ಮೊದಲ ಎರಡನೆಯ ಏಷ್ಯನ್ ಗೇಮ್ಸ್‌ನ ಅದ್ಭುತ ಯಶಸ್ಸಿನ ಬಳಿಕ ಮೂರನೇ ಆವೃತ್ತಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಆತಿಥ್ಯವಹಿಸಿದ್ದು ಜಪಾನ್‌ನ ಟೋಕಿಯೋ ನಗರ. 1958ರಲ್ಲಿ ಈ ಕ್ರೀಡಾಕೂಟ ಅದ್ಧೂರಿಯಾಗಿ ಆಯೋಜನೆಯಿತು. 1958ರ ಮೇ 24ರಂದು ಆರಂಭವಾದ ಈ ಕ್ರೀಡಾಕೂಟ ಜೂನ್ 1ರಂದು ಸಮಾರೋಪಗೊಂಡಿತು.
ಈ ಬಾರಿ ಏಷ್ಯನ್ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ(ಎನ್‌ಒಸಿ) 20 ದೇಶಗಳ ಒಟ್ಟು 1820 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಒಟ್ಟು ಹದಿಮೂರು ವಿಭಿನ್ನ ಕ್ರೀಡೆಗಳ 97 ಸ್ಪರ್ಧೆಗಳಲ್ಲಿ ಈ ಕ್ರೀಡಾಪಟುಗಳು ಪದಕಕ್ಕಾಗಿ ಸೆಣೆಸಾಟ ನಡೆಸಿದ್ದರು. ಇದರಲ್ಲಿ ನಾಲ್ಕು ಒಲಿಂಪಿಕ್ಸ್‌ನಲ್ಲಿ ಇಲ್ಲದ ಕ್ರೀಡೆಗಳು ಕೂಡ ಸೇರಿದ್ದವು. ಅವೆಂದರೆ ಜೂಡೋ, ಟೇಬಲ್ ಟೆನಿಸ್, ಟೆನಿಸ್ ಹಾಗೂ ವಾಲಿಬಾಲ್.

ಟೋಕಿಯೋ 1958 ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು 24 ಮೇ 1958 ರಂದು ರಾಷ್ಟ್ರೀಯ ಒಲಿಂಪಿಕ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಅದ್ದೂರಿ ಸಮಾರಂಭದಲ್ಲಿ ಗಣ್ಯರು ಮತ್ತು ಅತಿಥಿಗಳು ಜಪಾನ್‌ನ ಚಕ್ರವರ್ತಿ ಹಿರೋಹಿಟೊ, ಕ್ರೌನ್ ಪ್ರಿನ್ಸ್ ಅಕಿಹಿಟೊ ಮತ್ತು ಇರಾನ್‌ನ ಶಾ ಮೊಹಮ್ಮದ್ ರೆಜಾ ಪಹ್ಲವಿ ಈ ಉದ್ಘಾಟನಾ ಸಮಾರಭದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಈ ಕಾರ್ಯಕ್ರಮಕ್ಕೆ ಸುಮಾರು 70,000 ಜನರು ನೇರವಾಗಿ ಸಾಕ್ಷಿಯಾಗಿದ್ದರು.
ಮೊದಲ ಎರಡು ಕ್ರೀಡಾಕೂಟಗಳಂತೆಯೇ ಜಪಾನ್ ಈ ಕ್ರೀಡಾಕೂಟದಲ್ಲಿಯೂ ಪದಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತು. ಬಹುತೇಕ ಏಕಪಕ್ಷೀಯವಾಗಿಯೇ ಈ ಕ್ರೀಡಾಕೂಟದಲ್ಲಿ ಪ್ರಭುತ್ವ ಸಾಧಿಸಿದ ಜಪಾನ್ 67 ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರೆ 41 ಬೆಳ್ಳಿ ಹಾಗೂ 30 ಕಂಚಿನ ಪದಕ ಗೆದ್ದುಕೊಂಡಿತ್ತು. ಎರಡನೇ ಸ್ಥಾನದಲ್ಲಿದ್ದ ಫಿಲಿಫೈನ್ಸ್ 8 ಚಿನ್ನದ ಪದಕ 19 ಬೆಳ್ಳಿ ಹಾಗೂ 21 ಕಂಚಿನ ಪದಕ ಗೆದ್ದುಕೊಂಡಿತ್ತು.
ಮೂರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದ್ದರೆ ಇರಾನ್ ನಾಲ್ಕು ಮತ್ತು ರಿಪಬ್ಲಿಕ್ ಆಫ್ ಚೀನಾ(ತೈವಾನ್) ಐದನೇ ಸ್ಥಾನವನ್ನು ಪಡೆದುಕೊಂಡಿತು. ಇನ್ನು ಭಾರತ ಈ ಬಾರಿ ಮತ್ತಷ್ಟು ಕುಸಿತ ಕಂಡು 7ನೇ ಸ್ಥಾನಕ್ಕೆ ಕುಸಿಯಿತು. ಪಾಕಿಸ್ತಾನ ಈ ಬಾರಿಯೂ ಭಾರತಕ್ಕಿಂತ ಒಂದು ಸ್ಥಾನಗಳ ಮುಂದಿತ್ತು. ಭಾರತ ಐದು ಚಿನ್ನ, ನಾಲ್ಕು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕವನ್ನು ಗೆದ್ದುಕೊಂಡಿತ್ತು.