CWG 2022: ಲಾನ್ ಬೌಲ್ಸ್‌ನಲ್ಲಿ ಐತಿಹಾಸಿಕ ದಾಖಲೆ ಮಾಡಲಿದೆ ಭಾರತ; ಈ ಲಾನ್ ಬೌಲ್ಸ್ ಎಂದರೇನು?

ಪ್ರಸ್ತುತ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಲಾನ್ ಬೌಲ್ಸ್ ವಿಭಾಗದ ಮಹಿಳೆಯರ ಗುಂಪಿನ ಸ್ಪರ್ಧೆಯಲ್ಲಿ ಭಾರತೀಯ ವನಿತೆಯರು ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 16-13 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಇಂದು ( ಆಗಸ್ಟ್ 2 ) ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಮಹಿಳೆಯರ 4 ಗುಂಪಿನ ಲಾನ್ ಬೌಲ್ಸ್ ಫೈನಲ್ ಪಂದ್ಯ ಜರುಗಲಿದ್ದು, ಭಾರತೀಯ ವನಿತೆಯರಿಗೆ ದಕ್ಷಿಣ ಆಫ್ರಿಕಾ ವನಿತೆಯರು ಸವಾಲೊಡ್ಡಿದ್ದಾರೆ. ಈಗಾಗಲೇ ಫೈನಲ್ ಪ್ರವೇಶಿಸಿ ಪದಕ ಖಚಿತ ಪಡಿಸಿಕೊಂಡಿರುವ ಭಾರತ ಈ ಪಂದ್ಯದಲ್ಲಿ ಗೆದ್ದರೆ ಚಿನ್ನದ ಪದಕಕ್ಕೆ ಕೊರಳೊಡ್ಡಲಿದ್ದು, ಸೋತರೆ ಬೆಳ್ಳಿ ಪದಕ ಲಭಿಸುವುದು ಖಚಿತ.
ಭಾರತದ ವನಿತೆಯರ ತಂಡದಲ್ಲಿ ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯ ಮತ್ತು ರೂಪಾರಾಣಿ ಟೆರ್ಕಿ ಇದ್ದು, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿ ನಂತರ ಪುಟಿದೆದ್ದು ಫೈನಲ್ ಪ್ರವೇಶಿಸುವುದರ ಮೂಲಕ ನೂತನ ಇತಿಹಾಸವನ್ನು ಬರೆದಿದ್ದಾರೆ. ಹೌದು, ಲಾನ್ ಬೌಲ್ಸ್ ವಿಭಾಗದಲ್ಲಿ ಇಲ್ಲಿಯವರೆಗೂ ನಡೆದಿರುವ ಯಾವುದೇ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಫೈನಲ್ ಪ್ರವೇಶಿಸಿರಲಿಲ್ಲ. ಆದರೆ ಇದೀಗ ಮಹಿಳೆಯರ ತಂಡ ಈ ಸಾಧನೆ ಮಾಡಿದ್ದು ಐತಿಹಾಸಿಕ ದಾಖಲೆ ಬರೆದಿದೆ.

ಲಾನ್ ಬೌಲ್ಸ್ ಎಂದರೇನು?
ಯೂರೋಪ್ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಬೌಲಿಂಗ್ ಕ್ರೀಡೆಯ ಪ್ರಮುಖ ಪ್ರಭೇದವೇ ಲಾನ್ ಬೌಲ್ಸ್. ಹುಲ್ಲಿನ ಹೊದಿಕೆಯ ಮೇಲೆ ಬೌಲಿಂಗ್ ಮಾಡುವುದರಿಂದ ಈ ಕ್ರೀಡೆಗೆ ಲಾನ್ ಬೌಲ್ಸ್ ಎಂದು ನಾಮಕರಣ ಮಾಡಲಾಗಿದೆ. ಲಾನ್ ಬೌಲ್ಸ್ ಆಟವನ್ನು ಹೆಚ್ಚಾಗಿ ಒಳಾಂಗಣದಲ್ಲಿ ಆಡುವ ರೂಢಿಯಿದೆ. ಹೊರಾಂಗಣ ಕ್ರೀಡೆಯನ್ನಾಗಿಯೂ ಈ ಆಟವನ್ನು ಆಡುವವರಿದ್ದು, ಈ ಆಟವನ್ನು 1190ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಆಡುತ್ತಿದ್ದರು ಎಂಬ ವಿಷಯವನ್ನು ಲೇಖಕ ವಿಲಿಯಮ್ ಫಿಟ್ಜ್ ಸ್ಟೀಫನ್ ತಮ್ಮ 'ಹಿಸ್ಟರಿ ಆಫ್ ಲಂಡನ್' ಪುಸ್ತಕದಲ್ಲಿ ಉಲ್ಲೇಖಿಸಿದ್ದರು. ಈ ಮೂಲಕ ಈ ಆಟ ಹನ್ನೆರಡನೇ ಶತಮಾನದಿಂದಲೂ ಚಾಲ್ತಿಯಲ್ಲಿದ್ದು, ನಿನ್ನೆ ಮೊನ್ನೆಯದಲ್ಲ ಎಂಬ ವಿಷಯ ತಿಳಿದು ಬಂದಿದೆ.

ನಿಯಮಗಳೇನು?
ಲಾನ್ ಬೌಲ್ಸ್ ಆಟದ ಕುರಿತಾದ ನಿಯಮಗಳ ಕಿರು ವಿವರ ಇಲ್ಲಿದೆ
• 42 ಚದರ ಅಡಿ ವಿಸ್ತೀರ್ಣವಿರುವ ಹುಲ್ಲು ಹಾಸಿನ ಮೇಲೆ ಈ ಲಾನ್ ಬೌಲ್ಸ್ ಕ್ರೀಡೆಯನ್ನು ನಡೆಸಲಾಗುತ್ತದೆ.
• ಮೊದಲಿಗೆ 2.5 ಇಂಚಿನ ಸುತ್ತಳತೆಯ ಮರದಿಂದ ತಯಾರಿಸಿರುವ ಚಿಕ್ಕ ಚೆಂಡನ್ನು ಉರುಳಿ ಬಿಡಲಾಗುತ್ತದೆ. ಹೀಗೆ ಉರುಳಿ ಬಿಟ್ಟ ಚಿಕ್ಕ ಚೆಂಡು ನಿಂತ ಜಾಗಕ್ಕೆ ಸರಿಯಾಗಿ ಸೀಮಾ ಗೆರೆಯ ಮೇಲೆ ಆ ಚೆಂಡನ್ನು ಇಡಲಾಗುತ್ತದೆ. ಈ ಚಿಕ್ಕ ಚೆಂಡಿಗೆ ಜಾಕ್ ಅಥವಾ ಕಿಟಿ ಎಂದು ಕರೆಯಲಾಗುತ್ತದೆ.
• ಸುಮಾರು 5 ಇಂಚು ಸುತ್ತಳತೆ ಇರುವ, ಒಂದೂವರೆ ಕೆಜಿ ತೂಕವಿರುವ, ಎರಡು ಬದಿಗಳಲ್ಲಿ ಚಪ್ಪಟೆಯಾಗಿರುವ ಕಬ್ಬಿಣದ ಚೆಂಡನ್ನು ಸೀಮಾ ಗೆರೆಯ ಮೇಲೆ ಇಡಲಾಗುವ ಚಿಕ್ಕ ಚೆಂಡಿನ ಸನಿಹಕ್ಕೆ ಉರುಳಿ ಬಿಡಲಾಗುತ್ತದೆ. ಹೀಗೆ ಉರುಳಿ ಬಿಟ್ಟ ದೊಡ್ಡ ಚೆಂಡು ಸೀಮಾ ಗೆರೆಯನ್ನು ದಾಟಿ ಮತ್ತೊಂದು ಬದಿಯನ್ನು ತಲುಪಿದರೆ ಅದು ಔಟ್ ಎಂದು ಅರ್ಥ. ಒಂದುವೇಳೆ ದೊಡ್ಡ ಚೆಂಡು ಚಿಕ್ಕ ಚೆಂಡಿಗೆ ತಾಕಿ ಮತ್ತೊಂದು ಕಡೆಗೆ ಹೋದರೆ ಅದನ್ನು ಔಟ್ ಎಂದು ಪರಿಗಣಿಸುವುದಿಲ್ಲ.
• ಹೀಗೆ ಎರಡೂ ಬದಿಗಳಿಂದ ಇಬ್ಬರು ಆಟಗಾರರು ದೊಡ್ಡ ಚೆಂಡುಗಳನ್ನು ಒಂದೇ ಚಿಕ್ಕ ಚೆಂಡಿನ ಕಡೆ ಉರುಳಿ ಬಿಡಲಿದ್ದು ಯಾವ ಆಟಗಾರ ಹೆಚ್ಚು ಚೆಂಡುಗಳನ್ನು ಸೀಮಾ ಗೆರೆ ದಾಟದಂತೆ ಚೆಂಡಿನ ಬಳಿ ನಿಲ್ಲಿಸುತ್ತಾರೋ ಅವರು ಜಯ ಸಾಧಿಸಲಿದ್ದಾರೆ.

ಸಿಂಗಲ್ ಮತ್ತು ಗ್ರೂಪ್ ಆಟಗಳು
ಇನ್ನು ಈ ಲಾನ್ ಬೌಲ್ಸ್ ಕ್ರೀಡೆಯನ್ನು ಸಿಂಗಲ್ಸ್ ಮತ್ತು ಗ್ರೂಪ್ ವಿಧಾನಗಳಲ್ಲಿಯೂ ಆಡಲಾಗುತ್ತದೆ. ಗುಂಪಿನ ಆಟದಲ್ಲಿ ಮೂವರು ಆಟಗಾರರು ಒಂದು ತಂಡದ ಪರ ಕಣಕ್ಕಿಳಿಯಲಿದ್ದು, ಮೊದಲು ಚೆಂಡನ್ನು ಉರುಳಿಸುವ ಆಟಗಾರನಿಗೆ ಲೀಡ್ ಎಂದು ಕರೆಯಲಾಗುತ್ತದೆ, ನಂತರ ಚೆಂಡನ್ನು ಉರುಳಿಸುವ ಆಟಗಾರನಿಗೆ ವೈಸ್ ( ಉಪನಾಯಕ ) ಎನ್ನಲಾಗುತ್ತದೆ ಹಾಗೂ ಅಂತಿಮವಾಗಿ ಚೆಂಡು ಉರುಳಿಸುವ ಆಟಗಾರನಿಗೆ ಸ್ಕಿಪ್ ( ನಾಯಕ ) ಎನ್ನುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications