
ಪ್ರತಿಷ್ಠಿತ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ (ಬಿಎಂಎಂ) 2022ಕ್ಕೆ ದಿನಗಣನೆ ಆರಂಭವಾಗಿದ್ದು, ಬುಧವಾರ (ನ.23) ನಡೆದ ಪತ್ರಿಕಾಗೋಷ್ಠಿಯಲ್ಲಿ "ಮತ್ತೆ ಮುಕ್ತವಾಗಿ ಓಡಿ" (ರನ್ ಫ್ರೀಲಿ ಅಗೇನ್) ಎಂಬ ಥೀಮ್ ಲೋಗೋ ಬಿಡುಗಡೆ ಮಾಡಲಾಯಿತು.
ದೇಶದ ಏಕೈಕ ಮಿಡ್‍ನೈಟ್ ಮ್ಯಾರಥಾನ್ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ಓಟವು ಅಸೋಸಿಯೇಷನ್ ಆಫ್ ಇಂಟರ್‍ನ್ಯಾಷನಲ್ ಮ್ಯಾರಥಾನ್ಸ್ ಹಾಗೂ ಡಿಸ್ಟೆನ್ಸ್ ರೇಸಸ್ (ಎಐಎಂಎಸ್)ನ ಸದಸ್ಯತ್ವ ಹೊಂದಿರುವ ಕಾರ್ಯಕ್ರಮವಾಗಿದ್ದು, ಕಳೆದ 14 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮ್ಯಾರಥಾನ್ ಆಗಿ ಬೆಳೆದಿದೆ.
11,000ಕ್ಕೂ ಅಧಿಕ ಓಟಗಾರರು ಭಾಗವಹಿಸುವ ಬಿಎಂಎಂ ಇಂದು ಜಗತ್ತಿನ ಮುಂಚೂಣಿ ಮ್ಯಾರಥಾನ್ ಓಟಗಳಲ್ಲಿ ಒಂದಾಗಿದೆ. ಬಿಎಂಎಂ-2022ರ ಓಟವು ಡಿಸೆಂಬರ್ 10/11, 2022ರಂದು ರೋಟರಿ ಬೆಂಗಳೂರು ಐಟಿ ಕಾರಿಡಾರ್‍ನ (ಆರ್‍ಬಿಐಟಿಸಿ) ಸಹಭಾಗಿತ್ವದಲ್ಲಿ ವೈಟ್‍ಫೀಲ್ಡ್‍ನ ಕೆಪಿಟಿಒದಲ್ಲಿ ನಡೆಯಲಿದೆ.
ರೋಟರಿ ಬೆಂಗಳೂರು ಐಟಿ ಕಾರಿಡಾರ್ 2022-23 (ಆರ್‍ಬಿಐಟಿಸಿ) ಅಧ್ಯಕ್ಷೆ ಡಾ.ಸೀಮಂತಿನಿ ದೇಸಾಯಿ, ಬಿಂಎಂಎಂ 2022ರ ಚೇರ್ಮನ್ ಶ್ರೀ ವಿರಾಫ್ ಎಂ. ಸುತಾರಿಯಾ ಹಾಗೂ ರೇಸ್ ಡೈರೆಕ್ಟರ್-ಬಿಎಂಎಂ ಶ್ರೀ ಗುಲ್ ಮೊಹಮ್ಮದ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಸ್ವಿಮ್ಮರ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್ 2018ರಲ್ಲಿ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಸ್ವಪ್ನಿಲ್ ಸಂಜಯ್ ಕೂಡ ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಿತ ಫೋನ್‍ಪೇ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ (ಬಿಎಂಎಂ) 15ನೇ ಆವೃತ್ತಿಗೆ 3000 ಮೀಟರ್ ಸ್ಟೀಪಲ್‍ಚೇಸ್ ಓಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಹಾಗೂ ಇತ್ತೀಚೆಗೆ ನಡೆದ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದ ಅವಿನಾಶ್ ಸಾಬಲೆ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಗೊಂಡಿರುವುದನ್ನು ಪ್ರಕಟಿಸಲಾಯಿತು.

ಈ ವರ್ಷದ ಮಿಡ್‍ನೈಟ್ ಮ್ಯಾರಾಥಾನ್ ವಿಶೇಷವೆಂದರೆ ಹೊಸತಾಗಿ 5ಕೆ ಓಟ (ಟೈಮ್ಡ್) ಹಾಗೂ ಇಂಡಿಯಾ ರನ್ನಿಂಗ್ ಸಹಯೋಗದಲ್ಲಿ ವರ್ಚುವಲ್ ಮ್ಯಾರಥಾನ್ ಸೇರ್ಪಡೆಗೊಂಡಿವೆ. ಮ್ಯಾರಥಾನ್‍ನಲ್ಲಿ ಭೌತಿಕವಾಗಿ ಪಾಲ್ಗೊಳ್ಳಲು ಸಾಧ್ಯವಾಗದವರಿಗೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ನಿಟ್ಟಿನಲ್ಲಿ ವರ್ಚುವಲ್ ಮ್ಯಾರಥಾನ್ ಆಯೋಜಿಸಲಾಗಿದೆ.
ಇದು ಎಲ್ಲರೂ ಭಾಗವಹಿಸಲು ಅವಕಾಶವಿರುವ ಮುಕ್ತ ಮ್ಯಾರಥಾನ್ ಓಟ. 5ಕೆ, 10ಕೆ, ಹಾಫ್ ಮ್ಯಾರಥಾನ್ ಅಥವಾ ಫುಲ್ ಮ್ಯಾರಥಾನ್‍ನಲ್ಲಿ ತಮ್ಮ ಓಟದ ಕೌಶಲ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಹಾಗೂ ಮಧ್ಯರಾತ್ರಿಯ ಮ್ಯಾರಥಾನ್‍ನಲ್ಲಿ ಭಾಗವಹಿಸುವ ಖುಷಿಯನ್ನು ಅನುಭವಿಸಲು ಬಯಸುವವರಿಗೆ ಹೀಗೆ ಎಲ್ಲರಿಗೂ ಸೂಕ್ತವಾದ ಓಟ ಇದಾಗಿದೆ. ಈ ವರ್ಷದ ಥೀಮ್ ಮತ್ತೆ ಮುಕ್ತವಾಗಿ ಓಡಿ.' ಎರಡು ವರ್ಷ ಕೊರೋನಾ ವೈರಸ್ ನಮ್ಮನ್ನೆಲ್ಲ ಮನೆಯಲ್ಲಿ ಕಟ್ಟಿಹಾಕಿದ್ದರಿಂದ ಈ ಬಾರಿಯ ಬಿಎಂಎಂ ಈ ಘೋಷವಾಕ್ಯದೊಂದಿಗೆ ಆಯೋಜನೆಯಾಗಿದೆ.
ಈ ಕುರಿತು ಪ್ರಕಟಣೆಯ ಮೂಲಕ ಸಂತಸ ವ್ಯಕ್ತಪಡಿಸಿರುವ ಅವಿನಾಶ್ ಸಾಬಲೆ, "ಬೆಂಗಳೂರು ಮಿಡ್‍ನೈಟ್ ಮ್ಯಾರಥಾನ್‍ನಂತಹ ಪ್ರತಿಷ್ಠಿತ ಮ್ಯಾರಥಾನ್‍ಗೆ ರಾಯಭಾರಿಯಾಗಿರುವುದು ನನಗೆ ತುಂಬಾ ಸಂತಸ ತಂದಿದೆ. ಇದು ಕೇವಲ ಅಥ್ಲೀಟ್‍ಗಳಿಗೆ ಹಾಗೂ ಓಟದ ಉತ್ಸಾಹಿಗಳಿಗೆ ವೇದಿಕೆ ಒದಗಿಸುವುದಷ್ಟೇ ಅಲ್ಲ, ಸಾಮಾಜಿಕ ಕಾರ್ಯಗಳಿಗೂ ನೆರವು ನೀಡುವ ಉದ್ದೇಶದಿಂದ ಆಯೋಜನೆಗೊಂಡಿದೆ. ಓಟದ ದಿನ ಎಲ್ಲ ಉತ್ಸಾಹಿಗಳ ಜೊತೆ ಬೆರೆಯಲು ಹಾಗೂ ಸ್ವತಃ ಓಟದಲ್ಲಿ ಪಾಲ್ಗೊಳ್ಳಲು ನಾನು ಕಾತುರದಿಂದ ಕಾಯುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಬಿಎಂಎಂ-2022 ಮ್ಯಾರಥಾನ್ ಓಟಕ್ಕೆ ಈಗಾಗಲೇ ಹೆಸರು ನೋಂದಣಿ ಆರಂಭವಾಗಿದ್ದು, ಆಸಕ್ತರು www.midnightmarathon.in ಗೆ ಲಾಗಿನ್ ಆಗುವ ಮೂಲಕ ಆನ್‍ಲೈನ್‍ನಲ್ಲೇ ನೋಂದಣಿ ಮಾಡಿಕೊಳ್ಳಬಹುದು.
ಮ್ಯಾರಥಾನ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ www.midnightmarathon.in