
ಇತ್ತೀಚಿನ ವರದಿಗಳ ಪ್ರಕಾರ, ಭಾರತದ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅವರ ವಿವಾಹವು ಸೋಮವಾರ, ಜನವರಿ 23ರಂದು ಮುಂಬೈನಲ್ಲಿ ನಡೆಯಲಿದೆ ಎನ್ನಲಾಗಿದೆ.
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರ ಎರಡು ಕುಟುಂಬಗಳು ಮೂಲತಃ ಕರ್ನಾಟಕದ ಮಂಗಳೂರಿನವರಾಗಿದ್ದಾರೆ ಎನ್ನುವುದು ವಿಶೇಷ. ಇನ್ನು ಈ ಮದುವೆಗೆ ಹಾಜರಾಗಲು ಕೇವಲ ಅತ್ಯಾಪ್ತರಿಗೆ ಮಾತ್ರ ಆಹ್ವಾನಿಸಲಾಗಿದ್ದು, ವಿವಾಹ ಕಾರ್ಯಕ್ರಮಕ್ಕೆ ಬರುವ ಅತಿಥಿಗಳು ಕೆಲವು ಕಡ್ಡಾಯ ಷರತ್ತುಗಳನ್ನು ಅನುಸರಿಸರಿಸಬೇಕಿದೆ.
ಟೈಮ್ಸ್‌ನೌ ವರದಿ ಪ್ರಕಾರ, ಭಾನುವಾರ, ಜನವರಿ 22ರಂದು ಮೆಹಂದಿ ಕಾರ್ಯಕ್ರಮದೊಂದಿಗೆ ವಿವಾಹ ಪೂರ್ವ ಸಮಾರಂಭಗಳು ಪ್ರಾರಂಭವಾಗಲಿವೆ. ಸುನೀಲ್ ಶೆಟ್ಟಿ ಅವರ ಮುಂಬೈನ ಮನೆಯಲ್ಲಿ ಸಮಾರಂಭ ನಡೆಯಲಿದೆ. ಮರುದಿನ ಅಂದರೆ, ಸೋಮವಾರದಂದು ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಅದ್ಧೂರಿ ಬಂಗಲೆಯಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
ಎರಡೂ ಕುಟುಂಬಗಳ ಕಡೆಯಿಂದ 100 ಅತಿಥಿಗಳು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಮೆರವಣಿಗೆಯ ಯಾವುದೇ ಫೋಟೋಗಳು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳದಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮದುವೆಯ ಸಂದರ್ಭದಲ್ಲಿ ಅತಿಥಿಗಳ ಮೊಬೈಲ್ ಫೋನ್ ಕೂಡ ದೂರ ಇಡಲಾಗುತ್ತದೆ. ಖಂಡಾಲಾದಲ್ಲಿ ಮದುವೆಯ ಕೆಲವು ದಿನಗಳ ನಂತರ, ನವ ದಂಪತಿ ಮುಂಬೈನಲ್ಲಿ ತಮ್ಮ ಅತ್ಮೀಯ ಸ್ನೇಹಿತರಿಗಾಗಿ ಅದ್ಧೂರಿ ವಿವಾಹ ಆರತಕ್ಷತೆಯನ್ನು ಆಯೋಜಿಸಿದ್ದಾರೆ ಎಂದು ವರದಿ ಮಾಡಲಾಗಿದೆ.
ಇದಕ್ಕೂ ಮುನ್ನ ಪ್ರಸಿದ್ಧ ಫೋಟೋಗ್ರಾಫರ್ ವರೀಂದರ್ ಚಾವ್ಲಾ ಅವರು ಕೆಎಲ್ ರಾಹುಲ್ ಅವರ ಅಪಾರ್ಟ್‌ಮೆಂಟ್ ಹೊರಭಾಗವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರು. ಛಾಯಾಗ್ರಾಹಕ ಹಂಚಿಕೊಂಡ ವೀಡಿಯೊದಲ್ಲಿ, ಕಟ್ಟಡವು ವರ್ಣರಂಜಿತ ಬೆಳಕಿನಿಂದ ಅಲಂಕರಿಸಲ್ಪಟ್ಟಿದೆ.
ಆದರೆ ಇಲ್ಲಿ ಒಂದು ಗೊಂದಲವಿದ್ದು, ಇದು ಕ್ರಿಕೆಟಿಗ ಕೆಎಲ್ ರಾಹುಲ್ ಮದುವೆಗೆ ಸಂಬಂಧಿಸಿದ್ದಲ್ಲ. ಈ ದೀಪಾಲಂಕಾರ ಕಟ್ಟಡದಲ್ಲಿ ಬೇರೆ ನಿವಾಸಿಗಳ ಮದುವೆಗೆ ಇರಬಹುದು. ಕೆಎಲ್ ರಾಹುಲ್- ಅಥಿಯಾ ಶೆಟ್ಟಿ ಅವರ ಯೋಜಿತ ವಿವಾಹಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಲಾಗಿದೆ.

ಫೋಟೋಗ್ರಾಫರ್ ವರೀಂದರ್ ಚಾವ್ಲಾ ಅವರು, "ಮದುವೆ ತಯಾರಿಗಳು ಭರದಿಂದ ಸಾಗಿವೆ. ಅಥಿಯಾ ಶೆಟ್ಟಿ ಅವರೊಂದಿಗಿನ ವಿವಾಹದ ಮೊದಲು, ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಕಟ್ಟಡದ ಹೊರಗಿನ ದೃಶ್ಯಗಳು" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಇನ್ನು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಮದುವೆ ಬಗ್ಗೆ ಅವರ ಎರಡೂ ಕುಟುಂಬಗಳು ಮೌನವಾಗಿವೆ. ಇತ್ತೀಚಿನ ವರದಿಗಳ ಪ್ರಕಾರ, ಜನವರಿ 23ರಂದು ನಟಿ ಮತ್ತು ಕ್ರಿಕೆಟಿಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿಸಲಾಗಿದೆ.
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಖಂಡಾಲಾ ಬಂಗಲೆಯಲ್ಲಿ ಕೇವಲ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಉಪಸ್ಥಿತಿಯಲ್ಲಿ ವಿವಾಹವಾಗಲಿದ್ದಾರೆ.
ಅಥಿಯಾ ಶೆಟ್ಟಿ ಅವರ ಸ್ನೇಹಿತೆಯರಾದ ನಟಿ ಆಕಾಂಕ್ಷಾ ರಂಜನ್ ಅವರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದು, ಅಥಿಯಾ ಅವರ ಸ್ನೇಹಿತೆಯರು, ಸಹೋದರ-ನಟ ಅಹಾನ್ ಶೆಟ್ಟಿ ಮತ್ತು ಪೋಷಕರಾದ ಸುನೀಲ್ ಶೆಟ್ಟಿ ಮತ್ತು ಮಾಯಾ ಶೆಟ್ಟಿ ಅವರು ಸಂಗೀತ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.