ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಳೆದ ಕೆಲವು ಆವೃತ್ತಿಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. 2023ರ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ ಕೇವಲ 4 ಗೆಲುವಿನೊಂದಿಗೆ ಕೊನೆಯ ಸ್ಥಾನ ಪಡೆಯಿತು.
ಐಡೆನ್ ಮಾರ್ಕ್ರಾಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಈ ವರ್ಷದ ಪಂದ್ಯಾವಳಿಯಲ್ಲಿ ಇತರ ಒಂಬತ್ತು ತಂಡಗಳಿಗೆ ಪ್ರತಿರೋಧ ನೀಡಲು ಹತ್ತಿರವೂ ಸುಳಿಯಲಿಲ್ಲ.

ಕೆಲವು ದೊಡ್ಡ ಆಟಗಾರರನ್ನು ತಂಡವು ಒಳಗೊಂಡಿದ್ದರೂ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಬಿಗ್ ಹಿಟ್ಟರ್‌ಗಳ ಕೊರತೆ ಇತ್ತು. ಸನ್‌ರೈಸರ್ಸ್ ಹೈದರಾಬಾದ್ ಈ ಮೊದಲು ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್ ಅವರನ್ನು ಹೊರಹಾಕಿದರು.
ನಂತರ, ಜಾನಿ ಬೈರ್‌ಸ್ಟೋವ್ ಮತ್ತು ರಶೀದ್ ಖಾನ್ ಅವರನ್ನು ಉಳಿಸಿಕೊಳ್ಳಲಿಲ್ಲ ಮತ್ತು ನಿರಂತರವಾಗಿ ತಂಡವನ್ನು ಬದಲಾಯಿಸಿದ್ದು ಸಹಾಯಕ್ಕೆ ಬರಲಿಲ್ಲ.

ಅಸ್ಥಿರ ಪ್ರದರ್ಶನದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಬೇಕಾಯಿತು. ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಹಾಗೂ ಸಿಇಒ ಕಾವ್ಯಾ ಮಾರನ್ ಅವರಡಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಐಪಿಎಲ್ ಹರಾಜು ಟೇಬಲ್‌ನಲ್ಲಿ ತಂಡವನ್ನು ಆರಿಸುವಾಗ ಅಥವಾ ಆಟಗಾರರನ್ನು ಬಿಡ್ ಮಾಡಲು ತನ್ನನ್ನು ತಾನು ವ್ಯಕ್ತಪಡಿಸುವಾಗ ಅಭಿಮಾನಿಗಳು ಕಾವ್ಯಾ ಮಾರನ್ ಉತ್ಸಾಹವನ್ನು ನೋಡಲು ಉತ್ಸುಕರಾಗಿದ್ದರು.
ಇನ್ನು ಕಳೆದ ಎರಡು ಆವೃತ್ತಿಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ತವರು ಮೈದಾನ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನ ವಿಐಪಿ ಬಾಕ್ಸ್‌ನಲ್ಲಿ ಸಂತೋಷದ ಕಾವ್ಯಾಳನ್ನು ನೋಡಿದ್ದಕ್ಕಿಂತ ಬೇಸರಗೊಂಡಿರುವ ಕಾವ್ಯಾಳನ್ನು ನೋಡಿದ್ದೆ ಹೆಚ್ಚಾಗಿತ್ತು.
ಕಾವ್ಯಾ ಮಾರನ್ ಬೇಸರಗೊಂಡು ದುಃಖಿತರಾಗಿ ಕುಳಿತಿರುವುದನ್ನು ನೋಡಿ ಸೂಪರ್‌ಸ್ಟಾರ್ ನಟ ರಜನಿಕಾಂತ್ ಅವರ ಹೃದಯ ಕರಗಿದೆ. ಈ ಕುರಿತು ಅವರ ಮುಂಬರುವ ಚಿತ್ರ "ಜೈಲರ್' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸನ್‌ರೈಸರ್ಸ್ ಹೈದರಾಬಾದ್ ಮಾಲೀಕ ಮತ್ತು ಜೈಲರ್ ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಅವರಿಗೆ, "ತಂಡದಲ್ಲಿ ಒಳ್ಳೆಯ ಆಟಗಾರರನ್ನು ಸೇರಿಸಿಕೊಳ್ಳಿ. ಏಕೆಂದರೆ ಅವರು ಕಾವ್ಯಾಳ ಇಂತಹ ಬೇಸರದ ಭಾವನೆಗಳನ್ನು ನೋಡಲಾಗುವುದಿಲ್ಲ," ಎಂದು ವಿನಂತಿಸಿದರು.
ಕಲಾನಿಧಿ ಮಾರನ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆಟಗಾರರನ್ನು ತೆಗೆದುಕೊಳ್ಳಬೇಕು. ಐಪಿಎಲ್ ಸಮಯದಲ್ಲಿ ಕಾವ್ಯಾಳನ್ನು ಹಾಗೆ ಟಿವಿಯಲ್ಲಿ ನೋಡಿ ಬೇಸರವಾಗುತ್ತಿದೆ ಎಂದು ನಟ ರಜನಿಕಾಂತ್ ಹೇಳಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಮಾಲೀಕರಿಗೆ ತಲೈವಾ ರಜನಿಕಾಂತ್ ಅವರ ಈ ವಿನಂತಿಯು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
'ಕಾವ್ಯಾ ಈ ರೀತಿ ದುಃಖಿಸುತ್ತಿರುವುದನ್ನು ನಾನೂ ನೋಡಿದೆ. ಅವಳು ಅದಕ್ಕೆ ಅರ್ಹಳಲ್ಲ' ಎಂದು ಟ್ವಿಟ್ಟರ್‌ನಲ್ಲಿ ಅಭಿಮಾನಿಯೊಬ್ಬ ಬರೆದುಕೊಂಡಿದ್ದರೆ, ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ 'ರಜನಿ ಸರ್, ನಾವೂ ಕೂಡ ಕಾವ್ಯಾಳನ್ನು ಹಾಗೆ ನೋಡಿ ಬೇಸರಗೊಂಡಿದ್ದೇವೆ' ಎಂದು ಬರೆದುಕೊಂಡಿದ್ದಾರೆ.