
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ತಮ್ಮ ವಿಚ್ಛೇದಿತ ಪತ್ನಿ ಹಸಿನ್ ಜಹಾನ್‌ಗೆ ಮಾಸಿಕ 50,000 ರೂಪಾಯಿ ಜೀವನಾಂಶ ನೀಡುವಂತೆ ಕೋಲ್ಕತ್ತಾ ನ್ಯಾಯಾಲಯವು ಆದೇಶಿಸಿದೆ. ನಾಲ್ಕು ವರ್ಷಗಳ ಹಿಂದೆ ಹಸಿನ್ ಜಹಾನ್ ಅವರು ಮೊಹಮ್ಮದ್ ಶಮಿ ವಿರುದ್ಧ ಹಲವು ಕೌಟುಂಬಿಕ ಆರೋಪಗಳನ್ನು ಮಾಡಿದ್ದರು.
ನ್ಯಾಯಾಲಯದ ಆದೇಶದ ನಂತರವೂ ಮೊಹಮ್ಮದ್ ಶಮಿ ನೀಡಬೇಕಾದ ಪ್ರತಿ ತಿಂಗಳ ಜೀವನಾಂಶದ ಬಗ್ಗೆ ಹಸಿನ್ ಜಹಾನ್ ಸಂತೋಷಗೊಂಡಿಲ್ಲ. ಏಕೆಂದರೆ ಹಸಿನ್ ಜಹಾನ್ ಅವರು ಮೊಹಮ್ಮದ್ ಶಮಿಯಿಂದ ತಿಂಗಳಿಗೆ 10 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.
2018ರಲ್ಲಿ ಹಸಿನ್ ಜಹಾನ್ ಮಾಸಿಕ 10 ಲಕ್ಷ ರೂಪಾಯಿ ಜೀವನಾಂಶವನ್ನು ಕೋರಿ ಕಾನೂನು ಮೊಕದ್ದಮೆ ಹೂಡಿದ್ದರು. ಇದರಲ್ಲಿ ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ಮತ್ತು ತಮ್ಮ ಮಗಳ ವಿದ್ಯಾಭ್ಯಾಸ ನಿರ್ವಹಣೆಗಾಗಿ 3 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಳು.
ಹೆಚ್ಚಿನ ಜೀವನಾಂಶ ಪಾವತಿಗಾಗಿ ಹಸಿನ್ ಜಹಾನ್ ಈ ತೀರ್ಪನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ಸೋಮವಾರ, ಜನವರಿ 23ರಂದು ಅಲಿಪುರ ನ್ಯಾಯಾಲಯದ ನ್ಯಾಯಾಧೀಶರಾದ ಅನಿಂದಿತಾ ಗಂಗೂಲಿ ಅವರು ಮಾಸಿಕ 50,000 ರೂಪಾಯಿ ಜೀವನಾಂಶ ನೀಡುವ ತೀರ್ಪು ನೀಡಿದರು.
ನಾಲ್ಕು ವರ್ಷಗಳ ಹಿಂದೆ ಮೊಹಮ್ಮದ್ ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪದ ಮೇಲೆ ಹಸಿನ್ ಜಹಾನ್ ಜಾಧವ್‌ಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ ನಂತರ, ದಾಂಪತ್ಯ ಕಲಹ ಹೊರಬಿತ್ತು. ಹಸಿನ್ ಜಹಾನ್ ತನ್ನ ದೂರಿನಲ್ಲಿ, ಮೊಹಮ್ಮದ್ ಶಮಿ ಮೇಲೆ ಕೌಟುಂಬಿಕ ದೌರ್ಜನ್ಯ ಮತ್ತು ಕೊಲೆ ಯತ್ನದ ಜಾಮೀನು ರಹಿತ ಆರೋಪಗಳನ್ನು ಹೊರಿಸಲಾಗಿತ್ತು.

ಉತ್ತರ ಪ್ರದೇಶದ ತನ್ನ ಊರಿಗೆ ಹೋದಾಗಲೆಲ್ಲ ಮೊಹಮ್ಮದ್ ಶಮಿ ಮತ್ತು ಆತನ ಕುಟುಂಬದವರು ತನಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಹಸಿನ್ ಜಹಾನ್ ಹೇಳಿಕೊಂಡಿದ್ದಾರೆ.
ಬೇರೆ ಬೇರೆ ಫೋನ್ ನಂಬರ್‌ಗಳನ್ನು ಬಳಸಿ ಮೊಹಮ್ಮದ್ ಶಮಿ ತನಗೆ ಫೋನ್ ಮೂಲಕ ಬೆದರಿಕೆ ಹಾಕುತ್ತಿದ್ದ ಎಂದು ಜಹಾನ್ ದೂರಿದ್ದಳು.
ಆದರೆ, ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಯಾವಾಗಲೂ ಹಸಿನ್ ಜಹಾನ್ ಅವರ ಆರೋಪಗಳನ್ನು ನಿರಾಕರಿಸುತ್ತಿದ್ದರು ಮತ್ತು ಆರೋಪಗಳು ಸುಳ್ಳು ಎಂದು ಹೇಳಿದ್ದರು. ಇದು ತಮ್ಮ ಮಾನಹಾನಿ ಮಾಡುವ ಪಿತೂರಿ ಎಂದು ತಿರುಗೇಟು ನೀಡಿದ್ದರು.
ಹಸಿನ್ ಜಹಾನ್ ಅವರು ಮಾಡುತ್ತಿರುವ ಕೌಟುಂಬಿಕ ದೌರ್ಜನ್ಯದ ಆರೋಪಗಳು ಸತ್ಯವೆಂದು ಸಾಬೀತಾದರೆ ಕ್ಷಮೆ ಕೇಳಲು ಸಿದ್ಧ ಎಂದು ಮೊಹಮ್ಮದ್ ಶಮಿ ಈ ಹಿಂದೆ ತಿಳಿಸಿದ್ದರು.