
ಜಕಾರ್ತಾ, ಆಗಸ್ಟ್ 21: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಪಟ್ಟಿಗೆ ಮತ್ತೊಂದು ಪದಕ ಸೇರ್ಪಡೆಗೊಂಡಿದೆ. ಭಾರತದ ಮಹಿಳಾ ಕುಸ್ತಿಪಟು ದಿವ್ಯಾ ಕಕ್ರನ್ ಅವರು 68 ಕೆಜಿ ಫ್ರೀ-ಸ್ಟೈಲ್ ಕುಸ್ತಿಯಲ್ಲಿ ಕಂಚು ಜಯಿಸಿದ್ದಾರೆ. ಇಲ್ಲಿಗೆ ಭಾರತದ ಪದಕ ಖಾತೆಯಲ್ಲಿ ಒಟ್ಟಿಗೆ 10 ಪದಕಗಳು ಸೇರ್ಪಡೆಗೊಂಡಂತಾಗಿವೆ.
ಮಂಗಳವಾರ (ಆಗಸ್ಟ್ 21) ಕಂಚಿನ ಪದಕಕ್ಕಾಗಿ ನಡೆದ ಟೆಕ್ನಿಕಲ್ ಸುಪೀರಿಯರ್ ಕುಸ್ತಿ ಸ್ಪರ್ಧೆಯಲ್ಲಿ ದಿವ್ಯಾ ಅವರು ಚೈನೀಸ್ ತೈಪೆಯ ಚೆನ್ ವೆನ್ಲಿಂಗ್ ಅವರನ್ನು 10-0ಯಿಂದ ಕೆಡವಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಇದೇ ದಿನ ಶೂಟರ್ ಸೌರಭ್ ಚೌಧರಿ ಅವರು 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಭಾರತ ಮಿಂಚುವಂತೆ ನೋಡಿಕೊಂಡಿದ್ದರು.
ಸ್ಪರ್ಧೆ ಆರಂಭಗೊಂಡ ಆಗಸ್ಟ್ 19ರಂದು ಶೂಟಿಂಗ್ ವಿಭಾಗದಲ್ಲಿ ಅಪೂರ್ವಿ ಚಾಂದೇಲ ಮತ್ತು ರವಿಕುಮಾರ್ ಜೋಡಿ 10 ಮೀ. ಏರ್ ರೈಫಲ್ ನಲ್ಲಿ ಕಂಚಿನೊಂದಿಗೆ ಪದಕ ಖಾತೆ ತೆರೆದಿದ್ದರು. ಆನಂತರದಿಂದ ಭಾರತದ ಪದಕ ಬೇಟಿ ಶುರುವಾಗಿತ್ತು.