Paralympics 2024: ಭಾರತದ ಜೂನಿಯರ್ ಗೋಲ್ಡನ್ ಬಾಯ್ ಹೋರಾಟದ ಪಯಣ
2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಒಟ್ಟು 29 ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪೆಟ್ಟಿಗೆಯಲ್ಲಿ 7 ಬಂಗಾರ ಪದಕಗಳಿರುವುದು ವಿಶೇಷ.
ಪ್ಯಾರಾಲಿಂಪಿಕ್ಸ್‌ನಲ್ಲಿ ಮಿಂಚು ಹರಿಸಿದ ಅಥ್ಲೀಟ್‌ಗಳ ಪಟ್ಟಿಯಲ್ಲಿ ನಾಲ್ಕೂವರೆ ಅಡಿ ಎತ್ತರದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಅವರ ಹೆಸರು ಭಾರೀ ಸದ್ದು ಮಾಡುತ್ತಿದೆ. ಅವರ ಎತ್ತರ ಚಿಕ್ಕದಾಗಿರಬಹುದು, ಆದರೆ ಅವರ ಧೈರ್ಯ, ಛಲ ಮತ್ತು ಸಾಧನೆ ಯಾರಿಗೂ ಕಮ್ಮಿ ಇಲ್ಲ.

ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ನವದೀಪ್ ಸಿಂಗ್ ಇತಿಹಾಸ ಸೃಷ್ಟಿಸಿದ್ದಾರೆ. ಇದಾದ ನಂತರ ಅವರು ಭಾರತದ ಜೂನಿಯರ್ ಗೋಲ್ಡನ್ ಬಾಯ್ ಎಂದೇ ಖ್ಯಾತಿ ಗಳಿಸಿದ್ದಾರೆ. ಆದರೆ ಜೂನಿಯರ್ ಗೋಲ್ಡನ್ ಬಾಯ್ ಆಗುವ ಅವರ ಪಯಣ ಸುಲಭವಾಗಿರಲಿಲ್ಲ.
ಒಲಿದ ಅದೃಷ್ಟ
ಪ್ಯಾರಾಲಿಂಪಿಕ್ಸ್‌ನ ಎಫ್41 ವಿಭಾಗದ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನವದೀಪ್ ಸಿಂಗ್ ಅವರಿಗೆ ಅದೃಷ್ಟ ಒಲಿದಿದೆ. ಫೈನಲ್ ಪಂದ್ಯದ ಆರಂಭದಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರೂ ಕ್ಷಣ ಮಾತ್ರದಲ್ಲಿ ಅದು ಚಿನ್ನವಾಯಿತು.
ಏಕೆಂದರೆ ಚಿನ್ನದ ಪದಕ ಗೆದ್ದ ಇರಾನ್ ಅಥ್ಲೀಟ್ ಸಾಡೆಗ್ ಬೀತ್ ಸಯಾಹ್ ವಿವಾದಾತ್ಮಕ ಬಾವುಟ ತೋರಿಸಿ ಅನರ್ಹಗೊಂಡರು. ಹೀಗಾಗಿ ನವದೀಪ್ ಸಿಂಗ್ ಜೂನಿಯರ್ ಗೋಲ್ಡನ್ ಬಾಯ್ ಆದರು. ಈ ಮೂಲಕ ಎಫ್41 ವಿಭಾಗದ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತದ ಅಥ್ಲೀಟ್ ಎನಿಸಿಕೊಂಡರು.
ಸಮಸ್ಯೆಯೇ ಸಾಧನೆಗೆ ಮೆಟ್ಟಿಲು
ನವದೀಪ್ ಸಿಂಗ್ ಅವರ ಈ ಪಯಣ ಸುಲಭವಾಗಿರಲಿಲ್ಲ. ಹರಿಯಾಣದ ಕೃಷಿ ಕುಟುಂಬದಲ್ಲಿ ನವದೀಪ್ ಜನಿಸಿದರು. ಅವರ ತಂದೆ ಕೃಷಿಕರಾಗಿದ್ದು, ಹಾಲಿನ ಡೈರಿಯನ್ನೂ ನಡೆಸುತ್ತಿದ್ದರು. ಅವರು ಆರಂಭದಲ್ಲಿ 'ಕುಬ್ಜ' ಸಮಸ್ಯೆಯನ್ನೂ ಎದುರಿಸಬೇಕಾಯಿತು.
ನವದೀಪ್ ಅವರ ಎತ್ತರ ಕೇವಲ ನಾಲ್ಕು ಅಡಿ ನಾಲ್ಕು ಇಂಚು. ಆದರೆ ಅವರು ಅದನ್ನು ತಮ್ಮ ಸಾಧನೆಗೆ ಅಡ್ಡಿಯಾಗಲು ಬಿಡಲಿಲ್ಲ. ನವದೀಪ್ ತಂದೆ ಕೂಡ ರಾಷ್ಟ್ರಮಟ್ಟದ ಕುಸ್ತಿಪಟು. ನವದೀಪ್ ಅವರಿಗೆ 2 ವರ್ಷ ತುಂಬಿದಾಗ, ತಮ್ಮ ಮಗನಿಗೆ ಕುಬ್ಜತೆ ಇರುವುದು ಪತ್ತೆಯಾಗಿತ್ತು. ಆದರೆ ಅವರು ತಮ್ಮ ಮಗನನ್ನು ಬೆಂಬಲಿಸಿದ್ದರು. ನವದೀಪ್ ಸಿಂಗ್ ಸಹಾ ಬಾಲ್ಯದಿಂದಲೂ ಅಥ್ಲೆಟಿಕ್ಸ್ ಅನ್ನು ತುಂಬಾ ಇಷ್ಟಪಡುತ್ತಿದ್ದರು. ಹೀಗಾಗಿ ಸಮಸ್ಯೆಯನ್ನೇ ತಮ್ಮ ಸಾಧನೆಗೆ ಮೆಟ್ಟಿಲು ಮಾಡಿಕೊಂಡರು.
ವೃತ್ತಿಜೀವನ
ನವದೀಪ್ 2017 ರಲ್ಲಿ ಏಷ್ಯನ್ ಯೂತ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ರಾಷ್ಟ್ರೀಯ ಸ್ಪರ್ಧೆ ಮತ್ತು 2021ರಲ್ಲಿ ವಿಶ್ವ ಪ್ಯಾರಾ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದು ದಾಖಲೆ ಸೃಷ್ಟಿಸಿದರು. 2024ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದರು.
ಅವರ ಗಮನ ಕೇವಲ ಕ್ರೀಡೆಯ ಮೇಲೆ ಮಾತ್ರವಲ್ಲದೆ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ನವದೀಪ್ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನೀರಜ್ ಚೋಪ್ರಾ ಅವರಿಂದ ಸ್ಫೂರ್ತಿ ಪಡೆದ ನವದೀಪ್ ಇಂದು ಭಾರತದ ಜೂನಿಯರ್ ಗೋಲ್ಡನ್ ಬಾಯ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications