ಏಷ್ಯನ್ ಗೇಮ್ಸ್ 1994: 12ನೇ ಏಷ್ಯಾಡ್‌ಗೆ ಆತಿಥ್ಯವಹಿಸಿದ ಜಪಾನ್‌ನ ಹಿರೋಶಿಮಾ: ಪ್ರಮುಖ ಮಾಹಿತಿ
1994ರಲ್ಲಿ 12ನೇ ಏಷ್ಯನ್ ಗೇಮ್ಸ್ ಟೂರ್ನಿ ಜಪಾನ್‌ನ ಹಿರೊಶಿಮಾ ನಗರದಲ್ಲಿ ಆಯೋಜನೆಯಾಯಿತು. ಈ ಕ್ರೀಡಾಕೂಟದ ಮುಖ್ಯ ಧ್ಯೇಯವೆಂದರೆ ಶಾಂತಿ ಹಾಗೂ ಏಷ್ಯಾ ರಾಷ್ಟ್ರಗಳಲ್ಲಿ ಸಾಮರಸ್ಯವನ್ನು ಉತ್ತೇಜಿಸುವುದಾಗಿತ್ತು. ಅಲ್ಲದೆ ಇತಿಹಾಸದಲ್ಲೇ ಮೊದಲ ಬಾರಿಗೆ ಅಣುಬಾಂಬ್ ದಾಳಿಗೆ ತುತ್ತಾದ ನಗರವಾದ ಹಿರೊಶಿಮಾದಲ್ಲಿ 49 ವರ್ಷಗಳ ಬಳಿಕ ಈ ಕ್ರೀಡಾಕೂಟವನ್ನು ಆಯೋಜಿಸಿ ಜಾಗತಿಕ ಮಟ್ಟದಲ್ಲಿ ಜಪಾನ್ ಸಂದೇಶ ರವಾನಿಸಿತ್ತು.
1991ರಲ್ಲಿ ಕೊಲ್ಲಿ ಯುದ್ಧದ ಕಾರಣದಿಂದಾಗಿ ಇರಾಕನ್ನು ಈ ಕ್ರೀಡಾಕೂಟದಿಂದ ಅಮಾನತುಗೊಳಿಸಲಾಯಿತು. ಇನ್ನು ಸೋವಿಯತ್ ಒಕ್ಕೂಟದ ವಿಘಟನೆಯಾದ ಕಾರಣ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ದೇಶಗಳು ಏಷ್ಯನ್ ಗೇಮ್ಸ್‌ಗೆ ಹೊಸದಾಗಿ ಸೇರ್ಪಡೆಯಾದವು.

ಇನ್ನು ಈ ಆವೃತ್ತಿಯಲ್ಲಿ ಬರೊಬ್ಬರಿ 42 ರಾಷ್ಟ್ರಗಳ 6828 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಒಟ್ಟು 34 ಕ್ರೀಡೆಗಳಿಗೆ ಸ್ಪರ್ಧೆಗಳು ನಡೆದವು. ಈ ಆವೃತ್ತಿಯಲ್ಲಿ ಬೇಸ್‌ಬಾಲ್, ಕರಾಟೆ ಹಾಗೂ ಮಾಡರ್ನ್ ಪೆಂಟಾಥ್ಲನ್ ಕ್ರೀಡೆಗಳು ಹೊಸದಾಗಿ ಸೇರ್ಪಡೆಯಾಗಿತ್ತು. ಜಪಾನ್ ಚಕ್ರವರ್ತಿ ಅಕಿಹಿಟೋ ಹಿರೊಶಿಮಾದ ಖ್ಯಾತ ಆರ್ಚ್ ಬಳಿ ಅಧಿಕೃತವಾಗಿ ಚಾಲನೆ ನೀಡಿದರು.
ಈ ಕ್ರೀಡಾಕೂಡದಲ್ಲಿ ಕೂಡ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. 126 ಚಿನ್ನದ ಪದಕ ಪಡೆಯುವ ಮೂಲಕ ಕ್ರೀಡಾಕೂಟದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿತು. 83 ಬೆಳ್ಳಿ ಮತ್ತು 57 ಕಂಚಿನೊಂದಿಗೆ ಬರೊಬ್ಬರಿ 266 ಪದಕಗಳು ಚೀನಾ ಪಾಲಾಗಿತ್ತು. ಇನ್ನು ಎರಡನೇ ಸ್ಥಾನದಲ್ಲಿ ಜಪಾನ್ ಇದ್ದು 64 ಚಿನ್ನದ ಪದಕ 75 ಬೆಳ್ಳಿ ಪದಕ ಹಾಗೂ 64 ಕಂಚಿನ ಪದಕ ಗೆದ್ದುಕೊಂಡಿತ್ತು. ಇನ್ನು ದಕ್ಷಿಣ ಕೊರಿಯಾ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು.
ಇನ್ನು ಭಾರತ ಈ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕ ಗೆದ್ದುಕೊಂಡಿತ್ತು. ಅಲ್ಲದೆ 3 ಬೆಳ್ಳಿ ಪದಕ ಹಾಗೂ 16 ಕಂಚಿನ ಪದಕ ಗೆದ್ದು ಒಟ್ಟು 23 ಪದಕಗಳನ್ನು ಗಳಿಸಿತ್ತು. ಹಿಂದಿನ ಆವೃತ್ತಿಯಲ್ಲಿ ಟಾಪ್ 10ಕ್ಕಿಂತಲೂ ಕೆಳಕ್ಕೆ ಕುಸಿದಿದ್ದ ಭಾರತ ಅಂಕಪಟ್ಟಿಯಲ್ಲಿ ಈ ಬಾರಿ 8ನೇ ಸ್ಥಾನ ಪಡೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications