ಶನಿವಾರ ಚೀನಾದ ಹ್ಯಾಂಗ್‌ಝೌನಲ್ಲಿ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಅಧಿಕೃತವಾಗಿ ಆರಂಭವಾಗಲಿದೆ. ಆದರೆ ಈ ಕ್ರೀಡಾಕೂಟದ ಆರಂಭಕ್ಕೂ ಮುನ್ನವೇ ವಿವಾದವೊಂದು ತಲೆಯೆತ್ತಿದೆ. ಭಾರತದ ಮೂವರು ಅಥ್ಲೀಟ್‌ಗಳಿಗೆ ಚೀನಾ ವೀಸಾ ನಿಡಲು ನಿರಾಕರಿಸಿದೆ ಎಂದು ಆರೋಪಿಸಿದೆ. ಅರುಣಾಚಲ ಪ್ರದೇಶ ಮೂಲದ ಈ ಮೂವರು ಅಥ್ಲೀಟ್‌ಗಳಿಗೆ ಚೀನಾ ವೀಸಾ ನೀಡದಿರುವುದು ಸಾಕಷ್ಟು ಖಂಡನೆಗೂ ಗುರಿಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಭಾರತ ನೇರವಾಗಿ ಖಂಡಿನೆ ವ್ಯಕ್ತಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿದ್ದು ಭಾರತವು ತನ್ನ ಹಿತಾಸಕ್ತಿಗಳನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಕಾಯ್ದಿರಿಸಿದೆ ಎಂದಿದ್ದಾರೆ. ಅಲ್ಲದೆ ಭಾರತದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಏಷ್ಯನ್ ಗೇಮ್ಸ್ ಹಿನ್ನೆಲೆಯಲ್ಲಿ ಚೀನಾಗೆ ತೆರಳಬೇಕಿದ್ದ ತನ್ನ ಪ್ರವಾಸವನ್ನು ಕೂಡ ರದ್ದುಗೊಳಿಸಿದ್ದಾರೆ.

ಇದರ ಬೆನ್ನಿಗೇ ಒಲಿಂಪಿಕ್ಸ್ ಕೌನ್ಸಿಲ್ ಆಫ್ ಏಷ್ಯಾದ ಎಥಿಕ್ಸ್ ಕಮಿಟಿಯ ಮುಖ್ಯಸ್ಥ ವಿ ಜಿಂಗಾಂಗ್ ಪ್ರತಿಕ್ರಿಯೆ ನೀಡಿದ್ದು ಚೀನಾ ವೀಸಾವನ್ನು ನೀಡಿದ್ದು ಭಾರತೀಯ ಅಥ್ಲೀಟ್‌ಗಳೇ ಚೀನಾದ ವೀಸಾವನ್ನು ನಿರಾಕರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಪ್ರಯಾಣ ದಾಖಲೆಗಳನ್ನು ನೀಡಿದ ನಂತರ ಕ್ರೀಡಾಪಟುಗಳೇ ವೀಸಾಗಳನ್ನು ಸ್ವೀಕರಿಸಲಿಲ್ಲ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.
"ಈ ಭಾರತೀಯ ಕ್ರೀಡಾಪಟುಗಳಿಗೆ ಈಗಾಗಲೇ ಚೀನಾ ಪ್ರವೇಶಿಸಲು ವೀಸಾ ನೀಡಲಾಗಿದೆ. ಚೀನಾ ಯಾವುದೇ ವೀಸಾವನ್ನು ನಿರಾಕರಿಸಿಲ್ಲ. ಆದರೆ ದುರದೃಷ್ಟವಶಾತ್ ಈ ಕ್ರೀಡಾಪಟುಗಳು ವೀಸಾವನ್ನು ಸ್ವೀಕರಿಸಲಿಲ್ಲ. ಇದು OCA ಸಮಸ್ಯೆ ಎಂದು ನಾನು ಭಾವಿಸುವುದಿಲ್ಲ ಏಕೆಂದರೆ ಚೀನಾದಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಪ್ರಮಾಣೀಕರಿಸಿದ ಎಲ್ಲಾ ಕ್ರೀಡಾಪಟುಗಳನ್ನು ಅನುಮತಿಸಲು ಚೀನಾ ಒಪ್ಪಂದವನ್ನು ಹೊಂದಿದೆ. ಇದು ಅತ್ಯಂತ ಸ್ಪಷ್ಟವಾಗಿದ್ದು ವೀಸಾವನ್ನು ಈಗಾಗಲೇ ನೀಡಲಾಗಿದೆ" ಎಂದು ಒಸಿಎ ಮುಖ್ಯಸ್ಥ ಹೇಳಿಕೆ ನೀಡಿದ್ದಾರೆ.
ಭಾರತದ ವುಶು ಆಟಗಾರ್ತಿಯರಾದ ನೇಮನ್ ವಾಂಗ್ಸು, ಒನಿಲು ತೆಗಾ ಮತ್ತು ಮೆಪುಂಗ್ ಲಮ್ಗು ಈ ಮೂವರಿಗೆ ವೀಸಾ ನಿರಾಕರಿಸಲಾಗಿದ್ದು ಕೊನೆಯ ಕ್ಷಣದಲ್ಲಿ ಚೀನಾಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ. ಹೀಗಾಗಿ 10 ಆಟಗಾರ್ತಿಯರ ಸ್ಕ್ವಾಡ್‌ನಲ್ಲಿ ಉಳಿದ 7ಆಟಗಾರ್ತಿಯರು ಚೀನಾಗೆ ಪ್ರಯಾಣಿಸಿದ್ದಾರೆ. ಈ ಮೂವರು ಕೂಡ ಅರುಣಾಚಲ ಪ್ರದೇಶದವರಾಗಿದ್ದು ಉದ್ದೇಶಪೂರ್ವಕವಾಗಿ ಚೀನಾ ಈ ವರ್ತನೆ ತೋರಿದೆ ಎಂದು ಭಾರತ ಕಟುವಾಗಿ ಖಂಡಿಸಿದೆ.