
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರ, ಮಾರ್ಚ್ 1ರಿಂದ ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಪ್ರಾರಂಭವಾಗಲಿದೆ.
ಈಗಾಗಲೇ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಆತಿಥೇಯ ಭಾರತ ತಂಡ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಮೂರನೇ ಪಂದ್ಯದಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸಲು ಎದುರು ನೋಡುತ್ತಿದೆ.
ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಮತ್ತು ಅವರ ಪತ್ನಿ ಮೇಹಾ ಪಟೇಲ್ ಸೋಮವಾರ ಮಧ್ಯಪ್ರದೇಶದ ಉಜ್ಜೈನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ನಂತರ, ಅಕ್ಷರ್ ಪಟೇಲ್ ಮತ್ತು ಅವರ ಪತ್ನಿ 'ಭಸ್ಮ ಆರತಿ'ಯಲ್ಲಿ ಪಾಲ್ಗೊಂಡರು. ಭಸ್ಮ ಆರತಿ ಉಜ್ಜೈನಿ ಮಹಾಕಾಳೇಶ್ವರ ದೇವಸ್ಥಾನದ ಪ್ರಸಿದ್ಧ ಆಚರಣೆಯಾಗಿದೆ. ಬೆಳಿಗ್ಗೆ 4ರಿಂದ 5:30ರ ನಡುವಿನ ಬ್ರಾಹ್ಮಿ ಮುಹೂರ್ತದಲ್ಲಿ ಇದನ್ನು ನಡೆಸಲಾಗುತ್ತದೆ. ಈ ನವ ದಂಪತಿ ನಂದಿಹಾಳದಲ್ಲಿ ಕುಳಿತು ಭಸ್ಮ ಆರತಿಯನ್ನು ವೀಕ್ಷಿಸಿದರು. ಬಳಿಕ ದೇವಸ್ಥಾನದ ಗರ್ಭಗುಡಿ ತಲುಪಿ ಜಲಾಭಿಷೇಕ ನೆರವೇರಿಸಿದರು.
ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕ್ರಿಕೆಟಿಗ ಅಕ್ಷರ್ ಪಟೇಲ್, 5 ವರ್ಷಗಳ ಹಿಂದೆಯೂ ಭೇಟಿ ನೀಡಿದ್ದೆ. ಆದರೆ ಆಗ ಭಸ್ಮ ಆರತಿಯಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎಂದು ತಿಳಿಸಿದರು. ಬಾಬಾ ಮಹಾಕಾಳ್ ಅವರ ಭಸ್ಮ ಆರತಿಯನ್ನು ನೋಡುವ ಕನಸು ಇಂದು ನೆರವೇರಿತು. ಭಸ್ಮ ಆರತಿಯಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷವಾಗಿದೆ ಎಂದರು.
ಅಕ್ಷರ್ ಪಟೇಲ್ ದಂಪತಿ ಬಾಬಾ ಮಹಾಕಾಳೇಶ್ವರ ಆವರಣದಲ್ಲಿ 2 ಗಂಟೆಗೂ ಹೆಚ್ಚು ಕಾಲ ಹಾಜರಿದ್ದು, ಶಿವನ ಪ್ರಾರ್ಥನೆಯನ್ನೂ ಮಾಡಿದರು.

ಇವರಷ್ಟೇ ಅಲ್ಲದೆ, ನವವಿವಾಹಿತರಾದ ಇನ್ನೊಬ್ಬ ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಂಪತಿ ಕೂಡ ಭಾನುವಾರ (ಫೆಬ್ರವರಿ 26) ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.
ಭಾರತದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮದುವೆಯ ನಂತರ ಮೊದಲ ಬಾರಿಗೆ ಬಾಬಾ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು ಎಂದು ದೇವಸ್ಥಾನದ ಅರ್ಚಕ ಆಶಿಶ್ ಪೂಜಾರಿ ಹೇಳಿದ್ದು, ಲೋಕ ಕಲ್ಯಾಣಕ್ಕಾಗಿ ಮತ್ತು ಭಾರತ ಕ್ರಿಕೆಟ್ ತಂಡವು ವಿಶ್ವದ ಅತಿದೊಡ್ಡ ಕ್ರಿಕೆಟ್ ತಂಡವಾಗಲಿ ಎಂದು ಹಾರೈಸಿದರು.
ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮಾಧ್ಯಮದವರಿಂದ ಅಂತರ ಕಾಯ್ದುಕೊಂಡರು. ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಜನವರಿ 23ರಂದು ವಿವಾಹವಾಗಿದ್ದರು.