ಏಷ್ಯನ್ ಗೇಮ್ಸ್ 1986, ಸಿಯೋಲ್ ಆತಿಥ್ಯ: 10ನೇ ಏಷ್ಯಾಡ್‌ನ ಪ್ರಮುಖ ಮಾಹಿತಿ
1986ರಲ್ಲಿ 10ನೇ ಏಷ್ಯನ್ ಗೇಮ್ಸ್ ಟೂರ್ನಿಯ ಆಯೋಜನೆಯಲ್ಲಿ ದಕ್ಷಿಣ ಕೊರಿಯಾ ವಹಿಸಿಕೊಂಡಿತ್ತು. ಸಿಯೋಲ್ ನಗರದಲ್ಲಿ ಆಯೋಜನೆಯಾದ ಈ ಕ್ರೀಡಾಕೂಟ 1986 ಸೆಪ್ಟೆಂಬರ್ 20ರಂದು ಉದ್ಘಾಟನೆಯಾಗಿದ್ದು ಅಕ್ಟೋಬರ್ 5ರಂದು ಅಂತ್ಯವಾಗಿತ್ತು. 1988ರಲ್ಲಿ ಸಿಯೋಲ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಿದ್ಧಪಡಿಸಿದ್ದ ತಾಣಗಳಲ್ಲಿಯೇ ಏಷ್ಯನ್ ಗೇಮ್ಸ್ ಕೂಡ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟವನ್ನು ಒಂದು ರೀತಿಯಲ್ಲಿ ಒಲಿಂಪಿಕ್ಸ್‌ಗೆ ಪೂರ್ವಸಿದ್ಧತೆಯ ರೀತಿಯಲ್ಲಿ ಬಳಸಿಕೊಳ್ಳಲಾಗಿತ್ತು.
22 ರಾಷ್ಟ್ರಗಳ 4839 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಒಟ್ಟು 25 ಕ್ರೀಡೆಗಳಿಗೆ ಸ್ಪರ್ಧೆಗಳು ನಡೆದವು. ಈ ಆವೃತ್ತಿಯಲ್ಲಿ ಸೈಕ್ಲಿಂಗ್, ಜುಡೋ, ಮಹಿಳಾ ಶೂಟಿಂಗ್ ಹಾಗೂ ಟೈಕ್ವಾಂಡೋ ಕ್ರೀಡೆಗಳು ಹೊಸದಾಗಿ ಸೇರ್ಪಡೆಯಾಗಿತ್ತು. ಜಪಾನಿನ ಹ್ಯಾಮರ್ ಥ್ರೋವರ್ ಶಿಗೆನೊಬು ಮುರೊಫುಶಿ ಸತತ ಐದನೇ ಬಾರಿಗೆ ಏಷ್ಯನ್ ಗೇಮ್ಸ್ ಚಿನ್ನವನ್ನು ಗೆದ್ದು ಹೊಸ ಇತಿಹಾಸ ಬರೆದಿದ್ದರು.

1986ರ ಸಿಯೋಲ್ ಏಷ್ಯನ್ ಗೇಮ್ಸ್‌ನಲ್ಲಿ ತಾರೆಯಾಗಿ ಮಿಂಚಿದ್ದು ಭಾರತದ ಪಿ ಟಿ ಉಷಾ. ಭಾರತದ ದಿಗ್ಗಜ ಅಥ್ಲೀಟ್ ನಾಲ್ಕು ಚಿನ್ನದ ಪದಕಗಳನ್ನು ಮತ್ತು ಒಂದು ಬೆಳ್ಳಿಯನ್ನು ಗೆದ್ದು ಕ್ರೀಡಾಕೂಟದಲ್ಲಿ ಅತ್ಯಂತ ಯಶಸ್ವಿ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎನಿಸಿಕೊಂಡಿದ್ದರು.
ಇನ್ನು ಅಂದಿನ ಹತ್ತು ಸಮಾಜವಾದಿ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಬ್ರೂನಿ, ಕಾಂಬೋಡಿಯಾ, ಲಾವೋಸ್, ಮಂಗೋಲಿಯಾ, ಮ್ಯಾನ್ಮಾರ್, ಉತ್ತರ ಕೊರಿಯಾ, ದಕ್ಷಿಣ ಯೆಮೆನ್, ಸಿರಿಯಾ ಮತ್ತು ವಿಯೆಟ್ನಾಂ - ರಾಜಕೀಯ ಉದ್ವಿಗ್ನತೆಯಿಂದಾಗಿ ಕ್ರೀಡಾಕೂಟವನ್ನು ಬಹಿಷ್ಕರಿಸಿದವು.
ಈ ಕ್ರೀಡಾಕೂಡದಲ್ಲಿ 94 ಚಿನ್ನ, 82 ಬೆಳ್ಳಿ ಮತ್ತು 46 ಕಂಚಿನೊಂದಿಗೆ ಚೀನಾ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. ಎರಡನೇ ಸ್ಥಾನವನ್ನು ಪಡೆದ ದಕ್ಷಿಣ ಕೊರಿಯಾ 93 ಚಿನ್ನ, 55 ಬೆಳ್ಳಿ ಹಾಗೂ 76 ಕಂಚಿನ ಪದಕ ಗೆದ್ದುಕೊಂಡಿತ್ತು. ಇನ್ನು ಜಪಾನ್ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
ಭಾರತ ಈ ಕ್ರೀಡಾಕೂಟದಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿತ್ತು. 5 ಚಿನ್ನದ ಪದಕ ಗೆದ್ದುಕೊಂಡಿದ್ದರೆ ಇದರಲ್ಲಿ 4 ಚಿನ್ನದ ಪದಕಗಳನ್ನು ಪಿಟಿ ಉಷಾ ಅವರೊಬ್ಬರೇ ಗೆದ್ದಿದ್ದರು. ಇನ್ನು 9 ಬೆಳ್ಳಿ ಹಾಗೂ 23 ಕಂಚಿನ ಪದಕಗಳನ್ನು ಭಾರತ ಗೆದ್ದು ಒಟ್ಟು 37 ಪದಕಗಳನ್ನು ತನ್ನದಾಗಿಸಿಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications