
ಜುಲೈ ತಿಂಗಳಾಂತ್ಯದಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಅಥ್ಲೆಟಿಕ್ಸ್ ತಂಡವನ್ನು ಪ್ರಕಟಿಸಲಾಗಿದೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ನೇತೃತ್ವದಲ್ಲಿ 37 ಸದಸ್ಯರು ಭಾರತ ತಂಡವನ್ನು ಅಥ್ಲೆಟಿಕ್ಸ್ ವಿಭಾಗದಲ್ಲಿ ಮುನ್ನಡೆಸಲಿದ್ದಾರೆ. ಯಾವುದೇ ಅಚ್ಚರಿಯ ಹೆಸರುಗಳಿಲ್ಲದೆ ನಿರೀಕ್ಷಿತ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ(ಎಎಫ್‌ಐ)ದ ಆಯ್ಕೆ ಸಮಿತಿ ಆಯ್ಕೆ ಮಾಡಿದ 37 ಅಥ್ಲೀಟ್‌ಗಳ ಪೈಕಿ 18 ಮಹಿಳಾ ಅಥ್ಲೀಟ್‌ಗಳಿದ್ದಾರೆ. ಸ್ಟಾರ್ ಸ್ಪ್ರಿಂಟರ್‌ಗಳಾದ ಹಿಮಾ ದಾಸ್ ಮತ್ತು ದ್ಯುತಿ ಚಂದ್ ಅವರು ಮಹಿಳೆಯರ 4x100 ಮೀಟರ್ ರಿಲೇ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದ ತಿಂಗಳು ಎರಡು ಬಾರಿ ತನ್ನದೇ ರಾಷ್ಟ್ರೀಯ ದಾಖಲೆ ಮುರಿದ ಜ್ಯೋತಿ ಯರ್ರಾಜಿ ಅವರು ಕೂಡ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪುರುಷರ 4x400 ಮೀ ರಿಲೇ ತಂಡವನ್ನು ಕೂಡ ಹೆಸರಿಸಲಾಗಿದ್ದು ಅವಿನಾಶ್ ಸೇಬಲ್ ಈ ತಂಡದಲ್ಲಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ 14.14 ಮೀಟರ್ ಜಿಗಿದು ತನ್ನದೇ ಆದ ಟ್ರಿಪಲ್ ಜಂಪ್ ರಾಷ್ಟ್ರೀಯ ದಾಖಲೆಯನ್ನು ಮುರಿದ ಐಶ್ವರ್ಯಾ ಬಾಬು ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ರಾಷ್ಟ್ರೀಯ ಅಂತರ-ರಾಜ್ಯ ಕ್ರೀಡಾಕೂಟದಲ್ಲಿ ಸ್ಪ್ರಿಂಟ್ ಡಬಲ್ (100ಮೀ ಮತ್ತು 200ಮೀ) ಗೆದ್ದು 200ಮೀ ರಾಷ್ಟ್ರೀಯ ದಾಖಲೆ ಹೊಂದಿರುವ ಅಮ್ಲಾನ್ ಬೊರ್ಗೊಹೈನ್ ಎಎಫ್‌ಐ ನಿಗದಿಪಡಿಸಿದ ಕಾಮನ್‌ವೆಲ್ತ್ ಅರ್ಹತಾ ಮಾನದಂಡವನ್ನು ತಲುಪಲು ಸಾಧ್ಯವಾಗದ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. ಇನ್ನು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾದರೂ ಕೆಲ ಕ್ರೀಡಾಪಟುಗಳು ಬರ್ಮಿಂಗ್ಹ್ಯಾಮ್ ಗೇಮ್ಸ್ ಮೊದಲು ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾಗುತ್ತದೆ.
ಪುರುಷರ ತಂಡ ಹೀಗಿದೆ: ಅವಿನಾಶ್ ಸೇಬಲ್ (3000ಮೀ ಸ್ಟೀಪಲ್‌ಚೇಸ್), ನಿತೇಂದರ್ ರಾವತ್ (ಮ್ಯಾರಥಾನ್), ಎಂ ಶ್ರೀಶಂಕರ್ ಮತ್ತು ಮುಹಮ್ಮದ್ ಅನೀಸ್ ಯಾಹಿಯಾ (ಲಾಂಗ್ ಜಂಪ್), ಅಬ್ದುಲ್ಲಾ ಅಬೂಬಕರ್, ಪ್ರವೀಣ್ ಚಿತ್ರವೇಲ್ ಮತ್ತು ಎಲ್ದೋಸ್ ಪಾಲ್ (ಟ್ರಿಪಲ್ ಜಂಪ್); ತಜಿಂದರ್ಪಾಲ್ ಸಿಂಗ್ ತೂರ್ (ಶಾಟ್‌ಪುಟ್); ನೀರಜ್ ಚೋಪ್ರಾ, ಡಿಪಿ ಮನು ಮತ್ತು ರೋಹಿತ್ ಯಾದವ್ (ಜಾವೆಲಿನ್ ಥ್ರೋ); ಸಂದೀಪ್ ಕುಮಾರ್ ಮತ್ತು ಅಮಿತ್ ಖತ್ರಿ (ರೇಸ್ ವಾಕಿಂಗ್); ಅಮೋಜ್ ಜಾಕೋಬ್, ನೋಹ್ ನಿರ್ಮಲ್ ಟಾಮ್, ಅರೋಕಿಯಾ ರಾಜೀವ್, ಮುಹಮ್ಮದ್ ಅಜ್ಮಲ್, ನಾಗನಾಥನ್ ಪಾಂಡಿ ಮತ್ತು ರಾಜೇಶ್ ರಮೇಶ್ (4x400 ಮೀ ರಿಲೇ).
ಮಹಿಳೆಯರು: ಎಸ್ ಧನಲಕ್ಷ್ಮಿ (100ಮೀ ಮತ್ತು 4x100ಮೀ ರಿಲೇ); ಜ್ಯೋತಿ ಯರ್ರಾಜಿ (100 ಮೀ ಹರ್ಡಲ್ಸ್); ಐಶ್ವರ್ಯಾ ಬಿ (ಲಾಂಗ್ ಜಂಪ್ ಮತ್ತು ಟ್ರಿಪಲ್ ಜಂಪ್) ಮತ್ತು ಆನ್ಸಿ ಸೋಜನ್ (ಲಾಂಗ್ ಜಂಪ್); ಮನ್‌ಪ್ರೀತ್ ಕೌರ್ (ಶಾಟ್ ಪಟ್); ನವಜೀತ್ ಕೌರ್ ಧಿಲ್ಲೋನ್ ಮತ್ತು ಸೀಮಾ ಅಂತಿಲ್ ಪುನಿಯಾ (ಡಿಸ್ಕಸ್ ಥ್ರೋ); ಅಣ್ಣು ರಾಣಿ ಮತ್ತು ಶಿಲ್ಪಾ ರಾಣಿ (ಜಾವೆಲಿನ್ ಥ್ರೋ); ಮಂಜು ಬಾಲಾ ಸಿಂಗ್ ಮತ್ತು ಸರಿತಾ ರೋಮಿತ್ ಸಿಂಗ್ (ಹ್ಯಾಮರ್ ಥ್ರೋ); ಭಾವನಾ ಜಾಟ್ ಮತ್ತು ಪ್ರಿಯಾಂಕಾ ಗೋಸ್ವಾಮಿ (ರೇಸ್ ವಾಕಿಂಗ್); ಹಿಮಾ ದಾಸ್, ದ್ಯುತಿ ಚಂದ್, ಶ್ರಬಾನಿ ನಂದಾ, ಎಂವಿ ಜಿಲ್ನಾ ಮತ್ತು ಎನ್ಎಸ್ ಸಿಮಿ (4x100 ಮೀ ರಿಲೇ).