5ನೇ ಮತ್ತು 6ನೇ ಏಷ್ಯನ್ ಗೇಮ್ಸ್‌ನ ಆತಿಥ್ಯವನ್ನು ಸತತವಾಗಿ ವಹಿಸಿಕೊಂಡಿದ್ದ ಥಾಯ್ಲೆಂಡ್‌ನ ಬ್ಯಾಂಕಾಕ್ ನಗರ 8ನೇ ಏಷ್ಯನ್ ಗೇಮ್ಸ್ ಆಯೋಜನೆ ಮಾಡುವ ಸವಾಲನ್ನು ಕೂಡ ಸ್ವೀಕರಿಸಿತ್ತು. ಮೂಲತಃ 1978ರ ಈ ಏಷ್ಯನ್ ಗೇಮ್ಸ್ ಸಿಂಗಪೂರ್‌ನಲ್ಲಿ ಆಯೋಜನೆಯಾಗಬೇಕಾಗಿತ್ತು. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಆಯೋಜನೆಯಿಂದ ಹಿಂದಕ್ಕೆ ಸರಿದಿತ್ತು.
ಅದಾದ ಬಳಿಕ ಪಾಕಿಸ್ತಾನದ ಇಸ್ಲಾಮಬಾದ್ ಈ ಕ್ರೀಡಾಕೂಟದ ಆಯೋಜನೆಗೆ ಮುಂದೆ ಬಂದಿತ್ತು. ಆದರೆ ಭಾರತ ಹಾಗೂ ಬಾಂಗ್ಲಾದೇಶ ಜೊತೆಗಿನ ಸಂಘರ್ಷದ ಕಾರಣದಿಂದಾಗಿ ಪಾಕಿಸ್ಥಾನ ಕೂಡ ಹಿಂದಕ್ಕೆ ಸರಿದಿತ್ತು. ಈ ಸಂದರ್ಭದಲ್ಲಿ ಏಷ್ಯನ್ ಗೇಮ್ಸ್‌ಗೆ ಮತ್ತೊಮ್ಮೆ ಆಪತ್ಭಾಂಧವನಾಗಿ ಮುಂದೆ ಬಂದಿದ್ದು ಥಾಯ್ಲೆಂಡ್. ಹೀಗಾಗಿ ಬ್ಯಾಂಕಾಕ್ ಮತ್ತೊಮ್ಮೆ ಏಷ್ಯನ್ ಗೇಮ್ಸ್ ಆಯೋಜನೆ ಮಾಡುವ ಸವಾಲು ಪಡೆದುಕೊಂಡಿತು.

ರಾಜಕೀಯ ಕಾರಣಗಳಿಂದಾಗಿ ಇಸ್ರೇಲ್ ಈ ಕ್ರೀಡಾಕೂಟದಿಂದ ಹಿಂದಕ್ಕೆ ಸರಿದಿತ್ತು. 25 ದೇಶಗಳಿಂದ 3842 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದರು. ಆರ್ಚರಿ ಹಾಗೂ ಬೌಲಿಂಗ್ ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. 1978ರ ಡಿಸೆಂಬರ್ 9ರಂದು ಆರಂಭವಾದ ಈ ಕ್ರೀಡಾಕೂಟ 20ರಂದು ಸಮಾರೋಪ ಕಂಡಿತು.
ಇನ್ನು 8ನೇ ಏಷ್ಯಾಡ್‌ನಲ್ಲಿಯೂ ಈ ಹಿಂದಿನ ಕ್ರೀಡಾಕೂಟಗಳಂತೆ ಜಪಾನ್ ಪಾರುಪತ್ಯ ಮುಂದುವರಿಯಿತು. ಈ ಬಾರಿ ಜಪಾನ್ ಒಟ್ಟು 70 ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ 59 ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿತ್ತು, 49 ಕಂಚಿನ ಪದಕಗಳು ಆ ದೇಶದ ಪಾಲಾಗಿದ್ದು ಈ ಮೂಲಕ ಒಟ್ಟು 178 ಪದಕಗಳನ್ನು ಜಪಾನ್ ತನ್ನದಾಗಿಸಿಕೊಂಡಿತ್ತು. ಇನ್ನು ಚೀನಾ ಎರಡನೇ ಸ್ಥಾನದಲ್ಲಿದ್ದು 51 ಚಿನ್ನ 54 ಬೆಳ್ಳಿ ಹಾಗೂ 46 ಕಂಚಿನ ಪದಕ ಗೆದ್ದುಕೊಂಡಿತು.
ಇನ್ನು ಭಾರತ ಈ ಕ್ರೀಡಾಕೂಟದ ಪದಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿತು. 11 ಚಿನ್ನದ ಪದಕವನ್ನು ಗೆದ್ದ ಭಾರತ 11 ಬೆಳ್ಳಿ ಹಾಗೂ 6 ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಿತ್ತು. ಈ ಮೂಲಕ ಒಟ್ಟು 28 ಪದಕವನ್ನು ಭಾರತ ಗೆದ್ದುಕೊಂಡಿತ್ತು.