವೀಟ್ ಮಾಡಲಾಗಿದ್ದು, ಇಂದು ತೆಲುಗು ಟೈಟಾನ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ನಡುವಿನ ಏಕೈಕ ಪಂದ್ಯ ನಡೆಯಲಿದೆ. ಸದ್ಯ ಸೋಂಕಿಗೆ ಒಳಗಾಗಿರುವ ಆಟಗಾರರಿಗೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದು, ಉಳಿದ ಆಟಗಾರರಿಗೆ ಆಗಾಗ್ಗೆ ಪರೀಕ್ಷೆಗಳನ್ನು ಕೂಡ ನಡೆಸಲಾಗುತ್ತಿದೆ. ಸದ್ಯ ಉಳಿದ ಪಂದ್ಯಗಳನ್ನು ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ನಡೆಸಲಿದ್ದು, ಸೋಂಕಿಗೆ ಒಳಗಾಗಿರುವ ಆಟಗಾರರು ಚೇತರಿಸಿಕೊಂಡ ನಂತರ ಸಂಪೂರ್ಣ ಟೂರ್ನಿ ಬದಲಾದ ವೇಳಾಪಟ್ಟಿಯೊಂದಿಗೆ ಪುನಃ ಮುಂದುವರಿಯಲಿದೆ.