Asian Games 2023: ಸೆ.23ರಂದು ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಇವರೇ ಭಾರತದ ಧ್ವಜಧಾರಿಗಳು!
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ 2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಸೆಪ್ಟೆಂಬರ್ 23ರಂದು ಅದ್ಧೂರಿ ಚಾಲನೆ ಸಿಗಲಿದೆ. ಉದ್ಘಾಟನಾ ಸಮಾರಂಭದ ಮೂಲಕ ಅಧಿಕೃತವಾಗಿ ಆರಂಭವಾಗಲಿದ್ದು, ಅಕ್ಟೋಬರ್ 8ರವರೆಗೆ ನಡೆಯಲಿದೆ.
ಇನ್ನು ಶನಿವಾರ, ಸೆಪ್ಟೆಂಬರ್ 23ರಂದು ಹ್ಯಾಂಗ್‌ಝೌನಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಭಾರತ ನಿಯೋಗದ ಧ್ವಜಧಾರಿಗಳಾಗಲಿದ್ದಾರೆ.
ಏಷ್ಯನ್ ಪಂದ್ಯಾವಳಿಗಾಗಿ ಜಂಟಿ ಧ್ವಜಧಾರಿಗಳನ್ನು ಹೊಂದಲು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಬುಧವಾರ ನಿರ್ಧಾರ ಕೈಗೊಂಡಿದೆ. ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 655 ಭಾರತೀಯ ಅಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದಾರೆ, ಇದು ಇದುವರೆಗಿನ ಅತಿದೊಡ್ಡ ತುಕಡಿಯಾಗಿದೆ ಎಂಬುದು ಗಮನಾರ್ಹ.

"ನಾವು ಇಂದು ಹೆಚ್ಚಿನ ಚರ್ಚೆಯ ನಂತರ ಜಂಟಿ ಧ್ವಜಧಾರಿಗಳನ್ನು ಹೊಂದುವ ನಿರ್ಧಾರಕ್ಕೆ ಬಂದಿದ್ದೇವೆ," ಎಂದು ಭಾರತೀಯ ಮಿಷನ್ ಚೀಫ್ ಭೂಪೇಂದರ್ ಸಿಂಗ್ ಬಾಜ್ವಾ ಪಿಟಿಐಗೆ ತಿಳಿಸಿದರು.
"ಈ ಬಾರಿ ನಾವು ಏಷ್ಯನ್ ಗೇಮ್ಸ್‌ನಲ್ಲಿ ಇಬ್ಬರು ಧ್ವಜಧಾರಿಗಳನ್ನು ಮುನ್ನಡೆಸುತ್ತೇವೆ. ಹಾಕಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್," ಎಂದು ವುಶು ಅಸೋಸಿಯೇಷನ್ ಆಫ್ ಇಂಡಿಯಾ ಮುಖ್ಯಸ್ಥರೂ ಆಗಿರುವ ಭೂಪೇಂದರ್ ಸಿಂಗ್ ಬಜ್ವಾ ಹೇಳಿದರು.
2018ರ ಜಕಾರ್ತಾ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಧ್ವಜಧಾರಿಯಾಗಿ ಮುನ್ನಡೆಸಿದ್ದರು.

ಟೊಕಿಯೋ ಒಲಿಂಪಿಕ್ಸ್‌ನಲ್ಲಿ 69 ಕೆಜಿ ವಿಭಾಗದಲ್ಲಿ ಲೊವ್ಲಿನಾ ಕಂಚಿನ ಪದಕ ಗೆದ್ದಿದ್ದರು. ಈ ವರ್ಷ ನವದೆಹಲಿಯಲ್ಲಿ ನಡೆದ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಲೊವ್ಲಿನಾ 75 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಹರ್ಮನ್‌ಪ್ರೀತ್ ಸಿಂಗ್ ವಿಶ್ವದ ಅತ್ಯುತ್ತಮ ಡ್ರ್ಯಾಗ್-ಫ್ಲಿಕ್ಕರ್‌ಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ತಂಡದ ಭಾಗವಾಗಿದ್ದರು. ಒಲಿಂಪಿಕ್ಸ್‌ನಲ್ಲಿ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಭಾರತೀಯ ಹಾಕಿ ತಂಡದ ಪದಕದ ಬರವನ್ನು ಕೊನೆಗೊಳಿಸಿದರು.
2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ನೇರ ಅರ್ಹತೆ ಪಡೆಯಲು ಭಾರತೀಯ ಪುರುಷರ ಹಾಕಿ ತಂಡವು ಚೀನಾದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭೂಪೇಂದರ್ ಸಿಂಗ್ ಬಜ್ವಾ ಅವರಿಗೆ ನಾಲ್ವರು ಸಹಾಯಕರು ಇರಲಿದ್ದಾರೆ. ಏಕೆಂದರೆ ಈ ಕೆಲಸವು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದೆ. ಬಾಜ್ವಾ ಅವರು ಕುಸ್ತಿಗಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ರಚಿಸಲಾದ ತಾತ್ಕಾಲಿಕ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications