1964ರ ಜೂನ್ 27ರಂದು ಕೇರಳದ ಕೋಝಿಕ್ಕೋಡ್‌ನ ಕುಥಾಲಿಯಲ್ಲಿ ಜನಿಸಿದ ಪಿಲಾವುಲ್ಲಕಂಡಿ ತೆಕ್ಕೇರಪರಂಬಿಲ್ ಉಷಾ ಓರ್ವ ನಿವೃತ್ತ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್. ಭಾರತೀಯ ಕ್ರೀಡಾ ಇತಿಹಾಸದಲ್ಲಿ "ಚಿನ್ನದ ರಾಣಿ ಪಿಟಿ ಉಷಾ' ಎಂದೇ ಚಿರಪರಿಚಿತರಾಗಿದ್ದಾರೆ.
ಪಿಟಿ ಉಷಾ 1979ರಿಂದ ಭಾರತೀಯ ಅಥ್ಲೆಟಿಕ್ಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಏಷ್ನ್ ಗೇಮ್ಸ್‌ನಲ್ಲಿ 4 ಚಿನ್ನ ಮತ್ತು 7 ಬೆಳ್ಳಿ ಪದಕಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಸದ್ಯ ಪಿಟಿ ಉಷಾ ಅವರು ಡಿಸೆಂಬರ್ 2022ರಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಏಷ್ಯನ್ ಗೇಮ್ಸ್‌ನ ನಾಲ್ಕು ಆವೃತ್ತಿಗಳಲ್ಲಿ ಭಾಗವಹಿಸಿರುವ ಪಿಟಿ ಉಷಾ ಅವರು 11 ಪದಕಗಳನ್ನು ಗೆದ್ದಿದ್ದು, ಅದರ ಏಷ್ಯನ್ ಗೇಮ್ಸ್ ವೃತ್ತಿಜೀವನದ ಟೈಮ್‌ಲೈನ್ ಇಲ್ಲಿದೆ.

1982ರ ಏಷ್ಯನ್ ಗೇಮ್ಸ್ ಭಾರತದ ಇತಿಹಾಸದಲ್ಲಿ ಹಲವು ಕಾರಣಗಳಿಂದ ಒಂದು ದೊಡ್ಡ ಹೆಗ್ಗುರುತಾಗಿದೆ. ಇದರಲ್ಲಿ ಪಿಟಿ ಉಷಾ ಅವರ ಮೊದಲ ಏಷ್ಯನ್ ಗೇಮ್ಸ್ ಪದಕಗಳು ಸೇರಿವೆ.
ಆಗ 18ರ ಹರೆಯದ ಪಿಟಿ ಉಷಾ 100 ಮೀಟರ್ ಓಟದಲ್ಲಿ 11.95 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದರು. 11.76 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಫಿಲಿಪೈನ್ಸ್‌ನ ಲಿಡಿಯಾ ಡಿ ವೇಗಾ ಚಿನ್ನ ಗೆದ್ದಿದ್ದರು.
ಪಿಟಿ ಉಷಾ 200 ಮೀಟರ್ ಓಟದಲ್ಲಿ 24.32 ಸೆಕೆಂಡುಗಳಲ್ಲಿ ಗುರಿ ತಲುಪಿ ಮತ್ತೊಂದು ಬೆಳ್ಳಿ ಗೆದ್ದರು. ಜಪಾನ್‌ನ ಹಿರೋಮಿ ಇಸೊಜಾಕಿ 24.22 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿದ್ದರು.
1985ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಎಲ್ಲಾ ವೈಯಕ್ತಿಕ ಸ್ಪರ್ಧೆಗಳಲ್ಲಿ ಚಿನ್ನವನ್ನು ಗೆದ್ದಿರುವ ಪಿಟಿ ಉಷಾ ತನ್ನ ಎರಡನೇ ಏಷ್ಯನ್ ಗೇಮ್ಸ್‌ಗೆ ಅತ್ಯುತ್ತಮ ರೂಪದಲ್ಲಿ ಬಂದರು. ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆದ 1986ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಓಟ ಮುಂದುವರೆಯಿತು.
ಭಾರತೀಯ ಜಿಂಕೆ ಪಿಟಿ ಉಷಾ ಅವರು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿಯನ್ನು ಗೆಲ್ಲುವ ಮೂಲಕ ಸಿಯೋಲ್ ಏಷ್ಯನ್ ಗೇಮ್ಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಪದಕಗಳನ್ನು ಗೆದ್ದ ದಾಖಲೆ ಬರೆದರು.
ಪಿಟಿ ಉಷಾ 200ಮೀ, 400ಮೀ, 400ಮೀ ಹರ್ಡಲ್ಸ್ ಮತ್ತು 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ಎಲ್ಲಾ ಸ್ಪರ್ಧೆಗಳಲ್ಲಿ ಹೊಸ ಏಷ್ಯನ್ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು. ಭಾರತ 400 ಮೀಟರ್‌ನಲ್ಲಿ ಶೈನಿ ಅಬ್ರಹಾಂ ಅವರೊಂದಿಗೆ ಮೊದಲೆರಡು ಸ್ಥಾನ ಗಳಿಸಿತ್ತು.
ದೀರ್ಘ ಕಾಲದ ಪ್ರತಿಸ್ಪರ್ಧಿ ಲಿಡಿಯಾ ಡಿ ವೇಗಾ ಏಷ್ಯನ್ ಗೇಮ್ಸ್ ಚಿನ್ನದ ಪದಕ ಉಳಿಸಿಕೊಂಡಿದ್ದರಿಂದ, ಕೇರಳದ ಪಿಟಿ ಉಷಾ 100 ಮೀಟರ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

1986 ಮತ್ತು 1990ರ ಏಷ್ಯನ್ ಕ್ರೀಡಾಕೂಟಗಳ ನಡುವಿನ ವರ್ಷಗಳು ಪಿಟಿ ಉಷಾ ಅವರಿಗೆ ಏರಿಳಿತಗಳಿಂದ ತುಂಬಿದ್ದವು. ಸಿಯೋಲ್ 1988ರ ಒಲಂಪಿಕ್ಸ್ ಸಮಯದಲ್ಲಿ ಉಷಾ ತಮ್ಮ ಪಾದದ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಫೈನಲ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.
ಪಿಟಿ ಉಷಾ 1989ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆಲ್ಲುವ ಮೊದಲು ತಮ್ಮ ಶೂಗಳನ್ನು ನೇತುಹಾಕಿದ್ದರು. ಆದರೆ ಪಯ್ಯೋಲಿ ಎಕ್ಸ್‌ಪ್ರೆಸ್ 1990ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ಗಾಗಿ ಟ್ರ್ಯಾಕ್‌ಗೆ ಮರಳಿದಳು.
ಗಾಯಗಳು ಮತ್ತು ವಯಸ್ಸಿನ ನಡುವೆಯೂ ಪಿಟಿ ಉಷಾ ಅವರು 400 ಮೀ, 4x100 ಮೀಟರ್ ರಿಲೇ ಮತ್ತು 4x400 ಮೀ ರಿಲೇಯಲ್ಲಿ ಮೂರು ಬೆಳ್ಳಿ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಜಪಾನ್‌ನ ಹಿರೋಷಿಮಾದಲ್ಲಿ ನಡೆದ 1994ರ ಏಷ್ಯನ್ ಗೇಮ್ಸ್ ವೇಳೆಗಾಗಲೇ ಪಿಟಿ ಉಷಾ ಈಗಾಗಲೇ ಟ್ರ್ಯಾಕ್ ಮತ್ತು ಫೀಲ್ಡ್ ಲೆಜೆಂಡ್ ಓಟಗಾತಿಯಾಗಿದ್ದರು.
ಭಾರತದ ತಾರೆ ಪಿಟಿ ಉಷಾ ಅವರು ಜಿವಿ ಧನಲಕ್ಷ್ಮಿ, ಶೈನಿ ವಿಲ್ಸನ್ ಮತ್ತು ಕುಟ್ಟಿ ಸಾರಮ್ಮ ಅವರೊಂದಿಗೆ 4x400 ಮೀಟರ್ ರಿಲೇಯಲ್ಲಿ ಮತ್ತೊಂದು ಬೆಳ್ಳಿಯನ್ನು ಸೇರಿಸಿದರು. ಪಿಟಿ ಉಷಾ ಸುಪ್ರಸಿದ್ಧ ಏಷ್ಯನ್ ಗೇಮ್ಸ್ ವೃತ್ತಿಜೀವನವು 11 ಪದಕಗಳನ್ನು ಒಳಗೊಂಡಿತ್ತು ಹಾಗೂ ಅತ್ಯಂತ ಯಶಸ್ವಿ ಭಾರತೀಯ ಅಥ್ಲೀಟ್ ಎನಿಸಿದರು.
ಪಿಟಿ ಉಷಾ ಅವರು 1998ರ ಆವೃತ್ತಿಯಲ್ಲಿ ಸ್ಪರ್ಧಿಸಿದರು, ಆದರೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. 4x100 ಮೀಟರ್ ರಿಲೇಯಲ್ಲಿ ನಾಲ್ಕನೇ ಮತ್ತು 200 ಮೀಟರ್ ಓಟದಲ್ಲಿ ಆರನೇ ಸ್ಥಾನ ಪಡೆದರು.