ಭಾರತದ ಸ್ಟಾರ್ ಮಹಿಳಾ ಆರ್ಚರಿ ದೀಪಿಕಾ ಕುಮಾರಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಭಾನುವಾರ ಮೆಕ್ಸಿಕೊದ ಟ್ಲಾಕ್ಸ್‌ಕಾಲದಲ್ಲಿ ನಡೆದ ಆರ್ಚರಿ ವಿಶ್ವಕಪ್ ಫೈನಲ್ 2024 ರಲ್ಲಿ ಮಹಿಳೆಯರ ರಿಕರ್ವ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ದೀಪಿಕಾ ಕುಮಾರಿ ಎಡುವಿದ್ದರು. ಇದೀಗ ಆರ್ಚರಿ ವಿಶ್ವಕಪ್ ಫೈನಲ್ 2024 ರ ಫೈನಲ್‌ನಲ್ಲಿ ಚೀನಾದ ಲಿ ಜಿಯಾಮನ್ ವಿರುದ್ಧ 0-6 ಅಂತರದಲ್ಲಿ ಸೋಲು ಕಂಡಿದ್ದಾರೆ. ಎರಡನೇ ಸ್ಥಾನ ಪಡೆದ ದೀಪಿಕಾ ಕುಮಾರಿ ಅವರು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.

8 ಆರ್ಚರಿಗಳು ವಿಶ್ವಕಪ್ ಟೂರ್ನಿಯಲ್ಲಿ ವೈಯಕ್ತಿಕ ಪುರುಷರ ಮತ್ತು ಮಹಿಳೆಯರ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಯಾಂಗ್ ಕ್ಸಿಯಾಲಿ ವಿರುದ್ಧ 6-0 ನೇರ ಸೆಟ್‌ಗಳ ಜಯದೊಂದಿಗೆ ದೀಪಿಕಾ ತಮ್ಮ ಅಭಿಯಾನ ಆರಂಭಿಸಿದರು. ಇದಾದ ಬಳಿಕ ಸೆಮಿ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ದೀಪಿಕಾ ಅವರು ಮೆಕ್ಸಿಕೋದ ಅಲೆಜಾಂಡ್ರಾ ವೆಲೆನ್ಸಿಯಾ ವಿರುದ್ಧ 6-4 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದರು. ಆದರೆ ಫೈನಲ್‌ನಲ್ಲಿ ಜಿಯಾಮನ್ ವಿರುದ್ಧ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರೆಸಲು ಒತ್ತಡದಲ್ಲಿದ್ದ ದೀಪಿಕಾ ಅವರಿಗೆ ಸಾಧ್ಯವಾಗಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಿಯಾಮನ್ ಬೆಳ್ಳಿ ಪದಕ ಜಯಿಸಿದ್ದರು. ದೀಪಿಕಾ ಭಾರತವನ್ನು 4 ಬಾರಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿದ್ದಾರೆ.
ದೀಪಿಕಾ ಆರ್ಚರಿ ವಿಶ್ವಕಪ್ ಫೈನಲ್‌ನಲ್ಲಿ 9ನೇ ಬಾರಿ ಕಾಣಿಸಿಕೊಂಡಿದ್ದು, 5 ಬೆಳ್ಳಿ ಹಾಗೂ 1 ಕಂಚು ಸೇರಿದಂತೆ 6 ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ದೀಪಿಕಾ ಅವರು, 2011, 2012, 2013, 2015 ಮತ್ತು 2024 ರಲ್ಲಿ ಆರ್ಚರಿ ವಿಶ್ವಕಪ್ ಫೈನಲ್‌ನಲ್ಲಿ ಸೋತು ರನ್ನರ್ ಅಪ್ ಆಗಿದ್ದಾರೆ. ಆದರೆ, 2018ರಲ್ಲಿ ದೀಪಿಕಾ ಕಂಚಿನ ಪದಕವನ್ನು ಗೆದ್ದಿದ್ದರು. ಮೊದಲ ಬಾರಿಗೆ 2007ರಲ್ಲಿ ದುಬೈನಲ್ಲಿ ನಡೆದ ವಿಶ್ವಕಪ್‌ನಲ್ಲಿ ಡೋಲಾ ಬ್ಯಾನರ್ಜಿ ಅವರು ಚಿನ್ನದ ಪದಕ ಗೆದ್ದಿದ್ದು, ಇದಾದ ಬಳಿಕ ಭಾರತದ ಯಾವೊಬ್ಬ ಮಹಿಳಾ ಆರ್ಚರಿ ಕೂಡ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ.
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ದೀಪಿಕಾ ಅವರು ಭಜನ್ ಕೌರ್ ಮತ್ತು ಅಂಕಿತಾ ಭಕ್ತ ಅವರೊಂದಿಗೆ ಮಹಿಳೆಯರ ವೈಯಕ್ತಿಕ ಮತ್ತು ಮಹಿಳಾ ತಂಡದ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. ಎರಡೂ ಪಂದ್ಯಗಳಲ್ಲಿ ಅವರ ಪ್ರಯಾಣವು ಕ್ವಾರ್ಟರ್ ಫೈನಲ್‌ನಲ್ಲಿ ಕೊನೆಗೊಂಡಿತು.