ಸತತ 2ನೇ ಬಾರಿಗೆ ಬ್ಯಾಂಕಾಕ್‌ನಲ್ಲಿಯೇ ಏಷ್ಯನ್ ಗೇಮ್ಸ್ 1970: 6ನೇ ಏಷ್ಯನ್ ಗೇಮ್ಸ್‌ನ ಪ್ರಮುಖ ಮಾಹಿತಿ
ಐದನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನ ಆಯೋಜನೆಯ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದು ಥಾಯ್ಲೆಂಡ್ ಮುಂದಿನ 6ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಆಯೋಜನೆ ಮಾಡುವ ಅವಕಾಶವೂ ಅಚಾನಕ್‌ಆಗಿ ಬಂದಾಗ ಅದನ್ನು ಕೂಡ ದಿಟ್ಟತನದಿಂದ ಆಯೋಜನೆ ಮಾಡುವ ಧೈರ್ಯ ಮಾಡಿ ಯಶಸ್ವಿಯಾಗಿತ್ತು. ಅಂದಹಾಗೆ 6ನೇ ಆವೃತ್ತಿಯ ಆಯೋಜನೆಯ ಆತಿಥ್ಯವನ್ನು ಮೂಲವಾಗಿ ದಕ್ಷಿಣ ಕೊರಿಯಾದ ಸಿಯೋಲ್ ವಹಿಸಿಕೊಳ್ಳಬೇಕಾಗಿತ್ತು. ಆದರೆ ಆರ್ಥಿಕ ಕಾರಣ ಹಾಗೂ ಉತ್ತರ ಕೊರಿಯಾದಿಂದ ಭದ್ರತಾ ಬೆದರಿಕೆಯ ಕಾರಣದಿಂದಾಗಿ ದಕ್ಷಿಣ ಕೊರಿಯಾ ಹಿಂದಕ್ಕೆ ಸರಿದಿತ್ತು.
1970ರ ಡಿಸೆಂಬರ್ 9ರಂದು ಆರಂಭವಾದ ಈ ಕ್ರೀಡಾಕೂಟ 20ರಂದು ಸಮಾರೋಪಗೊಂಡಿತು. ದಕ್ಷಿಣ ಕೊರಿಯಾ ಮೇಲಿನ ಎರಡು ಕಾರಣಗಳನ್ನು ನೀಡಿ ಏಷ್ಯನ್ ಗೇಮ್ಸ್ ಆಯೋಜನೆಯಿಂದ ಹಿಂದಕ್ಕೆ ಸರಿದಾಗ ಹಿಂದಿನ ಆವೃತ್ತಿಯ ಏಷ್ಯನ್ ಗೇಮ್ಸ್ ಆಯೊಜನೆ ಮಾಡಿದ್ದ ಥಾಯ್ಲೆಂಡ್ ಕ್ರೀಡಾಕೂಟವನ್ನು ಕಾಪಾಡುವ ದೃಷ್ಟಿಯಿಂದ ತಾನೇ ಆಯೋಜಿಸುವುದಾಗಿ ಮುಂದೆಬಂದಿತ್ತು.

ಈ ಬಾರಿ ಏಷ್ಯನ್ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ(ಎನ್‌ಒಸಿ) 18 ದೇಶಗಳ ಒಟ್ಟು 2400ರಷ್ಟು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಒಟ್ಟು ಹದಿಮೂರು ವಿಭಿನ್ನ ಕ್ರೀಡೆಗಳ 135 ಸ್ಪರ್ಧೆಗಳಲ್ಲಿ ಈ ಕ್ರೀಡಾಪಟುಗಳು ಪದಕಕ್ಕಾಗಿ ಸೆಣೆಸಾಟ ನಡೆಸಿದ್ದರು. ಬ್ಯಾಂಕಾಕ್‌ನ ರಾಷ್ಟ್ರೀಯ ಕ್ರೀಡಾಂಗಣ ಈ ಕ್ರೀಡಾಕೂಟದ ಮುಖ್ಯ ತಾಣವಾಗಿತ್ತು. ಥಾಯ್ಲೆಂಡ್‌ನ ಅಂದಿನ ರಾಜ ಭೂಮಿಬೋಲ್ ಅದುಲ್ಯದೇಜ್ ಈ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು.
ಇನ್ನು ಈ ಬಾರಿಯ 6ನೇ ಏಷ್ಯಾಡ್‌ನಲ್ಲಿಯೂ ಈ ಹಿಂದಿನ ಕ್ರೀಡಾಕೂಟಗಳಂತೆ ಜಪಾನ್ ಪಾರುಪತ್ಯ ಮುಂದುವರಿಯಿತು. ಈ ಬಾರಿ ಜಪಾನ್ ಒಟ್ಟು 74 ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ 47 ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿತ್ತು. ಮತ್ತು 23 ಕಂಚಿನ ಪದಕಗಳು ಆ ದೇಶದ ಪಾಲಾಗಿದ್ದು ಈ ಮೂಲಕ ಒಟ್ಟು 144 ಪದಕಗಳನ್ನು ಜಪಾನ್ ತನ್ನದಾಗಿಸಿಕೊಂಡಿತ್ತು.
ಇನ್ನು ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದ್ದು 18 ಚಿನ್ನ 13 ಬೆಳ್ಳಿ ಹಾಗೂ 23 ಕಂಚಿನ ಪದಕ ಗೆದ್ದುಕೊಂಡಿತ್ತು. ಮೂರನೇ ಸ್ಥಾನದಲ್ಲಿ ಥಾಯ್ಲೆಂಡ್, ನಾಲ್ಕನೇ ಸ್ಥಾನದಲ್ಲಿ ಇರಾನ್ ಇದ್ದರೆ ಭಾರತ ಈ ಬಾರಿಯೂ ಐದನೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ಕ್ರೀಡಾಕೂಡದಲ್ಲಿ ಭಾರತ 6 ಚಿನ್ನದ ಪದಕ ಗೆದ್ದಿದ್ದರೆ 9 ಬೆಳ್ಳಿ ಹಾಗೂ 10 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications