ಭಾರತ ಕ್ರಿಕೆಟ್‌ನ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ತಮ್ಮ 50ನೇ ಹುಟ್ಟುಹಬ್ಬದ ಆಚರಣೆಯನ್ನು ನೆನಪಿಸಿಕೊಂಡಿದ್ದಾರೆ ಮತ್ತು ಭಾರತೀಯ ಬೀಚ್‌ಗಳ ಪ್ರಚಾರಕ್ಕಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ತಮ್ಮ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಮತ್ತು ಫೋಟೋವನ್ನು ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ (ಟ್ವಿಟ್ಟರ್)ನಲ್ಲಿ ಹಂಚಿಕೊಂಡರು. ಪಶ್ಚಿಮ ಕರಾವಳಿ ನಗರದ ಅದ್ಭುತ ಸ್ಥಳಗಳು ಮತ್ತು ಅದ್ಭುತ ಆತಿಥ್ಯಕ್ಕಾಗಿ ಪ್ರಶಂಸಿಸಿದರು.

ವಿದೇಶಿ ದ್ವೀಪ ಸ್ಥಳಗಳಿಗೆ ಭೇಟಿ ನೀಡುವ ಬದಲಾಗಿ ಭಾರತೀಯ ಪ್ರವಾಸೋದ್ಯಮ ಹೆಚ್ಚಿಸಲು ಹಾಗೂ ಭಾರತದಲ್ಲಿನ ಸ್ಥಳೀಯ ಬೀಚ್‌ಗಳನ್ನು ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೆಂಡಿಂಗ್ ಮಧ್ಯೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ಪೋಸ್ಟ್ ಮಾಡಿದ್ದಾರೆ.
"ನಾವು ಸಿಂಧುದುರ್ಗದಲ್ಲಿ ನನ್ನ 50ನೇ ಹುಟ್ಟುಹಬ್ಬ ಆಚರಿಸಿಕೊಂಡು 250 ದಿನಗಳಾಗಿವೆ! ಕರಾವಳಿ ಪಟ್ಟಣವು ನಮಗೆ ಬೇಕಾದುದನ್ನು ಮತ್ತು ಹೆಚ್ಚಿನದನ್ನು ನೀಡಿದೆ. ಅದ್ಭುತವಾದ ಆತಿಥ್ಯದೊಂದಿಗೆ ಸುಂದರವಾದ ಸ್ಥಳಗಳು ನಮಗೆ ನೆನಪುಗಳ ಖಜಾನೆಯೊಂದಿಗೆ ಉಳಿದಿವೆ".
"ಭಾರತವು ಸುಂದರವಾದ ಕರಾವಳಿ ಮತ್ತು ಪ್ರಾಚೀನ ದ್ವೀಪಗಳಿಂದ ಆಶೀರ್ವದಿಸಲ್ಪಟ್ಟಿದೆ. ನಮ್ಮ "ಅತಿಥಿ ದೇವೋ ಭವ' ತತ್ತ್ವಶಾಸ್ತ್ರದೊಂದಿಗೆ, ನಾವು ಅನ್ವೇಷಿಸಲು ತುಂಬಾ ಇದೆ. ಹಲವು ಸುಂದರ ನೆನಪುಗಳು ಸೃಷ್ಟಿಯಾಗಲು ಕಾಯುತ್ತಿವೆ. #ExploreIndianIslands," ಎಂದು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಲಕ್ಷದ್ವೀಪ ಸಮೂಹಕ್ಕೆ ಭೇಟಿ ನೀಡಿದ ಕೆಲವು ದಿನಗಳ ನಂತರ, ಮಾಲ್ಡೀವ್ಸ್ ಸಚಿವರೊಬ್ಬರು ಮಾಡಿದ ಟ್ವೀಟ್‌ಗೆ ಸಂಬಂಧಿಸಿದಂತೆ ಸಚಿನ್ ತೆಂಡೂಲ್ಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ ಮತ್ತು ಭಾರತೀಯ ದ್ವೀಪಗಳಿಗೆ ಭೇಟಿ ನೀಡುವಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಮಾಲ್ಡೀವ್ಸ್ ಸಚಿವರ ಪೋಸ್ಟ್ ವಿವಾದ ಭುಗಿಲೆದ್ದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಭಾರತೀಯ ಸಿನಿಮಾ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ ಸೇರಿದಂತೆ ದೇಶದ ನಾಗರೀಕರು ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನ ತಮ್ಮ ಯೋಜಿತ ರಜಾದಿನಗಳನ್ನು ರದ್ದುಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಮಾಲ್ಡೀವ್ಸ್ ರಾಷ್ಟ್ರವನ್ನು ಭಾರತವು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ ಮಾಲ್ಡೀವ್ಸ್ ಸಚಿವರ ಟ್ವೀಟ್‌ನಿಂದ ವಿವಾದವು ಉದ್ಭವಿಸಿದ್ದು, ದ್ವೀಪ (ಬೀಚ್) ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ನೊಂದಿಗೆ ಸ್ಪರ್ಧಿಸಲು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿಕೊಂಡಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಲವರು ತಮ್ಮ ರದ್ದುಗೊಳಿಸಿದ ವಿಮಾನ ಪ್ರಯಾಣ ಮತ್ತು ಹೋಟೆಲ್ ಬುಕ್ಕಿಂಗ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ '#BoycottMaldives' ಸಹ ಭಾರತದ ಎಕ್ಸ್‌ನಲ್ಲಿನ ಟಾಪ್ ಟ್ರೆಂಡಿಂಗ್‌ಗಳಲ್ಲಿ ಒಂದಾಗಿದೆ.
ವಿಶೇಷವಾಗಿ, ಕಳೆದ ವರ್ಷ ನವೆಂಬರ್‌ನಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅಧಿಕಾರ ವಹಿಸಿಕೊಂಡ ನಂತರ, ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಾಗಿದೆ.
ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ತಮ್ಮ ವಿದೇಶಾಂಗ ನೀತಿಯಲ್ಲಿ ಬದಲಾವಣೆಯನ್ನು ಸೂಚಿಸಿದ್ದಾರೆ. ಚೀನಾದೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದ್ದಾರೆ ಮತ್ತು ಹಿಂದಿನ ಸರ್ಕಾರದ "ಭಾರತ ಮೊದಲು' ವಿಧಾನದಿಂದ ನಿರ್ಗಮಿಸಿದ್ದಾರೆ.