90ರ ದಶಕದ ಕ್ರಿಕೆಟ್ ಪ್ರೇಮಿಗಳು ಎಂದೂ ಮರೆಯದ ಭಾರತ ತಂಡದ ಮಾಜಿ ಆಟಗಾರ ಕ್ರಿಕೆಟಿಗ ದೊಡ್ಡ ಗಣೇಶ್ (ದೊಡ್ಡನರಸಯ್ಯ ಗಣೇಶ್) ಶುಕ್ರವಾರ, ಏಪ್ರಿಲ್ 5ರಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಕ್ಕೆ ಸೇರ್ಪಡೆಗೊಂಡಿದ್ದಾರೆ.
ಭಾರತ ಮತ್ತು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಬಗ್ಗೆ ತಮ್ಮ ನೇರ ನುಡಿಗಳಿಂದಲೇ ಹೆಸರುವಾಸಿಯಾಗಿರುವ ದೊಡ್ಡ ಗಣೇಶ್ ಅವರು ಕ್ರಿಕೆಟ್ ಹೊರತುಪಡಿಸಿ, ರಾಜಕೀಯಕ್ಕೆ ಧುಮುಕ್ಕಿದ್ದಾರೆ.
ದೊಡ್ಡ ಗಣೇಶ್ ಕರ್ನಾಟಕ ರಣಜಿ ತಂಡದ ಪರವಾಗಿ ಮತ್ತು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಪರವಾಗಿ 1997ರಲ್ಲಿ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.

ದೊಡ್ಡ ಗಣೇಶ್ ಬೌಲರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದರು. ಇದೀಗ ಇವರು ಬಿಜೆಪಿ ಪಕ್ಷ ಸೇರುವ ಮೂಲಕ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟು ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರೊಂದಿಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ ಮತ್ತು ಕೊಪ್ಪಳ ಮಾಜಿ ಸಂಸದ ಶಿವರಾಮಗೌಡ ಬಿಜೆಪಿ ಸೇರಿದರು.

ಕರ್ನಾಟಕ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ತಮ್ಮ ಸೀಮಿತ ಟೆಸ್ಟ್ ಅವಕಾಶಗಳಲ್ಲಿ ಛಾಪು ಮೂಡಿಸಲು ವಿಫಲರಾದರು. 57.40ರ ಸರಾಸರಿಯಲ್ಲಿ ಕೇವಲ ಐದು ವಿಕೆಟ್‌ಗಳನ್ನು ಪಡೆದರು. ಆದರೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದೊಡ್ಡ ಗಣೇಶ್ 104 ಪಂದ್ಯಗಳಿಂದ 365 ವಿಕೆಟ್‌ಗಳನ್ನು ಪಡೆದರು, ಇದರಲ್ಲಿ 299 ವಿಕೆಟ್‌ಗಳು ದೇಶೀಯ ತಂಡವಾದ ಕರ್ನಾಟಕ ಪರವಾಗಿ ಬಂದಿವೆ.
ದೊಡ್ಡ ಗಣೇಶ್ ಮೊದಲು ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಭಾರತದ 1983ರ ವಿಶ್ವಕಪ್ ವಿಜೇತ ವಿಕೆಟ್-ಕೀಪರ್ ಸೈಯದ್ ಕಿರ್ಮಾನಿ ಅವರನ್ನು ಆರಾಧ್ಯ ಕ್ರಿಕೆಟಿಗನಾಗಿ ಕಂಡುಕೊಂಡರು. ಮತ್ತೊಬ್ಬ ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಅವರು ದೊಡ್ಡ ಗಣೇಶ್ ಬೌಲಿಂಗ್ ಪ್ರತಿಭೆಯನ್ನು ಗುರುತಿಸಿ ಚಿಕ್ಕಣ್ಣ ಕ್ಲಬ್‌ಗೆ ಸೇರಿಸಿದರು.
1990ರ ದಶಕ ಕರ್ನಾಟಕ ಕ್ರಿಕೆಟ್‌ಗೆ ಸುವರ್ಣ ಯುಗವಾಗಿತ್ತು. 1994-95ರ ಋತುವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದರೂ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ಮತ್ತು ಸುನಿಲ್ ಜೋಶಿ ಅವರ ಉಪಸ್ಥಿತಿಯಿಂದಾಗಿ ದೊಡ್ಡ ಗಣೇಶ್ ಕರ್ನಾಟಕ ತಂಡದಲ್ಲಿ ಶಾಶ್ವತ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ.