ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ 15ನೇ ಆವೃತ್ತಿ: ಅವಿನಾಶ್ ಸಾಬಲೆ ರಾಯಭಾರಿಯಾಗಿ ನೇಮಕ

ಪ್ರತಿಷ್ಠಿತ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ (ಬಿಎಂಎಂ) 15ನೇ ಆವೃತ್ತಿಗೆ 3000 ಮೀಟರ್ ಸ್ಟೀಪಲ್ಚೇಸ್ ಓಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಹಾಗೂ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಅವಿನಾಶ್ ಸಾಬಲೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.
ದೇಶದ ಏಕೈಕ ಮಿಡ್ನೈಟ್ ಮ್ಯಾರಥಾನ್ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ಓಟವು ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಮ್ಯಾರಥಾನ್ಸ್ ಹಾಗೂ ಡಿಸ್ಟೆನ್ಸ್ ರೇಸಸ್ (ಎಐಎಂಎಸ್)ನ ಸದಸ್ಯತ್ವ ಹೊಂದಿರುವ ಕಾರ್ಯಕ್ರಮವಾಗಿದ್ದು, ಕಳೆದ 14 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮ್ಯಾರಥಾನ್ ಆಗಿ ಬೆಳೆದಿದೆ.
11,000ಕ್ಕೂ ಅಧಿಕ ಓಟಗಾರರು ಭಾಗವಹಿಸುವ ಬಿಎಂಎಂ ಇಂದು ಜಗತ್ತಿನ ಮುಂಚೂಣಿ ಮ್ಯಾರಥಾನ್ ಓಟಗಳಲ್ಲಿ ಒಂದಾಗಿದೆ. ಬಿಎಂಎಂ-2022ರ ಓಟವು ಡಿಸೆಂಬರ್ 10/11, 2022ರಂದು ರೋಟರಿ ಬೆಂಗಳೂರು ಐಟಿ ಕಾರಿಡಾರ್‌ನ (ಆರ್‌ಬಿಐಟಿಸಿ) ಸಹಭಾಗಿತ್ವದಲ್ಲಿ ವೈಟ್‌ಫೀಲ್ಡ್‌ನ ಕೆಪಿಟಿಒದಲ್ಲಿ ನಡೆಯಲಿದೆ.

ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶ!
ಹೌದು, ಇದು ಎಲ್ಲರೂ ಭಾಗವಹಿಸಲು ಅವಕಾಶವಿರುವ ಮುಕ್ತ ಮ್ಯಾರಥಾನ್ ಓಟ. 5ಕೆ, 10ಕೆ, ಹಾಫ್ ಮ್ಯಾರಥಾನ್ ಅಥವಾ ಫುಲ್ ಮ್ಯಾರಥಾನ್ನಲ್ಲಿ ತಮ್ಮ ಓಟದ ಕೌಶಲ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಹಾಗೂ ಮಧ್ಯರಾತ್ರಿಯ ಮ್ಯಾರಥಾನ್ನಲ್ಲಿ ಭಾಗವಹಿಸುವ ಖುಷಿಯನ್ನು ಅನುಭವಿಸಲು ಬಯಸುವವರಿಗೆ ಹೀಗೆ ಎಲ್ಲರಿಗೂ ಸೂಕ್ತವಾದ ಓಟ ಇದಾಗಿದೆ. ಈ ವರ್ಷದ ಥೀಮ್ `ಮತ್ತೆ ಮುಕ್ತವಾಗಿ ಓಡಿ.' ಎರಡು ವರ್ಷ ಕೊರೋನಾ ವೈರಸ್ ನಮ್ಮನ್ನೆಲ್ಲ ಮನೆಯಲ್ಲಿ ಕಟ್ಟಿಹಾಕಿದ್ದರಿಂದ ಈ ಬಾರಿಯ ಬಿಎಂಎಂ ಈ ಘೋಷವಾಕ್ಯದೊಂದಿಗೆ ಆಯೋಜನೆಯಾಗಿದೆ.

ಅವಿನಾಶ್ ಸಾಬಲೆ ಬ್ರ್ಯಾಂಡ್ ಅಂಬಾಸಿಡರ್
ಈ ಕುರಿತು ಮಾಹಿತಿ ನೀಡಿದ ಬಿಎಂಎಂ 2022 ಚೇರ್ಮನ್ ಶ್ರೀ ವಿರಾಫ್ ಸುತಾರಿಯಾ, "ಅವಿನಾಶ್ ಸಾಬಲೆ ಅವರನ್ನು ಈ ವರ್ಷದ ಬಿಎಂಎಂ ಓಟಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಪಡೆದಿರುವುದು ನಮಗೆ ಹೆಮ್ಮೆ ತಂದಿದೆ. ಅವರು ಪ್ರಸಕ್ತ ತಲೆಮಾರಿನ ಯುವಕ ಯುವತಿಯರಿಗೆ ಸ್ಫೂರ್ತಿಯಾಗಿದ್ದು, ನಮ್ಮ ಸಾಮಥ್ರ್ಯದಲ್ಲಿ ನಮಗೆ ನಂಬಿಕೆಯಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಜೀವಂತ ನಿದರ್ಶನವಾಗಿದ್ದಾರೆ" ಎಂದು ಹೇಳಿದರು.
ಈ ಕುರಿತು ಪ್ರಕಟಣೆಯ ಮೂಲಕ ಸಂತಸ ವ್ಯಕ್ತಪಡಿಸಿರುವ ಅವಿನಾಶ್ ಸಾಬಲೆ, "ಬೆಂಗಳೂರು ಮಿಡ್ನೈಟ್ ಮ್ಯಾರಥಾನ್‌ನಂತಹ ಪ್ರತಿಷ್ಠಿತ ಮ್ಯಾರಥಾನ್‌ಗೆ ರಾಯಭಾರಿಯಾಗಿರುವುದು ನನಗೆ ತುಂಬಾ ಸಂತಸ ತಂದಿದೆ. ಇದು ಕೇವಲ ಅಥ್ಲೀಟ್‌ಗಳಿಗೆ ಹಾಗೂ ಓಟದ ಉತ್ಸಾಹಿಗಳಿಗೆ ವೇದಿಕೆ ಒದಗಿಸುವುದಷ್ಟೇ ಅಲ್ಲ, ಸಾಮಾಜಿಕ ಕಾರ್ಯಗಳಿಗೂ ನೆರವು ನೀಡುವ ಉದ್ದೇಶದಿಂದ ಆಯೋಜನೆಗೊಂಡಿದೆ. ಓಟದ ದಿನ ಎಲ್ಲ ಉತ್ಸಾಹಿಗಳ ಜೊತೆ ಬೆರೆಯಲು ಹಾಗೂ ಸ್ವತಃ ಓಟದಲ್ಲಿ ಪಾಲ್ಗೊಳ್ಳಲು ನಾನು ಕಾತುರದಿಂದ ಕಾಯುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

ವರ್ಚುವಲ್ ಮ್ಯಾರಥಾನ್ ಜೊತೆಗೆ 5ಕೆ ರನ್ ಸೇರ್ಪಡೆ
ಈ ಬಾರಿಯ ಬಿಎಂಎಂ ವಿಶೇಷತೆಯೆಂದರೆ ಮೊದಲ ಬಾರಿ 5ಕೆ ರನ್ ಸೇರ್ಪಡೆಗೊಂಡಿದೆ. ಜೊತೆಗೆ, ಮ್ಯಾರಥಾನ್ನಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗದವರಿಗಾಗಿ ಇಂಡಿಯಾ ರನ್ನಿಂಗ್ ಸಹಭಾಗಿತ್ವದಲ್ಲಿ ವರ್ಚುವಲ್ ಮ್ಯಾರಥಾನ್ ಆಯೋಜಿಸಲಾಗಿದೆ. ಬಿಎಂಎಂ-2022 ಮ್ಯಾರಥಾನ್ ಓಟಕ್ಕೆ ಈಗಾಗಲೇ ಹೆಸರು ನೋಂದಣಿ ಆರಂಭವಾಗಿದ್ದು, ಆಸಕ್ತರು www.midnightmarathon.inಗೆ ಲಾಗಿನ್ ಆಗುವ ಮೂಲಕ ಆನ್ಲೈನ್‌ನಲ್ಲೇ ನೋಂದಣಿ ಮಾಡಿಕೊಳ್ಳಬಹುದು.
ಡಿಸೆಂಬರ್ 10, 2022ರಂದು ನಡೆಯಲಿರುವ ಮ್ಯಾರಥಾನ್‌ನಲ್ಲಿ ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, ಅಕಾಮಾಯಿ ಓಪನ್ 10ಕೆ ರನ್, ವಿಸೆನ್ 5ಕೆ ಐಟಿ ಸಿಟಿ ಫನ್ ರನ್, ಏರ್ಬಸ್ ಕಾರ್ಪೊರೇಟ್ ರಿಲೇ, ಕಮ್ಯುನಿಟಿ ರಿಲೇ, ಹಾಗೂ ಹೊಸತಾಗಿ ಸೇರ್ಪಡೆಗೊಂಡ ಫಾಸ್ಟ್ 5ಕೆ ರನ್ (ಟೈಮ್ಡ್) ಓಟಗಳು ಸೇರಿವೆ. ಈ ಬಾರಿಯ ಬಿಎಂಎಂನಲ್ಲಿ ಸಾವಿರಾರು ವೃತ್ತಿಪರ ಓಟಗಾರರು, ಅಂತಾರಾಷ್ಟ್ರೀಯ ಅಥ್ಲೀಟ್‌ಗಳು, ಅವರ ಬೆಂಬಲಿಗರು, ಕಾರ್ಪೊರೇಟ್ ಕಂಪನಿಗಳು ಹಾಗೂ ಎನ್‌ಜಿಒಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಓಟದ ದಿನ ಲೈವ್ ಮನರಂಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಹು ವಿಧದ ತಿನಿಸುಗಳನ್ನು ಹೊಂದಿರುವ ಫುಡ್ ಕೋರ್ಟ್‌ಗಳು ಓಟಗಾರರಿಗಾಗಿ ತೆರೆದಿರಲಿವೆ.

ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ತನ್ನದೇ ಆದ ಹಿರಿಮೆ ಹೊಂದಿದೆ!
ಇತ್ತೀಚಿನ ವರ್ಷಗಳಲ್ಲಿ ಮ್ಯಾರಥಾನ್ ಓಟಗಳು ಅತಿದೊಡ್ಡ ಕ್ರೀಡಾ ಪಂದ್ಯಗಳಾಗಿ ರೂಪುಗೊಂಡಿವೆ. ದೇಶದಲ್ಲಿ ಪ್ರತಿವರ್ಷ ನೂರಾರು ಮ್ಯಾರಥಾನ್ ಓಟಗಳು ಬೇರೆ ಬೇರೆ ಕಡೆ ಆಯೋಜನೆಯಾಗುತ್ತವೆ. ಅವುಗಳಲ್ಲಿ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ತನ್ನದೇ ಆದ ಹಿರಿಮೆ ಹೊಂದಿದೆ. ಆರ್‌ಬಿಐಟಿಸಿಯ ಸಾಮಾಜಿಕ ಕಾರ್ಯಗಳಿಗೆ ನಿಧಿ ಸಂಗ್ರಹಿಸುವ ಉದಾತ್ತ ಉದ್ದೇಶದಿಂದ ಇದನ್ನು ಆಯೋಜಿಸಲಾಗುತ್ತಿದೆ.
2007ರಿಂದ ರೋಟರಿ ಬೆಂಗಳೂರು ಐಟಿ ಕಾರಿಡಾರ್ ಈ ಮಿಡ್ನೈಟ್ ಮ್ಯಾರಥಾನ್ ಅನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಈವರೆಗೆ 80,000ಕ್ಕೂ ಅಧಿಕ ಉತ್ಸಾಹಿಗಳು ಬಿಂಎಂಎಂನಲ್ಲಿ ಪಾಲ್ಗೊಂಡು ಆರೋಗ್ಯಕರ ಬದುಕಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಬಿಎಂಎಂನ ಮೊದಲ ಆವೃತ್ತಿಯ ಓಟ 2007ರ ಮೇ 19ರಂದು ಆಯೋಜನೆಯಾಗಿತ್ತು.
ಮ್ಯಾರಥಾನ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ www.midnightmarathon.in
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications