2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಬುಧವಾರದಿಂದ (ಆಗಸ್ಟ್ 28) ಆರಂಭವಾಗಿದೆ. ಭಾರತದ ಕ್ರೀಡಾಪಟುಗಳು ಇಂದಿನಿಂದ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.
ಭಾರತದ ಒಟ್ಟು 84 ಅಥ್ಲೀಟ್‌ಗಳು 12 ಕ್ರೀಡೆಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಭಾರತದಿಂದ ಹಿಂದೆಂದೂ ಇಷ್ಟೊಂದು ಸಂಖ್ಯೆ ಕ್ರೀಡಾಪಟುಗಳು ಭಾಗವಹಿಸಿರಲಿಲ್ಲ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 54 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು.

ಈ ಬಾರಿ ಕ್ರೀಡಾಕೂಟದಲ್ಲಿ ಪ್ಯಾರಾ-ಸೈಕ್ಲಿಂಗ್, ರೋಯಿಂಗ್ ಮತ್ತು ಜೂಡೋ ಕ್ರೀಡೆಗಳಲ್ಲಿ ಭಾರತ ಮೊದಲ ಬಾರಿಗೆ ಸ್ಪರ್ಧಿಸುತ್ತಿದೆ. ಕಳೆದ ಬಾರಿ ಟೋಕಿಯೊದಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚು ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದು ಐತಿಹಾಸಿಕ ಮೈಲಿಗಲ್ಲು ಸಾಧಿಸಿತ್ತು.
ಇದೀಗ ಮತ್ತೊಮ್ಮೆ ಭಾರತೀಯ ಕ್ರೀಡಾಪಟುಗಳು ಪ್ಯಾರಿಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಈ ಬಾರಿ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಅವಕಾಶವನ್ನು ಹೊಂದಿದ್ದಾರೆ. ಪದಕಗಳನ್ನು ಗೆಲ್ಲಬಲ್ಲ ಭಾರತದ ಕೆಲವು ಕ್ರೀಡಾಪಟುಗಳ ಬಗ್ಗೆ ಇಲ್ಲಿದೆ ಮಾಹಿತಿ ತಿಳಿಯಿರಿ.
ಟೋಕಿಯೊ 2020ರಲ್ಲಿ ಪ್ಯಾರಾಲಿಂಪಿಕ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅವನಿ ಲೇಖರಾ ಅವರು ಪಾತ್ರರಾಗಿದ್ದರು. ಅವರು 10 ಮೀಟರ್ ಏರ್ ರೈಫಲ್ SH1 ಸ್ಪರ್ಧೆಯಲ್ಲಿ ಚಿನ್ನ ಗೆದ್ದರೆ, 50 ಮೀಟರ್ ರೈಫಲ್ 3 ಪೊಸಿಷನ್ಸ್ SH1 ನಲ್ಲಿ ಕಂಚಿನ ಪದಕಕ್ಕೆ ಮುತ್ತಕ್ಕಿದ್ದರು. ಈ ಬಾರಿಯೂ ಇವರಿಂದ ಭಾರತ ಪದಕದ ನಿರೀಕ್ಷೆಯಲ್ಲದೆ.
ನಾಲ್ಕು ವರ್ಷಗಳ ಹಿಂದೆ ಅಂದರೆ ಟೋಕಿಯೋದಲ್ಲಿ ಪುರುಷರ ಪ್ಯಾರಾ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಸುಮಿತ್ ಆಂಟಿಲ್ ಚಿನ್ನದ ಪದಕ ಗೆದ್ದಿದ್ದರು. ಈಗ ಪ್ಯಾರಿಸ್‌ನಲ್ಲಿ ಅವರು ತಮ್ಮ ಬಂಗಾರದ ಪದಕವನ್ನು ಉಳಿಸಿಕೊಳ್ಳವ ಭರವಸೆಯಲ್ಲಿದ್ದಾರೆ.
ಸುಮಿತ್ 2023 ಮತ್ತು 2024 ರಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರ ಅತ್ಯುತ್ತಮ ಫಾರ್ಮ್ ಮತ್ತು ಹಿಂದಿನ ಯಶಸ್ಸನ್ನು ಪರಿಗಣಿಸಿ ಪದಕ ಗೆಲ್ಲಬಹುದು ಎನ್ನಲಾಗುತ್ತಿದೆ.
17 ವರ್ಷದ ಶೀತಲ್ ದೇವಿ ಭಾರತದ ಉದಯೋನ್ಮುಖ ಪ್ಯಾರಾ ಕ್ರೀಡಾಪಟು ಆಗಿದ್ದಾರೆ. 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ವೈಯಕ್ತಿಕ ಮತ್ತು ಮಿಶ್ರ ತಂಡದ ಸ್ಪರ್ಧೆಗಳಲ್ಲಿ ಚಿನ್ನ ಗೆಲ್ಲುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. 2023 ರಲ್ಲಿ ಅವರು ಪ್ಯಾರಾ-ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಪ್ಯಾರಿಸ್ ಕ್ರೀಡಾಕೂಟಕ್ಕೆ ಆರ್ಹತೆ ಪಡೆದಿದ್ದಾರೆ. ಇವರಿಂದಲ್ಲೂ ಪದಕದ ನಿರೀಕ್ಷೆಯಲ್ಲಿದೆ ಭಾರತ.
ಮಾನ್ಸಿ ಜೋಶಿ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ನ ಅಗ್ರ ಶಟ್ಲರ್‌ಗಳಲ್ಲಿ ಒಬ್ಬರು. ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ ಒಟ್ಟು ಏಳು ಬಾರಿ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ. ಇದಲ್ಲದೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮೂರು ಚಿನ್ನ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈಗಾಗಲೇ ಹಲವು ಸಾಧನೆಗಳನ್ನು ಮಾಡಿರುವ ಮಾನ್ಸಿ ಭಾರತದ ಪ್ರಬಲ ಪದಕ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.
ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಕೃಷ್ಣ ನಗರ ಅವವರು ಎರಡನೇ ಶ್ರೇಯಾಂಕವನ್ನು ಪಡೆದಿದ್ದಾರೆ. ಟೋಕಿಯೊ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಇದಲ್ಲದೆ, ನಗರ 2024ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.
2021ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಸಾಧನೆಗಳ ಮಹಾಪೂರವೇ ಅವರನ್ನು ಪ್ಯಾರಿಸ್‌ನಲ್ಲಿ ಪದಕ ಗೆಲ್ಲುವ ಪ್ರಬಲ ಸ್ಪರ್ಧಿಯನ್ನಾಗಿ ಮಾಡಿದೆ.