ಸಚಿನ್... ಈ ಹೆಸರು ಯಾರಿಗೆ ಗೊತ್ತಿಲ್ಲ. ಭಾರತ ಮಾತ್ರವಲ್ಲ. ಜಗತ್ತಿನ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೂ ಈ ಹೆಸರು ಗೊತ್ತೇ ಇದೆ. ಆದರೆ ನಾವು ಇಲ್ಲಿ ಹೇಳುತ್ತಿರೋದು ಆ ಸಚಿನ್ ತೆಂಡೂಲ್ಕರ್ ಅಲ್ಲ..! ಇವರು ಸಚಿನ್ ನಾಗ್. ಭಾರತದ ಕ್ರೀಡಾಪ್ರೇಮಿಗಳಿಗೆ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಬೇಕಿದ್ದ ಈ ಸಾಧಕ ಕಾಲಚಕ್ರದಲ್ಲಿ ಮರೆಯಾಗಿ ಹೋಗಿದ್ದಾರೆ. ಏಳು ದಶಕದಷ್ಟು ಹಿಂದೆ ಮುನ್ನವೇ ಭಾರತದ ಕ್ರೀಡಾ ಲೋಕದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ ಶ್ರೇಷ್ಠ ಕ್ರೀಡಾಪಟುವನ್ನು ಈಗ ಸ್ಮರಿಸಿಕೊಳ್ಳುವ ಸಮಯ ಬಂದಿದೆ. ಅದಕ್ಕೆ ಕಾರಣ ಈ ವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟ.
ಏಷ್ಯನ್ ಗೇಮ್ಸ್ ಕ್ರೀಡಾಕೂಟದ 19ನೇ ಆವೃತ್ತಿ ಜೀನಾದ ಹಾಂಗ್ಜೂ ನಗರದಲ್ಲಿ ಆಯೋಜನೆಯಾಗಲಿದ್ದು ಇದಕ್ಕಾಗಿ ದಿನಗಣನೆ ಆರಂಭವಾಗಿದೆ. ಮುಂಬರುವ ಸೆಪ್ಟೆಂಬರ್ 23ರಂದು ಆರಂಭವಾಗಿ ಅಕ್ಟೋಬರ್ 8ರಂದು ಟೂರ್ನಿ ಅಂತ್ಯವಾಗಲಿದೆ. ಹೀಗಾಗಿ ಏಷ್ಯಾದ ಕ್ರೀಡಾಪಟುಗಳ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಏಷ್ಯಾದ ರಾಷ್ಟ್ರಗಳು ಭಾಗಿಯಾಗುವ ಈ ಅತಿ ದೊಡ್ಡ ಕ್ರೀಡಾಕೂಟ ಸುದೀರ್ಘವಾದ ಇತಿಹಾಸವನ್ನು ಹೊಂದಿದೆ. 1951ರಿಂದ ಆಯೋಜನೆಯಾಗುತ್ತಾ ಬಂದಿರುವ ಈ ಏಷ್ಯನ್ ಗೇಮ್ಸ್ ಜಾಗತಿಕ ಮಟ್ಟದಲ್ಲಿ ಒಲಿಂಪಿಕ್ಸ್ ಕಾಮನ್‌ವೆಲ್ತ್ ಗೇಮ್ಸ್ ಬಳಿಕ ಮತ್ತೊಂದು ಅತ್ಯುನ್ನತ ಕ್ರೀಡಾಕೂಟ ಎನಿಸಿಕೊಂಡಿದೆ. ಈ ಪ್ರತಿಷ್ಠಿತ ಕ್ರೀಡಾಕೂಟ ಮೊದಲ ಬಾರಿಗೆ ಭಾರತದಲ್ಲಿಯೇ ಆಯೋಜನೆಯಾಗಿತ್ತು ಎಂಬುದನ್ನು ಈಗಾಗಲೇ ನಾವು ತಿಳಿದುಕೊಂಡಿದ್ದೇವೆ, ಹಾಗಾದರೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮೊದ ಬಾರಿಗೆ ಚಿನ್ನದ ಪದಕ ಗೆದ್ದಿದ್ದು ಯಾವಾಗ ಎಂಬುದರ ಮಾಹಿತಿ ಇಲ್ಲಿದೆ.
ಐತಿಹಾಸಿನ ಸಾಧನೆ
ಮೊದಲ ಏಷ್ಯನ್ ಗೇಮ್ಸ್ ಭಾರತ ಆಯೋಜನೆ ಮಾಡಿತ್ತು ಎಂಬ ಕಾರಣಕ್ಕೆ ಮಾತ್ರವೇ ಐತಿಹಾಸಿಕವಾಗಿರಲಿಲ್ಲ. ಭಾರತ ಮೊದಲ ಕ್ರೀಡಾಕೂಟದಲ್ಲಿಯೇ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆಯನ್ನು ಕೂಡ ಮಾಡಿತ್ತು. ಸಚಿನ್ ನಾಗ್ ಭಾರತದ ಪರವಾಗಿ ಪ್ರಪ್ರಥಮ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಆದರೆ ಸಚಿನ್ ನಾಗ್ ಅವರ ಈ ಸಾಧನೆಗೆ ದೊರೆಯಬೇಕಾದ ಮನ್ನಣೆ ಸಿಗಲೇ ಇಲ್ಲ. ಕಾಲ ಕಳೆದಂತೆ ಈ ಕ್ರೀಡಾಪಟುವನ್ನು ಭಾರತದ ಕ್ರೀಡಾ ವಲಯ ಮರೆತುಬಿಟ್ಟಿದೆ. ನವದೆಹಲಿಯಲ್ಲಿ ನಡೆದ ಉದ್ಘಾಟನಾ ಏಷ್ಯನ್ ಗೇಮ್ಸ್‌ನಲ್ಲಿ 100 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಅಷ್ಟೇ ಅಲ್ಲದೆ ಅವರ ಪದಕ ಪಟ್ಟಿಯಲ್ಲಿ ಎರಡು ಕಂಚಿನ ಪದಕಗಳೂ ಸೇರಿದ್ದವು. ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಸಚಿನ್ ನಾಗ್ ಅವರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತದ ಪರವಾಗಿ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಚಿನ್ನದ ಪದಕವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಸಚಿನ್ ನಾಗ್ ಈ ಕ್ರೀಡಾಕೂಟಕ್ಕಾಗಿ ವಾರಣಾಸಿಯ ಗಂಗಾನದಿಯಲ್ಲಿ ಅಭ್ಯಾಸ ಮಾಡುತ್ತಿದ್ದರು. 100 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಚಿನ್ನದ ಪದಕ ಗೆದ್ದ ಏಕೈಕ ಈಜುಗಾರನಾಗಿಯೇ ಸಚಿನ್ ನಾಗ್ ಉಳಿದುಕೊಂಡಿದ್ದಾರೆ. ಆದರೆ ದುರದೃಷ್ಟವಶಾತ್ ಭಾರತದ ಬಹುತೇಕರಿಗೆ ಈ ಐತಿಹಾಸಿಕ ಸಾಧನೆ ಮಾಡಿರುವ ಕ್ರೀಡಾಪಟುವಿನ ಬಗ್ಗೆ ಮಾಹಿತಿಯೇ ಇಲ್ಲ. ಸಚಿನ್ ನಾಗ್ 1987ರಲ್ಲಿ ಕೊಲ್ಕತ್ತಾದಲ್ಲಿ ನಿಧನರಾದರು.