ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ವಾಲಿಬಾಲ್ ತಂಡದ ಅಬ್ಬರದ ಪ್ರದರ್ಶನ ಮುಂದುವರಿದಿದ್ದು ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದಿದೆ. ಹ್ಯಾಂಗ್‌ಝೂನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಇಂದು 12ರ ಹಂತದ ಪಂದ್ಯದಲ್ಲಿ ಭಾರತ ವಾಲಿಬಾಲ್ ತಂಡ ತೈವಾನ್ ಪಡೆಯನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಭಾರತ 3-0 ಅಂತರದಿಂದ ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
ಈ ಸೆಣೆಸಾಟದಲ್ಲಿ ಭಾರತ ತಂಡ ಅತ್ಯದ್ಭುತ ಹೋರಾಟವನ್ನು ಪ್ರದರ್ಶಿಸಿತು. ಆರಂಭದಲ್ಲಿ ಮೊಲ ಸೆಟ್‌ನ ಹಿನ್ನಡೆಯಿಂದ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಭಾರತ ತಂಡ ಅಂತಿಮವಾಗಿ ಪಂದ್ಯವನ್ನು ಗೆದ್ದುಕೊಂಡಿದೆ. ಒಂದು ಗಂಟೆ 25 ನಿಮಿಷಗಳಲ್ಲಿ 25-22, 25-22, 25-21 ಸ್ಕೋರ್‌ಲೈನ್‌ನೊಂದಿಗೆ 3-0 ಅಂತರದಿಂದ ಪಂದ್ಯದಲ್ಲಿ ಗೆಲುವು ಸಾಧಿಸಿತು.

ಈ ಪಂದ್ಯದಲ್ಲಿ ಅಮಿತ್ 16 ಅಂಕಗಳನ್ನು ಪಡೆದು ಭಾರತದ ಪರವಾಗಿ ಅತಿ ಹೆಚ್ಚು ಅಂಕಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಕರ್ನಾಟಕದ ಅಶ್ವಲ್ ರೈ 14 ಅಂಕಗಳನ್ನು ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇನ್ನು ವಿನಿತ್ ಕುಮಾರ್ 12 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಈ ಗೆಲುವಿನೊಂದಿಗೆ ಭಾರತ ತಂಡ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಭಾರತಕ್ಕೆ ಜಪಾನ್ ತಂಡ ಎದುರಾಳಿಯಾಗಿರಲಿದ್ದು ಸೆಪ್ಟೆಂಬರ್ 24ರಂದು ಈ ಪಂದ್ಯ ನಡೆಯಲಿದೆ. ಭಾರತದ ಆಟಗಾರರು ನೀಡುತ್ತಿರುವ ಸಂಘಟನಾತ್ಮಕ ಪ್ರದರ್ಶನದಿಂದಾಗಿ ಈ ಕ್ರೀಡಾಕೂಟದಲ್ಲಿ ವಾಲಿಬಾಲ್ ತಂಡ ನಿರೀಕ್ಷೆ ಹೆಚ್ಚಿಸಿದೆ.
ಇನ್ನು ಇದಕ್ಕೂ ಹಿಂದಿನ ಪಂದ್ಯದಲ್ಲಿ ಭಾರತ ವಾಲಿಬಾಲ್ ತಂಡ ಕಳೆದ ಬಾರಿಯ ಬೆಳ್ಳಿ ಪದಕ ವಿಜೇತ ತಂಡ ದಕ್ಷಿಣ ಕೊರಿಯಾವನ್ನು ಭಾರತ ಮಣಿಸಿದ್ದು ರೋಚಕ ಗೆಲುವು ಸಾಧಿಸಿತ್ತು. ಐದು ಸೆಟ್‌ಗಳ ರೋಚಕ ಕದನದಲ್ಲಿ ಗೆಲುವು ಸಾಧಿಸಿದ ಭಾರತ ತಂಡ ನಾಕೌಟ್‌ಗೆ ಪ್ರವೇಶ ಪಡೆದುಕೊಂಡಿತ್ತು. ಎರಡು ಗಂಟೆ 38 ನಿಮಿಷಗಳ ಕಾಲ ನಡೆದ ಸಿ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ 3-2 (25-27, 29-27, 25-22, 20-25, 17-15) ಅಂತರದದಿಂದ ಗೆಲುವು ಸಾಧಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಕಾಂಬೋಡಿಯಾವನ್ನು 3-0 ಗೋಲುಗಳಿಂದ ಸೋಲಿಸಿದ್ದ ಭಾರತ ಐದು ಅಂಕ ಕಲೆಹಾಕಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.