
ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್ ಅವರು ಗುರುವಾರ, ಮಾರ್ಚ್ 2ರಂದು ತನ್ನ ಸಲಿಂಗ ಸಂಗಾತಿ ಜಾರ್ಜಿ ಹಾಡ್ಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದನ್ನು ಟ್ವಿಟ್ಟರ್ ಪೋಸ್ಟ್‌ನೊಂದಿಗೆ ಘೋಷಿಸುವ ಮೂಲಕ ಕ್ರೀಡಾಭಿಮಾನಿಗಳಿಗೆ ಅಚ್ಚರಿ ಸುದ್ದಿಯೊಂದನ್ನು ನೀಡಿದ್ದಾರೆ.
ಜಾರ್ಜಿ ಹಾಡ್ಜ್ ಸಿಎಎ ಬೇಸ್‌ನಲ್ಲಿ ಮಹಿಳಾ ಫುಟ್‌ಬಾಲ್‌ನ ಮುಖ್ಯಸ್ಥಳಾಗಿದ್ದಾಳೆ. ಡೇನಿಯಲ್ ವ್ಯಾಟ್ ಅವರ ಟ್ವೀಟ್ ಕೇಪ್ ಟೌನ್‌ನಿಂದ ಬಂದಿದ್ದು, ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023ರ ನಂತರವೂ ಇನ್ನೂ ದಕ್ಷಿಣ ಆಫ್ರಿಕಾದಲ್ಲಿದ್ದಾರೆ ಎಂಬುದು ಗೊತ್ತಾಗಿದೆ. ಡೇನಿಯಲ್ ವ್ಯಾಟ್ ಅವರು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಭಾಗವಾಗಿದ್ದರು.
'ಎಂದೆಂದಿಗೂ ನನ್ನವಳು' ಎಂದು ಇಂಗ್ಲೆಂಡ್ ಮಹಿಳಾ ಕ್ರಿಕೆಟಿರ್ ಟ್ವಿಟರ್‌ನಲ್ಲಿ ತನ್ನ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದು, ಸದ್ಯ ಕ್ರಿಕೆಟ್‌ನಿಂದ ಡೇನಿಯಲ್ ವ್ಯಾಟ್‌ಗೆ ಒಂದೆರಡು ತಿಂಗಳು ವಿಶ್ರಾಂತಿ ಇದೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ.

ಇನ್ನು ಡೇನಿಯಲ್ ವ್ಯಾಟ್ ಅವರು ಇತ್ತೀಚಿಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2023ರ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದು, ಹೀಗಾಗಿ ಭಾರತದ ಶ್ರೀಮಂತ ಟಿ20 ಲೀಗ್‌ನ ಭಾಗವಾಗುವುದಿಲ್ಲ. ಆದರೂ ಪಂದ್ಯಾವಳಿಯಲ್ಲಿ ಡೇನಿಯಲ್ ವ್ಯಾಟ್‌ಗೆ ಬಾಗಿಲುಗಳು ಮುಚ್ಚಿಲ್ಲ, ಯಾವುದೇ ತಂಡವು ಬಯಸಿದಲ್ಲಿ ಬದಲಿ ಆಟಗಾರ್ತಿಯಾಗಿ ಸೇರಿಕೊಳ್ಳಬಹುದು.
ವಾಗ್ಗಿ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುವ ಡೇನಿಯಲ್ ವ್ಯಾಟ್, ಈ ಹಿಂದೆ ಇಬ್ಬರು ಫುಟ್ಬಾಲ್ ಆಟಗಾರರೊಂದಿಗೆ ಪ್ರೀತಿ ಸಂಬಂಧವನ್ನು ಹೊಂದಿದ್ದಳು.
ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಮದುವೆಯ ಪ್ರಸ್ತಾಪ ಮಾಡಿದ್ದಕ್ಕಾಗಿ ಡೇನಿಯಲ್ ವ್ಯಾಟ್ ಅವರನ್ನು ಪ್ರೀತಿಯಿಂದ ಈಗಲೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. "ಕೊಹ್ಲಿ ನನ್ನನ್ನು ಮದುವೆಯಾಗು!!' ಎಂದು ಡೇನಿಯಲ್ ವ್ಯಾಟ್ 2014ರಲ್ಲಿ ಟ್ವೀಟ್ ಮಾಡಿದ್ದರು.

ಡೇನಿಯಲ್ ವ್ಯಾಟ್ ಇಂಗ್ಲೆಂಡ್ ಪರ 102 ಏಕದಿನ ಪಂದ್ಯಗಳನ್ನು ಆಡಿ 1776 ರನ್ ಮತ್ತು 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು 143 ಟಿ20 ಪಂದ್ಯಗಳನ್ನು ಆಡಿ 2369 ರನ್‌ಗಳನ್ನು ಗಳಿಸಿದ್ದು, 46 ವಿಕೆಟ್‌ಗಳನ್ನು ಪಡೆದಿದ್ದಾರೆ. 31ರ ಹರೆಯದ ಡೇನಿಯಲ್ ವ್ಯಾಟ್ ಈ ಹಿಂದೆಯೂ ಬಿಸಿಸಿಐನ ಮಹಿಳಾ ಟಿ20 ಚಾಲೆಂಜರ್ ಕಪ್‌ನ ಭಾಗವಾಗಿದ್ದರು.
ಮಹಿಳಾ ಕ್ರಿಕೆಟ್‌ನಲ್ಲಿರುವ ವಿವಿಧ ದೇಶಗಳ ಕೆಲವು ಸಲಿಂಗ ದಂಪತಿಗಳೆಂದರೆ ನ್ಯೂಜಿಲೆಂಡ್‌ನ ಲಿಯಾ ತಹುಹು ಮತ್ತು ಆಮಿ ಸ್ಯಾಟರ್ಥ್‌ವೈಟ್, ದಕ್ಷಿಣ ಆಫ್ರಿಕಾದ ಡೇನ್ ವ್ಯಾನ್ ನೀಕರ್ಕ್ ಮತ್ತು ಮಾರಿಜಾನ್ನೆ ಕಾಪ್ ಇದ್ದಾರೆ.
ಇನ್ನು ಆಸ್ಟ್ರೇಲಿಯಾದ ಮೇಗನ್ ಶುಟ್ ಮತ್ತು ಜೆಸ್ ಹೋಲಿಯೋಕ್, ಜೆಸ್ ಜೊನಾಸೆನ್ ಮತ್ತು ಸಾರಾ ವೇರ್ನ್, ಇಂಗ್ಲೆಂಡ್‌ನ ನ್ಯಾಟ್ ಸಿವರ್ ಮತ್ತು ಕ್ಯಾಥರೀನ್ ಬ್ರಂಟ್, ದಕ್ಷಿಣ ಆಫ್ರಿಕಾದ ಲಿಜೆಲ್ಲೆ ಲೀ ಮತ್ತು ತಾಂಜಾ ಕ್ರೋನಿಯೆ, ಲಾರೆನ್ ವಿನ್‌ಫೀಲ್ಡ್-ಹಿಲ್ ಮತ್ತು ಕರ್ಟ್ನಿ ಹಿಲ್, ಹೇಲಿ ಜೆನ್ಸನ್ ಮತ್ತು ನಿಕೋಲಾ ಹ್ಯಾನ್‌ಕಾಕ್ ಅವರು ಸಲಿಂಗ ವಿವಾಹವಾಗಿದ್ದಾರೆ.