
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಫೆಬ್ರವರಿ 7ರ ಸೋಮವಾರದವರೆಗೂ ಒಟ್ಟು 101 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ಪಾಟ್ನಾ ಪೈರೇಟ್ಸ್ ಅಗ್ರಸ್ಥಾನದಲ್ಲಿದ್ದರೆ, ದಬಾಂಗ್ ಡೆಲ್ಲಿ ದ್ವಿತೀಯ ಸ್ಥಾನ ಮತ್ತು ಬೆಂಗಳೂರು ಬುಲ್ಸ್ ತೃತೀಯ ಸ್ಥಾನದಲ್ಲಿವೆ.
ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 101 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಫೆಬ್ರವರಿ 7) ಒಟ್ಟು 2 ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಯು ಮುಂಬಾ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 2 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..
ಪಂದ್ಯ 1: ತಮಿಳ್ ತಲೈವಾಸ್ vs ಹರಿಯಾಣ ಸ್ಟೀಲರ್ಸ್
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 102ನೇ ಪಂದ್ಯದಲ್ಲಿ ಇಂದು ತಮಿಳ್ ತಲೈವಾಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಸೆಣಸಾಟ ನಡೆಸಲಿದ್ದು, ಸಂಜೆ 7.30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಇನ್ನು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 17 ಪಂದ್ಯಗಳನ್ನಾಡಿರುವ ಹರಿಯಾಣ ಸ್ಟೀಲರ್ಸ್ 8 ಪಂದ್ಯಗಳಲ್ಲಿ ಗೆದ್ದು, 6 ಪಂದ್ಯಗಳಲ್ಲಿ ಸೋತು, ಉಳಿದ 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಹರಿಯಾಣ ಸ್ಟೀಲರ್ಸ್ 53 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅತ್ತ 16 ಪಂದ್ಯಗಳನ್ನಾಡಿರುವ ತಮಿಳ್ ತಲೈವಾಸ್ 5 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳನ್ನು ಸೋತು, ಉಳಿದ 6 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 45 ಅಂಕಗಳನ್ನು ಪಡೆದುಕೊಂಡು ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಹೀಗೆ ಅಂಕಪಟ್ಟಿಯಲ್ಲಿ ಮಧ್ಯಮ ಸ್ಥಾನದಲ್ಲಿರುವ ಈ ಎರಡೂ ತಂಡಗಳು ಕೂಡ ಪ್ಲೇ ಆಫ್ ಪ್ರವೇಶಿಸಲು ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿವೆ. ತಮಿಳ್ ತಲೈವಾಸ್ ತನ್ನ ಕೊನೆಯ 3 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದರೆ, ಮತ್ತೊಂದು ಪಂದ್ಯದಲ್ಲಿ ಸೋತಿದೆ. ಅತ್ತ ತನ್ನ ಕಳೆದೆರಡು ಪಂದ್ಯಗಳಲ್ಲಿ ಗೆದ್ದಿರುವ ಹರಿಯಾಣ ಸ್ಟೀಲರ್ಸ್ ಗೆಲುವಿನ ನಾಗಾಲೋಟದಲ್ಲಿದೆ. ಇನ್ನು ತಮಿಳ್ ತಲೈವಾಸ್ ಮತ್ತು ಹರಿಯಾಣ ಸ್ಟೀಲರ್ಸ್ ಇದೇ ಆವೃತ್ತಿಯಲ್ಲಿ ಮುಖಾಮುಖಿಯಾಗಿದ್ದ ಮೊದಲನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ತಮಿಳ್ ತಲೈವಾಸ್ 45-26 ಅಂತರದಿಂದ ಗೆಲುವು ಸಾಧಿಸಿತ್ತು.
ತಮಿಳ್ ತಲೈವಾಸ್ ಸಂಭಾವ್ಯ ಆಡುವ ಬಳಗ: ಮಂಜೀತ್, ಸಾಗರ್ ರಾಥೀ, ಸುರ್ಜೀತ್ ಸಿಂಗ್, ಮೋಹಿತ್, ಭವಾನಿ ರಜಪೂತ್, ಅಜಿಂಕ್ಯ ಪವಾರ್, ಸಾಹಿಲ್ ಗುಲಿಯಾ.
ಹರಿಯಾಣ ಸ್ಟೀಲರ್ಸ್ ಸಂಭಾವ್ಯ ಆಡುವ ಬಳಗ: ವಿಕಾಶ್ ಖಂಡೋಲಾ, ಮೋಹಿತ್, ಜೈದೀಪ್, ಆಶಿಶ್, ಮೀಟೂ, ರವಿಕುಮಾರ್, ಅಕ್ಷಯ್.
ಪಂದ್ಯ 2: ಯು ಮುಂಬಾ vs ಪಾಟ್ನಾ ಪೈರೇಟ್ಸ್
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 103ನೇ ಪಂದ್ಯದಲ್ಲಿ ಇಂದು ಯು ಮುಂಬಾ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಾಟ ನಡೆಸಲಿದ್ದು, ರಾತ್ರಿ 8.30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಇನ್ನು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 16 ಪಂದ್ಯಗಳನ್ನಾಡಿರುವ ಪಾಟ್ನಾ ಪೈರೇಟ್ಸ್ 11 ಪಂದ್ಯಗಳಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತು, ಉಳಿದೊಂದು ಪಂದ್ಯವನ್ನು ಡ್ರಾ ಮಾಡಿಕೊಂಡು 60 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಅತ್ತ 16 ಪಂದ್ಯಗಳನ್ನಾಡಿರುವ ಯು ಮುಂಬಾ 6 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳನ್ನು ಸೋತು, ಉಳಿದ 5 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 48 ಅಂಕಗಳನ್ನು ಪಡೆದುಕೊಂಡು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಹೀಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ ಪ್ಲೇ ಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು ಮಧ್ಯಮ ಸ್ಥಾನದಲ್ಲಿರುವ ಯು ಮುಂಬಾ ಉಳಿದ ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಯು ಮುಂಬಾ ಸಂಭಾವ್ಯ ಆಡುವ ಬಳಗ: ಅಭಿಷೇಕ್ ಸಿಂಗ್, ವಿ. ಅಜಿತ್ ಕುಮಾರ್, ಹರೇಂದ್ರ ಕುಮಾರ್, ಫಜಲ್ ಅತ್ರಾಚಲಿ, ರಿಂಕು ಹಕ್, ಅಜಿಂಕ್ಯ ಕಡೇ, ರಾಹುಲ್ ಸೇಠಪಾಲ್.
ಪಾಟ್ನಾ ಪೈರೇಟ್ಸ್ ಸಂಭಾವ್ಯ ಆಡುವ ಬಳಗ: ಗುಮಾನ್ ಸಿಂಗ್, ಪ್ರಶಾಂತ್ ಕುಮಾರ್ ರೈ, ಸಚಿನ್ ತನ್ವರ್, ನೀರಜ್ ಕುಮಾರ್, ಸುನಿಲ್, ಸಜೀನ್, ಮೊಹಮ್ಮದ್ರೇಜಾ ಮಾರ್ಕ್.
ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.