ಪ್ರೋ ಕಬಡ್ಡಿ ಲೀಗ್ 8: ನಬಿಭಕ್ಷ್ ಸೂಪರ್ ಶೋ; ಮೂರನೇ ಜಯ ಸಾಧಿಸಿದ ಬೆಂಗಾಲ್ ವಾರಿಯರ್ಸ್

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 30 ಹಾಗೂ 31ನೇ ಪಂದ್ಯ ಇಂದು ನಡೆದಿದೆ. ಚೊಚ್ಚಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ಸೆಣಸಾಟ ನಡೆಸಿದ್ದರೆ, ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಾಟ ನಡೆಸಿವೆ.
ಮೊದಲಿಗೆ ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ 31-28 ಅಂಕಗಳ ಅಂತರದಲ್ಲಿ ಜಯ ಸಾಧಿಸಿದೆ. ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಣೀಂದರ್ ಸಿಂಗ್ ಹಾಗೂ ಆಲ್ ರೌಂಡರ್ ಮೊಹಮ್ಮದ್ ನಬಿಭಕ್ಷ್ ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಜಯವನ್ನು ತಂದುಕೊಟ್ಟರು. ಬೆಂಗಾಲ್ ವಾರಿಯರ್ಸ್ ತಂಡದ ಮಣಿಂದರ್ ಸಿಂಗ್ 13 ಅಂಕಗಳನ್ನು ಕಲೆ ಹಾಕಿದರೆ, ಮೊಹಮ್ಮದ್ ನಬಿಭಕ್ಷ್ 10 ಅಂಕಗಳನ್ನು ಪಡೆದರು. ಮೊಹಮ್ಮದ್ ನಬಿಭಕ್ಷ್ ಪಂದ್ಯದ ಅಂತಿಮ ಸೂಪರ್ ಟ್ಯಾಕಲ್ ಮಾಡುವ ಮೂಲಕ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇತ್ತ ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ ಹಾಗೂ ಮಹಮ್ಮದ್ ನಬಿಭಕ್ಷ್ ಉತ್ತಮ ಪ್ರದರ್ಶನ ನೀಡಿದರೆ ಅತ್ತ ಜೈಪುರ್ ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ ಏಕಾಂಗಿ ಹೋರಾಟ ನಡೆಸಿದರು. ಈ ಪಂದ್ಯದಲ್ಲಿ ಮತ್ತೊಮ್ಮೆ ಸೂಪರ್ 10 ಅಂಕಗಳನ್ನು ಕಲೆಹಾಕಿದ ಅರ್ಜುನ್ ದೇಶ್ವಾಲ್ 16 ಅಂಕಗಳನ್ನು ಕಲೆ ಹಾಕಿದರು. ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಎರಡೂ ತಂಡಗಳು ಸಹ ಇಂದಿನ ಪಂದ್ಯದಲ್ಲಿ ಕಳಪೆ ಟ್ಯಾಕಲ್ ರೇಟ್ ಜತೆಗೆ ಕಣಕ್ಕಿಳಿದವು. ಪಂದ್ಯದ ಏಳನೇ ನಿಮಿಷದಲ್ಲಿಯೇ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಆಲ್ ಔಟ್ ಮಾಡಿದ ಬೆಂಗಾಲ್ ವಾರಿಯರ್ಸ್ ಮೊದಲಾರ್ಧದಲ್ಲಿ 18 - 14 ಅಂಕಗಳ ಮುನ್ನಡೆಯನ್ನು ಸಾಧಿಸಿತ್ತು. ಇನ್ನು ದ್ವಿತಿಯಾರ್ಧದಲ್ಲಿ ರೈಡರ್ಸ್ ಅಬ್ಬರಿಸಿದರು. ಅತ್ತ ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಏಕಾಂಗಿ ಹೋರಾಟ ನಡೆಸಿದ ಅರ್ಜುನ್ ದೇಶ್ವಾಲ್ ಅವರಿಗೆ ನಾಯಕ ದೀಪಕ್ ಹೂಡಾ ಕಡೆಯಿಂದ ಯಾವುದೇ ಸಾಥ್ ಸಿಗಲಿಲ್ಲ.
ಇನ್ನು ಒಂಬತ್ತನೇ ನಿಮಿಷದಲ್ಲಿ ಮಣಿಂದರ್ ಸಿಂಗ್ ಅವರನ್ನು ಟ್ಯಾಕಲ್ ಮಾಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಬೆಂಗಾಲ್ ವಾರಿಯರ್ಸ್ ಪ್ರಮುಖ ಟ್ಯಾಕಲ್ ಮಾಡುವುದರ ಮೂಲಕ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಬೆಂಗಾಲ್ ವಾರಿಯರ್ಸ್ 3 ಅಂಕ ಮುನ್ನಡೆ ಕಾಯ್ದುಕೊಂಡಿದ್ದಾಗ ಮಣಿಂದರ್ ಸಿಂಗ್ ಅವರನ್ನು ಟ್ಯಾಕಲ್ ಮಾಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ಅಂತರವನ್ನು ಕಡಿಮೆ ಮಾಡಿತು. ಆದರೆ ತಕ್ಷಣವೇ ಮೊಹಮ್ಮದ್ ನಬಿಭಕ್ಷ್ 2 ಅಂಕಗಳ ರೇಡ್ ಮಾಡಿ ಮತ್ತೆ ಬೆಂಗಾಲ್ ವಾರಿಯರ್ಸ್ ಮುನ್ನಡೆ ಕಾಯ್ದು ಕೊಳ್ಳುವಂತೆ ಮಾಡಿದರು. ಅಂತಿಮ ಹಂತದಲ್ಲಿ ಬೆಂಗಾಲ್ ವಾರಿಯರ್ಸ್ ಟ್ಯಾಕಲ್ ಮಾಡುವಲ್ಲಿ ವಿಫಲವಾದ ಕಾರಣ ಇತ್ತಂಡಗಳ ನಡುವೆ ಕೇವಲ 1 ಅಂಕದ ಅಂತರ ಮಾತ್ರ ಇತ್ತು. ಈ ಸಂದರ್ಭದಲ್ಲಿ ಮೊಹಮ್ಮದ್ ನಬಿಭಕ್ಷ್ ಎದುರಾಳಿ ತಂಡದ ಆಟಗಾರ ಅರ್ಜುನ್ ದೇಶ್ವಾಲ್ ಅವರನ್ನು ಸೂಪರ್ ಟ್ಯಾಕಲ್ ಮಾಡುವುದರ ಮೂಲಕ ತಂಡಕ್ಕೆ ರೋಚಕ ಜಯವನ್ನು ತಂದುಕೊಟ್ಟರು.
ಈ ಮೂಲಕ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ತನ್ನ ಮೂರನೇ ಗೆಲುವನ್ನು ದಾಖಲಿಸಿದ ಬೆಂಗಾಲ್ ವಾರಿಯರ್ಸ್ 16 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಬೆಂಗಾಲ್ ವಾರಿಯರ್ ಇಲ್ಲಿಯವರೆಗೂ ಒಟ್ಟು 6 ಪಂದ್ಯಗಳನ್ನಾಡಿದ್ದು 3 ಪಂದ್ಯಗಳಲ್ಲಿ ಸೋಲುಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications