
ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 116ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ ತೆಲುಗು ಟೈಟನ್ಸ್ ವಿರುದ್ಧ ಗೆದ್ದು ಬೀಗಿದೆ. ಎರಡನೇ ಪಂದ್ಯದಲ್ಲಿ ಯುಪಿ ಯೋಧಾ ತಂಡವು ದಬಾಂಗ್ ಡೆಲ್ಲಿ ವಿರುದ್ಧ ಅಬ್ಬರಿಸಿದ್ರೆ, ಪುಣೇರಿ ಪಲ್ಟನ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ಪಾಟ್ನಾ ಪೈರೇಟ್ಸ್ 21 ಪಾಯಿಂಟ್ಸ್ ಕಲೆಹಾಕಿದ್ರೆ, ತೆಲುಗು ಟೈಟನ್ಸ್ 20 ಪಾಯಿಂಟ್ಸ್ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲಿ ಸ್ವಲ್ಪ ಹೋರಾಟ ಪ್ರದರ್ಶಿಸಿದ ತೆಲುಗು ಟೈಟನ್ಸ್ 10 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರೆ, ಪಾಟ್ನಾ ಪೈರೇಟ್ಸ್ 17 ಪಾಯಿಂಟ್ಸ್ ಕಲೆಹಾಕಿ ಗೆದ್ದು ಬೀಗಿತು. ಅಂತಿಮವಾಗಿ ಪಾಟ್ನಾ ಪೈರೇಟ್ಸ್ 38-30 ಪಾಯಿಂಟ್ಸ್ ಅಂತರದಲ್ಲಿ ಪಂದ್ಯ ಗೆದ್ದು ಬೀಗಿತು.
ಪಾಟ್ನಾ ಪೈರೇಟ್ಸ್ ಪರ ಉತ್ತಮ ರೈಡಿಂಗ್ ಮಾಡಿದ ಸಚಿನ್ 14 ಪಾಯಿಂಟ್ಸ್‌ಗಳಿಸಿದ್ರು. ಇನ್ನು ತೆಲುಗು ಟೈಟನ್ಸ್ ಪರ ರಜನೀಶ್ 10 ಪಾಯಿಂಟ್ಸ್ ಕಲೆಹಾಕುವ ಮೂಲಕ ಮಿಂಚಿನ ಆಟವಾಡಿದ್ರು.
ಇಂದು ನಡೆದ ಎರಡನೇ ಪಂದ್ಯದಲ್ಲಿ ಯುಪಿ ಯೋಧಾ ಹಾಗೂ ದಬಾಂಗ್ ಡೆಲ್ಲಿ ಮುಖಾಮುಖಿಯಾದವು. ಮೊದಲಾರ್ಧದಲ್ಲಿ ಉಭಯ ತಂಡಗಳು 18-12 ಪಾಯಿಂಟ್ಸ್ ಮೂಲಕ ಮುಗಿಸಿದವು. ದ್ವಿತಿಯಾರ್ಧದಲ್ಲಿ ಮೇಲುಗೈ ಸಾಧಿಸಿದ ಯುಪಿ ಯೋಧಾ 26 ಪಾಯಿಂಟ್ಸ್ ಗಳಿಸಿದರೆ, ದಬಾಂಗ್ ಡೆಲ್ಲಿ 16 ಪಾಯಿಂಟ್ಸ್ ಪಡೆಯಿತು. ಅಂತಿಮವಾಗಿ ಯುಪಿ ಯೋಧಾ 44-28 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು.
ಇನ್ನು ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಪುಣೇರಿ ಪಲ್ಟನ್ ಮತ್ತು ಗುಜರಾತ್ ಟೈಟನ್ಸ್ ಕೊನೆಯ ನಿಮಿಷದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದವು. ಆದರೆ ಉಭಯ ತಂಡಗಳಿಗೂ ಗೆಲುವು ಲಭಿಸಲಿಲ್ಲ. ಪಂದ್ಯವು 31-31 ಪಾಯಿಂಟ್ಸ್ ಗಳ ಮೂಲಕ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.
ಈ ಪಂದ್ಯದ ಫಲಿತಾಂಶದ ಬಳಿಕವೂ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿಯೇ ಉಳಿದಿದ್ದು, 19 ಪಂದ್ಯಗಳಲ್ಲಿ 14 ಜಯಗಳಿಂದ ಒಟ್ಟು 75 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ 65 ಪಾಯಿಂಟ್ಸ್‌ನಿಂದ ಜಿಗಿತ ಕಂಡಿದ್ದು. ಯುಪಿ ಯೋಧಾ 63 ಪಾಯಿಂಟ್ಸ್ ಮೂಲಕ ಮೂರನೇ ಸ್ಥಾನಕ್ಕೆ ಏರಿಕೆಗೊಂಡಿದೆ. ಹರಿಯಾಣ ಸ್ಟೀಲರ್ಸ್ 63 ಪಾಯಿಂಟ್ಸ್ ಮೂಲಕ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.