CWG 2022: 2ನೇ ದಿನ ಪದಕದ ಖಾತೆ ತೆರೆದ ಭಾರತ ಎಷ್ಟನೇ ಸ್ಥಾನದಲ್ಲಿದೆ? ಇಲ್ಲಿದೆ ಪದಕ ಪಟ್ಟಿ

ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟ ಈ ಬಾರಿ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ಜರುಗುತ್ತಿದೆ. ಜುಲೈ 28ರ ಗುರುವಾರದಂದು ಭರ್ಜರಿಯಾಗಿ ಉದ್ಘಾಟನೆಯಾದ ಈ ಕ್ರೀಡಾಕೂಟದ ಸ್ಪರ್ಧೆಗಳು ಹಾಗೂ ಪಂದ್ಯಗಳು ಜುಲೈ 29ರ ಶುಕ್ರವಾರದಿಂದ ಆರಂಭಗೊಂಡಿವೆ. ಕ್ರೀಡಾಕೂಟದ ಮೊದಲ ದಿನ ಭಾರತದ ಹಲವಾರು ಕ್ರೀಡಾಪಟುಗಳು ಗ್ರೂಪ್ ಹಂತದ ಹಣಾಹಣಿಯಲ್ಲಿ ಗೆದ್ದರಾದರೂ ಯಾವುದೇ ಆಟದಲ್ಲಿಯೂ ಪದಕದ ಬೇಟೆ ಆಡಿರಲಿಲ್ಲ. ಆದರೆ ಎರಡನೇ ದಿನದಂದು ಭಾರತೀಯ ಕ್ರೀಡಾಪಟುಗಳು ಪದಕದ ಬೇಟೆಯನ್ನು ಆರಂಭಿಸಿದ್ದು, ಪದಕ ಪಟ್ಟಿಯಲ್ಲಿ ಖಾತೆಯನ್ನು ತೆರೆದಿದ್ದಾರೆ.
ಚಿನ್ನದ ಹುಡುಗಿ ಎಂದೇ ಖ್ಯಾತಿಯನ್ನು ಪಡೆದಿರುವ ಮೀರಾಬಾಯಿ ಚಾನು ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಚಿನ್ನದ ಪದಕ ಬೇಟೆಯನ್ನು ಮುಂದುವರೆಸಿದ್ದಾರೆ. 49 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 201 ಕೆಜಿ ಎತ್ತುವುದರ ಮೂಲಕ ಮೀರಾಬಾಯಿ ಚಾನು ಫೈನಲ್ ಸ್ಪರ್ಧೆಯಲ್ಲಿ ಜಯ ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿ ಭಾರತಕ್ಕೆ ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು.
ಹೀಗೆ ಮೀರಾಬಾಯಿ ಚಾನು ಎರಡನೇ ದಿನದಾಟದಂದು ಚಿನ್ನದ ಪದಕವನ್ನು ಗೆದ್ದರೆ ಭಾರತದ ಉಳಿದ ಮೂವರು ಕ್ರೀಡಾಪಟುಗಳು 2 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಗೆದ್ದರು. ಒಟ್ಟಾರೆ 4 ಪದಕಗಳನ್ನು ಕ್ರೀಡಾಕೂಟದ ಎರಡನೇ ದಿನದಂದು ಭಾರತ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಪದಕ ಪಟ್ಟಿಯಲ್ಲಿ ಏರಿಕೆ ಕಂಡಿದೆ. ಹಾಗಿದ್ದರೆ ಎರಡನೇ ದಿನದ ಮುಕ್ತಾಯದ ನಂತರ ಪದಕ ಪಟ್ಟಿ ಹೇಗಿದೆ, ಯಾವ ದೇಶ ಎಷ್ಟು ಪದಕಗಳೊಂದಿಗೆ ಯಾವ ಸ್ಥಾನದಲ್ಲಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಪದಕ ಪಟ್ಟಿ ಹೀಗಿದೆ
ಕಾಮನ್ ವೆಲ್ತ್ ಕ್ರೀಡಾಕೂಟದ ಎರಡನೇ ದಿನ ಮುಕ್ತಾಯದ ನಂತರದ ಪದಕ ಪಟ್ಟಿ
1. 13 ಚಿನ್ನದ ಪದಕ, 8 ಬೆಳ್ಳಿಯ ಪದಕ ಹಾಗೂ 11 ಕಂಚಿನ ಪದಕಗಳನ್ನು ಗೆದ್ದು 32 ಪದಕಗಳನ್ನು ತನ್ನದಾಗಿಸಿಕೊಂಡಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ.
2. 7 ಚಿನ್ನದ ಪದಕಗಳು, 4 ಬೆಳ್ಳಿ ಪದಕಗಳು ಹಾಗೂ 2 ಕಂಚಿನ ಪದಕಗಳನ್ನು ಗೆದ್ದು ಒಟ್ಟು 13 ಪದಕಗಳನ್ನು ತನ್ನದಾಗಿಸಿಕೊಂಡಿರುವ ನ್ಯೂಜಿಲೆಂಡ್ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.
3. 5 ಚಿನ್ನದ ಪದಕಗಳು, 12 ಬೆಳ್ಳಿ ಪದಕಗಳು ಹಾಗೂ 4 ಕಂಚಿನ ಪದಕಗಳನ್ನು ಗೆದ್ದಿರುವ ಇಂಗ್ಲೆಂಡ್ ಒಟ್ಟು 21 ಪದಕಗಳನ್ನು ಗೆಲ್ಲುವುದರ ಮೂಲಕ ಪದಕ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ.
4. 3 ಚಿನ್ನದ ಪದಕ, 3 ರಜತ ಪದಕ ಹಾಗೂ 5 ಕಂಚಿನ ಪದಕಗಳು ಸೇರಿದಂತೆ ಒಟ್ಟು 11 ಪದಕಗಳನ್ನು ತನ್ನದಾಗಿಸಿಕೊಂಡಿರುವ ಕೆನಡಾ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
5. 2 ಚಿನ್ನದ ಪದಕ, 4 ಬೆಳ್ಳಿ ಪದಕ ಹಾಗೂ 6 ಕಂಚಿನ ಪದಕಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಒಟ್ಟು 12 ಪದಕಗಳನ್ನು ಗೆದ್ದಿರುವ ಸ್ಕಾಟ್ಲೆಂಡ್ ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
6. 2 ಚಿನ್ನದ ಪದಕಗಳು ಹಾಗೂ 1 ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಒಟ್ಟು 3 ಪದಕಗಳನ್ನು ಸಂಪಾದಿಸಿರುವ ಮಲೇಷಿಯಾ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
7. 2 ಚಿನ್ನದ ಪದಕಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
8. 1 ಚಿನ್ನದ ಪದಕ, 2 ಬೆಳ್ಳಿ ಪದಕಗಳು ಹಾಗೂ 1 ಕಂಚಿನ ಪದಕವನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
9. ತಲಾ ಒಂದೊಂದು ಚಿನ್ನದ ಪದಕವನ್ನು ಗೆದ್ದಿರುವ ಬರ್ಮುಡಾ ಮತ್ತು ನೈಜೀರಿಯಾ ತಂಡಗಳು ಒಂಬತ್ತನೇ ಸ್ಥಾನವನ್ನು ಹಂಚಿಕೊಂಡಿವೆ.

ಬೆಳ್ಳಿ ಪದಕ ಗೆದ್ದ ಭಾರತೀಯರು
ಕಾಮನ್ ವೆಲ್ತ್ ಕ್ರೀಡಾಕೂಟದ ಎರಡನೇ ದಿನದಂದು ಸಂಕೇತ್ ಸರ್ಗರ್ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಸರ್ಗಾರ್ ಒಟ್ಟು 248 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು. ಭಾರತದ ಮತ್ತೋರ್ವ ಕ್ರೀಡಾಪಟು ಬಿಂದ್ಯಾರಾಣಿ 55 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಕಂಚು ಗೆದ್ದ ಕನ್ನಡಿಗ
61 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ 269 ಕೆಜಿ ಭಾರ ಎತ್ತಿದ ಕನ್ನಡಿಗ ಗುರುರಾಜ್ ಪೂಜಾರಿ ಕಂಚಿನ ಪದಕವನ್ನು ಗೆದ್ದರು. ಕಳೆದ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಗುರುರಾಜ್ ಪೂಜಾರಿ ಈ ಬಾರಿ ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಸತತವಾಗಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications