ಆರ್ಚರಿ ವಿಶ್ವಕಪ್: ಮಿಶ್ರ ಡಬಲ್ಸ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ದೀಪಿಕಾ ಕುಮಾರಿ, ಅತನು ದಾಸ್ ಜೋಡಿ

ಪ್ಯಾರಿಸ್, ಜೂನ್ 27: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನಲ್ಲಿ ಭಾರತದ ಸ್ಟಾರ್ ದಂಪತಿಗಳಾದ ಅತನು ದಾಸ್ ಹಾಗೂ ದೀಪಿಕಾ ಕುಮಾರಿ ಜೋಡಿ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ. ಭಾನುವಾರ ನಡೆದ ಸ್ಟೇಜ್ 3 ಹಂತದಲ್ಲಿ ನೆದರ್ಲ್ಯಾಂಡ್ ವಿರುದ್ಧ 5-3 ಅಂತರದಿಂದ ಗೆಲುವು ಸಾಧಿಸಿತು.
ದೀಪಿಕಾ ಅತನು ಜೋಡಿ ಆರಂಭದಲ್ಲಿ 0-2 ಅಂತರದಿಂದ ಹಿನ್ನಡೆಯಲ್ಲಿತ್ತು. ಆದರೆ ನಂತರ ತಿರುಗಿಬೀಳುವಲ್ಲಿ ಅದು ಯಶಸ್ವಿಯಾಯ್ತು. ಅಂತಿಮವಾಗಿ ನೆದರ್ಲೆಂಡ್‌ನ ಸ್ಜೆಫ್ ವ್ಯಾನ್ ಡೆನ್ ಬರ್ಗ್ ಮತ್ತು ಗೇಬ್ರಿಯೆಲಾ ಷ್ಲೋಸರ್ ಜೋಡಿಯನ್ನು 5-3 ಅಂತರದಿಂದ ಮಣಸಲು ಯಶಸ್ವಿಯಾದರು. ಈ ಮೂಲಕ ಈ ಸ್ಪರ್ಧೆಯಲ್ಲಿ ಭಾರತ ಮೂರನೇ ಚಿನ್ನವನ್ನು ಮುಡುಗೇರಿಸಿಕೊಂಡಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಅತನು ದಾಸ್ "ಇದೊಂದು ಅದ್ಭುತವಾದ ಅನುಭವ. ಮೊದಲ ಬಾರಿಗೆ ನಾವು ಫೈನಲ್‌ನಲ್ಲಿ ಜೊತೆಯಾಗಿ ಆಡಿದ್ದೇವೆ ಹಾಗೂ ಗೆಲುವು ಸಾಧಿಸಿದ್ದೇವೆ. ತುಂಬಾ ಅದ್ಭುತವಾದ ಅನುಭವ" ಎಂದಿದ್ದಾರೆ. ಎರಡು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಮದುವೆಯಾಗಿದ್ದರು. ಜೂನ್ 30ರಂದು ಈ ಜೋಡಿ ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದಾರೆ.
ಇದಕ್ಕೂ ಮುನ್ನ ಮಹಿಳಾ ವಿಭಾಗದಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕಾತ್ ಮತ್ತು ಕೋಮಲಿಕಾ ಬ್ಯಾರಿ ಅವರ ತಂಡ ಮೆಕ್ಸಿಕೋ ತಂಡವನ್ನು ಮಣಿಸಿ ಚಿನ್ನವನ್ನು ಗೆದ್ದುಕೊಂಡಿತು. ಶನಿವಾರ ನಡೆದ ಪಂದ್ಯದಲ್ಲಿ ಅಭಿಶೇಕ್ ವರ್ಮಾ ವೈಯಕ್ತಿಕ ವಿಭಾಗದಲ್ಲಿ ಗೆಲುವು ಸಾಧಿಸಿ ಭಾರತದ ಚಿನ್ನದ ಪದಕದ ಖಾತೆ ತೆರೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications