
ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಮಡಿಲಿಗೆ ನಾಲ್ಕನೇ ಪದಕ ತಲುಪಿದೆ. ವೈಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ 55 ಕೆಜಿ ವಿಭಾಗದಲ್ಲಿ ಶನಿವಾರ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಭಾರತದ ಮಹಿಳಾ ವೇಟ್‌ಲಿಫ್ಟರ್ ಬಿಂದ್ಯಾ ಒಟ್ಟಾರೆ 202 ಕೆಜಿ ಎತ್ತುವಲ್ಲಿ ಸಫಲರಾಗಿದ್ದು ಬೆಳ್ಳಿ ಪದಕವನ್ನ ಗೆದ್ದು ಬೀಗಿದ್ದಾರೆ. ಈ ಮೂಲಕ ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದು ಬೀಗಿದೆ. ಎಲ್ಲಾ ಪದಕಗಳು ವೇಟ್‌ಲಿಫ್ಟಿಂಗ್‌ನಲ್ಲಿ ವಿಭಾಗದಿಂದ ಬಂದಿರುವುದು ವಿಶೇಷ.
ಬಿಂದ್ಯಾರಾಣಿ ದೇವಿ ಒಟ್ಟು 202 ಕೆ.ಜಿ. ಭಾರವನ್ನ ಎತ್ತಿದ್ದು, ಇದರಲ್ಲಿ ಸ್ನ್ಯಾಚ್‌ನಲ್ಲಿ ಆಕೆಯ ಅತ್ಯುತ್ತಮ ಪ್ರಯತ್ನವೆಂದರೆ 86 ಕೆಜಿ ಆಗಿದೆ. ಆದ್ರೆ ಆಕೆ ಕ್ಲೀನ್ ಮತ್ತು ಜರ್ಕ್‌ನಲ್ಲಿ 116 ಕೆಜಿ ತೂಕವನ್ನು ನಿರ್ವಹಿಸಿದರು.
ಕೊನೆಯ ಪ್ರಯತ್ನ ಮಾಡುವ ವೇಳೆಗೆ ಮೂರನೇ ಸ್ಥಾನದಲ್ಲಿದ್ದ ಬಿಂದ್ಯಾದೇವಿ ಕ್ಲೀನ್ ಮತ್ತು ಜರ್ಕ್‌ನಲ್ಲಿ 116 ಕೆಜಿ ತೂಕವನ್ನು ಎತ್ತುವ ಮೂಲಕ ವೈಯಕ್ತಿಕ ದಾಖಲೆ ಜೊತೆಗೆ ರಜತ ಪದಕವನ್ನ ಗೆಲ್ಲುವಲ್ಲಿ ಯಶಸ್ವಿಯಾದ್ರು. ಇದು ಕಾಮನ್‌ವೆಲ್ತ್‌ಗೇಮ್ಸ್‌ನಲ್ಲಿ ಬಿಂದ್ಯಾರಾಣಿಯ ಮೊದಲ ಪದಕವಾಗಿದೆ.
ಬಿಂದ್ಯಾದೇವಿಗಿಂತ ಕೇವಲ ಒಂದು ಕೆ.ಜಿ ಹೆಚ್ಚು ಎತ್ತುವಲ್ಲಿ ಸಫಲಗೊಂಡ ನೈಜೀರಿಯಾದ ಆದಿಜತ್ ಅಡೆನಿಕ್ ಒಲರಿನೊಯ್ ಚಿನ್ನದ ಪದಕ ಗೆದ್ದರು (203 ಕೆಜಿ). ಸ್ಥಳೀಯ ಪ್ರತಿಭೆ ಫ್ರೇರ್ ಮಾರೊ ಅವರು ಒಟ್ಟು 198 ಕೆಜಿ ತೂಕ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.
ಬಿಂದ್ಯಾರಾಣಿ ಸಾಧನೆಯನ್ನ ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಶುಭ ಕೋರಿದ್ದಾರೆ. '' ಬರ್ಮಿಂಗ್‌ಹ್ಯಾಮ್‌ನ CWGಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಕ್ಕಾಗಿ ಬಿಂದ್ಯಾರಾಣಿ ದೇವಿ ಅವರಿಗೆ ಅಭಿನಂದನೆಗಳು. ಈ ಸಾಧನೆಯು ಆಕೆಯ ದೃಢತೆಯ ದ್ಯೋತಕವಾಗಿದೆ ಮತ್ತು ಇದು ಪ್ರತಿಯೊಬ್ಬ ಭಾರತೀಯನನ್ನೂ ತುಂಬಾ ಸಂತೋಷಪಡಿಸಿದೆ. ಆಕೆಯ ಮುಂದಿನ ಪ್ರಯತ್ನಗಳಿಗೆ ನಾನು ಶುಭ ಹಾರೈಸುತ್ತೇನೆ'' ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಭಾರತದ ಪರ ಮಹಿಳೆಯರ 49 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು ಚಿನ್ನದ ಪದಕ ಗೆಲ್ಲುವ ಮೂಲಕ ತನ್ನ ಅದ್ಭುತ ಪ್ರದರ್ಶನ ಮುಂದುವರಿಸಿದ್ರು. ಇದಲ್ಲದೆ ಪುರುಷರ 55 ಕೆಜಿ ವಿಭಾಗದಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಮತ್ತು ಕನ್ನಡಿಗ ಗುರುರಾಜ ಪೂಜಾರಿ ಪುರುಷರ 61 ಕೆಜಿಯಲ್ಲಿ ಕಂಚಿನ ಪದಕ ಪಡೆದರು, ಭಾರತವು ವೇಟ್‌ಲಿಫ್ಟಿಂಗ್ ಅಖಾಡದಿಂದ ನಾಲ್ಕು ಪದಕಗಳೊಂದಿಗೆ ಪದಕ ಬೇಟೆಯನ್ನು ಪ್ರಾರಂಭಿಸಿತು.