10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 88ನೇ ಪಂದ್ಯದಲ್ಲಿ ತಮಿಳು ತಲೈವಾಸ್ 54-29 ರಿಂದ ತೆಲುಗು ಟೈಟನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಭರ್ಜರಿ ಪ್ರದರ್ಶನ ನೀಡಿರುವ ತಲೈವಾಸ್ ಆಡಿದ 15 ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು, 9 ಸೋಲು ಕಂಡಿದ್ದು 35 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಇನ್ನು ತೆಲುಗು ಟೈಟನ್ಸ್ ತಂಡದ ಮೂರನೇ ಗೆಲುವಿನ ಆಸೆ ಮಣ್ಣು ಪಾಲಾಗಿದೆ. ತೆಲುಗು 16 ಅಂಕಗಳಿಂದ ಕೊನೆಯ ಸ್ಥಾನದಲ್ಲಿದೆ.

ಮೊದಲಾವಧಿಯಲ್ಲಿ ತಮಿಳು ತಲೈವಾಸ್ ಯೋಜನಾ ಬದ್ಧ ಆಟವನ್ನು ಆಡಿತು. ಈ ಅವಧಿಯಲ್ಲಿ ತಮಿಳು ತಂಡದ ರಕ್ಷಣಾ ವಿಭಾಗದ ಆಟ ಮನಮೋಹಕವಾಗಿತ್ತು. ತಮಿಳಿನ ರಕ್ಷಣಾ ವಿಭಾಗದ ಆಟಗಾರರು ಈ ಅವಧಿಯಲ್ಲಿ 11 ಅಂಕಗಳನ್ನು ಬಾಚಿಕೊಂಡರು. ಈ ವೇಳೆ ದಾಳಿಯಲ್ಲಿ 7 ಅಂಕ ಅಂಕಗಳನ್ನು ಸೇರಿಸಿತು. ಈ ಅವಧಿಯಲ್ಲಿ ತಮಿಳು ತಲೈವಾಸ್ 20-11 ಅಂಕಗಳನ್ನೊಂದಿಗೆ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ತೆಲುಗು ಒಂದು ಬಾರಿ ಆಲೌಟ್ ಆಯಿತು.
ಎರಡನೇ ಅವಧಿಯಲ್ಲಿ ಪುಟಿದೇಳುವ ಸೂಚನೆಯ ಕನಸನ್ನು ಕಂಡಿದ್ದ ತೆಲುಗು ಟೈಟನ್ಸ್ ತಂಡಕ್ಕೆ ತಮಿಳು ತಲೈವಾಸ್ ಶಾಕ್ ನೀಡಿತು. ಈ ಅವಧಿಯಲ್ಲೂ ತಮಿಳು ಆರ್ಭಟ ನಡೆಸಿತು. ಈ ವೇಳೆ ತಲೈವಾಸ್ 34-18 ಅಂಕಗಳೊಂದಿಗೆ ಭರ್ಜರಿ ಮುನ್ನಡೆ ಸಾಧಿಸಿ, ಪೂರ್ಣ ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ತಮಿಳು ದಾಳಿಯಲ್ಲಿ 16, ಟ್ಯಾಕಲ್‌ನಲ್ಲಿ 13 ಅಂಕಗಳನ್ನು ಕಲೆ ಹಾಕಿತು. ಆದರೆ ತೆಲುಗು ಟೈಟನ್ಸ್ ತಂಡದ ರಕ್ಷಣಾ ವಿಭಾಗದ ಆಟ ಕೈ ಕೊಟ್ಟಿತು.
ತಮಿಳು ತಲೈವಾಸ್ ತಂಡ 33 ಬಾರಿ ಎದುರಾಳಿ ದಾಳಿಕಾರರನ್ನು ಮುಂದಾಗಿ, 21 ಅಂಕಗಳನ್ನು ಕಲೆ ಹಾಕಿತು. ಈ ವೇಳೆ ಸೂಪರ್ ಟ್ಯಾಕಲ್ ಮೂಲಕ ಮೂರು ಅಂಕಗಳನ್ನು ತಮಿಳು ತಲೈವಾಸ್ ಕಲೆ ಹಾಕಿತು.

ತಮಿಳು ತಲೈವಾಸ್ ಪರ ನರೇಂದ್ರ 10, ಅಜಿಂಕ್ಯ ಪವಾರ್ 11 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ರಕ್ಷಣಾವಿಭಾಗದಲ್ಲಿ ರೈಟ್ ಕಾರ್ನರ್ ಡಿಫೆಂಡರ್ ಸಾಗರ್ 8 ಅಂಕ ಸೇರಿಸಿದರು. ಇನ್ನು ತೆಲುಗು ತಂಡದ ಪರ ಪವನ್ ಶೆರಾವತ್ ಸೂಪರ್ 10 ದಾಖಲಿಸಿದರು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆಸಿ 35-32ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ದಬಾಂಗ್ ದೆಹಲಿ ಆಡಿದ 15 ಪಂದ್ಯಗಳಲ್ಲಿ 9 ಜಯ, 4 ಸೋಲು, 2 ಡ್ರಾ ಕಂಡಿದ್ದು, 54 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಸೋತರೂ 45 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ದಬಾಂಗ್ ದೆಹಲಿ ತಂಡದ ಪರ ಅಶು ಮಲಿಕ್ 14 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು.