ಕಾಮನ್‌ವೆಲ್ತ್ ಗೇಮ್ಸ್ 2022: ಸ್ವಾತಂತ್ರ್ಯದ ನಂತರ ಭಾರತದ ಪದಕಗಳ ಬೇಟೆ; ಇಲ್ಲಿ ಪರಿಶೀಲಿಸಿ

ಕಾಮನ್‌ವೆಲ್ತ್ ಗೇಮ್ಸ್ 2022ರ ಉದ್ಘಾಟನಾ ಸಮಾರಂಭವು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ (ಜುಲೈ 28, ಗುರುವಾರ) ನಡೆಯಲಿದೆ. ಉದ್ಘಾಟನಾ ಸಮಾರಂಭದ ಸ್ಥಳವು ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆಯುತ್ತದೆ.
ಕಾಮನ್‌ವೆಲ್ತ್ ಗೇಮ್ಸ್ 2022ರ ಉದ್ಘಾಟನಾ ಸಮಾರಂಭವು ಜುಲೈ 28ರಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11:30ಕ್ಕೆ ಮತ್ತು ಸ್ಥಳೀಯ ಕಾಲಮಾನ ರಾತ್ರಿ 7 ಗಂಟೆಗೆ ಪ್ರಾರಂಭವಾಗಲಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಗಮನಿಸಿದರೆ ಭಾರತಕ್ಕೆ ಶ್ರೀಮಂತ ಇತಿಹಾಸವಿದೆ. ಒಟ್ಟಾರೆಯಾಗಿ ಭಾರತವು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 181 ಚಿನ್ನ, 173 ಬೆಳ್ಳಿ ಮತ್ತು 149 ಕಂಚಿನ ಪದಕಗಳನ್ನು ಒಳಗೊಂಡಂತೆ 503 ಪದಕಗಳನ್ನು ಗೆದ್ದಿದೆ.
ಭಾರತದ ಅತ್ಯುತ್ತಮ ಕಾಮನ್ವೆಲ್ತ್ ಗೇಮ್ಸ್ ಆವೃತ್ತಿ 2010 ಆಗಿತ್ತು. ಅದೇ ಕಾರ್ಯಕ್ರಮವನ್ನು ಭಾರತ ಆಯೋಜಿಸಿತ್ತು. ಅದರಲ್ಲಿ ಭಾರತ 101 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು.

ಭಾರತ ಭಾಗವಹಿಸಿದ ಪ್ರತಿ ಆವೃತ್ತಿಯಲ್ಲಿ ಪದಕ ಗೆದ್ದಿದೆ
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಇತಿಹಾಸವನ್ನು ನೋಡುವುದಾದರೆ, ಸ್ವಾತಂತ್ರ್ಯದ ನಂತರ ಭಾರತ ಭಾಗವಹಿಸಿದ ಪ್ರತಿ ಆವೃತ್ತಿಯಲ್ಲಿ ಪದಕಗಳನ್ನು ಗೆದ್ದಿದೆ.
1954ರ ವ್ಯಾಂಕೋವರ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಮೊದಲ ಬಾರಿಗೆ ಭಾಗವಹಿಸಿತ್ತು. ಅಲ್ಲಿ ಭಾರತದ ಕ್ರೀಡಾಪಟುಗಳು ಯಾವುದೇ ಪದಕವನ್ನು ಗೆಲ್ಲಲಿಲ್ಲ.
1958ರ ಕಾರ್ಡಿಫ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಭಾರತವು 3 ಪದಕಗಳನ್ನು ಗೆದ್ದುಕೊಂಡಿತು. ಎರಡು ಚಿನ್ನದ ಪದಕಗಳು ಮತ್ತು 1 ಬೆಳ್ಳಿ ಮತ್ತು ಪದಕ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಗಳಿಸಿತ್ತು. 1966ರ ಕಿಂಗ್‌ಸ್ಟನ್ ಗೇಮ್ಸ್‌ನಲ್ಲಿ ಭಾರತ ಮತ್ತೆ ಮೂರು ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಮತ್ತು ಒಟ್ಟಾರೆ 10 ಪದಕಗಳೊಂದಿಗೆ 8ನೇ ಸ್ಥಾನ ಗಳಿಸಿತ್ತು.

1970ರಲ್ಲಿ 12 ಪದಕಗಳೊಂದಿಗೆ 6ನೇ ಸ್ಥಾನ
1970ರಲ್ಲಿ ಎಡಿನ್‌ಬರ್ಗ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ನಡೆಸಲಾಯಿತು ಮತ್ತು ಅಲ್ಲಿ ಭಾರತವು 5 ಚಿನ್ನ, 3 ಬೆಳ್ಳಿ ಮತ್ತು 4 ಕಂಚು ಮತ್ತು ಒಟ್ಟು 12 ಪದಕಗಳೊಂದಿಗೆ 6ನೇ ಸ್ಥಾನವನ್ನು ಗಳಿಸಿತ್ತು.
1974ರ ಕಾಮನ್‌ವೆಲ್ತ್ ಗೇಮ್ಸ್ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ಗೆ ಸ್ಥಳಾಂತರಗೊಂಡಿತು ಮತ್ತು ಭಾರತವು 4 ಚಿನ್ನ, 8 ಬೆಳ್ಳಿ ಮತ್ತು 3 ಕಂಚು ಸೇರಿದಂತೆ ಒಟ್ಟು 15 ಪದಕಗಳನ್ನು ಗೆದ್ದುಕೊಂಡಿತು. ಭಾರತ ಮತ್ತೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಮುಂದುವರೆದಿತ್ತು. ನಂತರ 1978ರಲ್ಲಿ ಎಡ್ಮಂಟನ್‌ನಲ್ಲಿ ಭಾರತವು 5 ಚಿನ್ನ, 4 ಬೆಳ್ಳಿ ಮತ್ತು 6 ಕಂಚು ಸೇರಿದಂತೆ 15 ಪದಕಗಳೊಂದಿಗೆ 6ನೇ ಸ್ಥಾನ ಗಳಿಸಿತು.
ಕಾಮನ್‌ವೆಲ್ತ್ ಗೇಮ್ಸ್ 1982 ಬ್ರಿಸ್ಬೇನ್‌ನಲ್ಲಿ ನಡೆಯಿತು ಮತ್ತು ಅಲ್ಲಿಯವರೆಗೆ ಭಾರತವು ತಮ್ಮ ಅತ್ಯಧಿಕ ಪದಕಗಳನ್ನು ಗೆದ್ದುಕೊಂಡಿತು. 5 ಚಿನ್ನದ ಪದಕಗಳು, 8 ಬೆಳ್ಳಿ ಮತ್ತು 3 ಕಂಚಿನೊಂದಿಗೆ ಒಟ್ಟು 16 ಪದಕಗಳು. ಮೆಗಾ ಈವೆಂಟ್‌ನಲ್ಲಿ ಭಾರತ ಮತ್ತೆ 6ನೇ ಸ್ಥಾನದಲ್ಲಿದ್ದರು.

1990ರಲ್ಲಿ ಆಕ್ಲೆಂಡ್ ಕ್ರೀಡಾಕೂಟದಲ್ಲಿ 32 ಪದಕ
1990ರಲ್ಲಿ ಆಕ್ಲೆಂಡ್ ಕ್ರೀಡಾಕೂಟದಲ್ಲಿ ಭಾರತ ಭಾಗವಹಿಸಿದ ಮುಂದಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 13 ಚಿನ್ನ, 8 ಬೆಳ್ಳಿ ಮತ್ತು 11 ಕಂಚಿನೊಂದಿಗೆ 32 ಪದಕಗಳೊಂದಿಗೆ ಮುಗಿಸಿತು ಮತ್ತು ಅವರು ಪದಕಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರು. ಭಾರತದ ಅಥ್ಲೀಟ್‌ಗಳು ಡಬಲ್ ಫಿಗರ್‌ನಲ್ಲಿ ಚಿನ್ನದ ಪದಕ ಗಳಿಸಿದ್ದು ಅದೇ ಮೊದಲಾಗಿತ್ತು.
1994ರ ವಿಕ್ಟೋರಿಯಾ ಗೇಮ್ಸ್‌ನಲ್ಲಿ ಭಾರತ 6 ಚಿನ್ನ, 11 ಬೆಳ್ಳಿ ಮತ್ತು 7 ಕಂಚು ಸೇರಿದಂತೆ 24 ಪದಕಗಳೊಂದಿಗೆ ಮತ್ತೆ 6ನೇ ಸ್ಥಾನಕ್ಕೆ ಕುಸಿದಿತ್ತು. 1998ರಲ್ಲಿ ಕೌಲಾಲಂಪುರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ, ಭಾರತವು 25 ಪದಕಗಳನ್ನು ಗೆದ್ದು 7 ಚಿನ್ನ, 10 ಬೆಳ್ಳಿ ಮತ್ತು 8 ಕಂಚಿನೊಂದಿಗೆ ಒಟ್ಟಾರೆ 7ನೇ ಸ್ಥಾನದಲ್ಲಿತ್ತು.

2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 101 ಪದಕ
ಕಾಮನ್‌ವೆಲ್ತ್ ಗೇಮ್ಸ್ 2002ರಲ್ಲಿ ಮ್ಯಾಂಚೆಸ್ಟರ್‌ಗೆ ಸ್ಥಳಾಂತರಗೊಂಡಿತು. ಅಲ್ಲಿ ಭಾರತವು 69 ಪದಕಗಳೊಂದಿಗೆ ಇತಿಹಾಸವನ್ನು ನಿರ್ಮಿಸಿತು. 30 ಚಿನ್ನದ ಪದಕಗಳು ಮತ್ತು 22 ಬೆಳ್ಳಿ ಮತ್ತು 17 ಕಂಚಿನ ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಗಳಿಸಿತು.
2006ರಲ್ಲಿ ಮೆಲ್ಬೋರ್ನ್‌ನಲ್ಲಿ ಭಾರತ 22 ಚಿನ್ನ, 17 ಬೆಳ್ಳಿ ಮತ್ತು 11 ಕಂಚು ಸೇರಿದಂತೆ 50 ಪದಕಗಳನ್ನು ಗೆದ್ದುಕೊಂಡಿತ್ತು. ಭಾರತ ಆ ವರ್ಷ ಮತ್ತೆ 4ನೇ ಸ್ಥಾನದಲ್ಲಿದ್ದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವು 2010ರಲ್ಲಿ ಅವರು ನವದೆಹಲಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದಾಗ ಬಂದಿತು. ಭಾರತ 38 ಚಿನ್ನ, 27 ಬೆಳ್ಳಿ ಮತ್ತು 36 ಕಂಚಿನ ಪದಕ ಸೇರಿದಂತೆ 101 ಪದಕಗಳೊಂದಿಗೆ ದಾಖಲೆ ಬರೆದಿದೆ. ಒಟ್ಟಾರೆ ಪದಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರು.

2018ರಲ್ಲಿ ಭಾರತ 26 ಚಿನ್ನ, 20 ಬೆಳ್ಳಿ, 20 ಕಂಚು ಸೇರಿದಂತೆ 66 ಪದಕ
ನಂತರ 2014ರಲ್ಲಿ ನಡೆದ ಗ್ಲಾಸ್ಗೋ ಗೇಮ್ಸ್‌ನಲ್ಲಿ ಭಾರತ 15 ಚಿನ್ನ, 30 ಬೆಳ್ಳಿ ಮತ್ತು 19 ಕಂಚಿನೊಂದಿಗೆ ಒಟ್ಟು 64 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿತ್ತು.
ಕಳೆದ 2018ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚು ಸೇರಿದಂತೆ 66 ಪದಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಗಳಿಸಿತ್ತು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಎಷ್ಟು ಪದಕ ಗೆಲ್ಲಲಿದೆ ಮತ್ತು ಎಷ್ಟನೇ ಸ್ಥಾನದಲ್ಲಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications