ದೆಹಲಿ ಮ್ಯಾರಥಾನ್‌ನಲ್ಲಿ ಬೆಳ್ಳಿ ಗೆದ್ದು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಬೆಳ್ಳಿಯಪ್ಪ

ದೆಹಲಿಯಲ್ಲಿ ನಡೆದ ಅಪೋಲೋ ಟೈಯರ್ಸ್ ನವದೆಹಲಿ ಮ್ಯಾರಥಾನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕರ್ನಾಟಕದ ಎ.ಬಿ. ಬೆಳ್ಳಿಯಪ್ಪ 2023ರ ಸೆಪ್ಟಂಬರ್ ನಲ್ಲಿ ಚೀನಾದ ಹಾಂಗ್ಝೂ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಬೆಳ್ಳಿಯಪ್ಪ, ಮಾನ್‌ಸಿಂಗ್ ಹಾಗೂ ಕಾರ್ತಿಕ್ ಕುಮಾರ್ ಮೂವರು ಕೂಡ 2 ಗಂಟೆ 15 ನಿಮಿಷದೊಳಗೆ ಓಟ ಪೂರೈಸುವ ಮೂಲಕ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡರು.
ಕಳೆದ ತಿಂಗಳು 2 ಗಂಟೆ 16.58 ನಿಮಿಷಗಳಲ್ಲಿ ಗುರಿ ತಲುಪಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದ ಮಾನ್ ಸಿಂಗ್ ದೆಹಲಿ ಮ್ಯಾರಥಾನ್‌ನಲ್ಲಿ ತಮ್ಮ ಓಟವನ್ನು 2 ಗಂಟೆ 14.13 ನಿಮಿಷಗಳಲ್ಲಿ ಪೂರೈಸುವ ಮೂಲಕ ಸಾಧನೆಯನ್ನು ಉತ್ತಮಪಡಿಸಿಕೊಂಡಿದ್ದಲ್ಲದೆ ಚಿನ್ನದ ಪದಕ ಮತ್ತು 1.5 ಲಕ್ಷ ರುಪಾಯಿ ಬಹುಮಾನವನ್ನು ಪಡೆದುಕೊಂಡರು.
ಕರ್ನಾಟಕದ ಬೆಳ್ಳಿಯಪ್ಪ 2 ಗಂಟೆ 14.15 ನಿಮಿಷಗಳಲ್ಲಿ ಓಟ ಮುಕ್ತಾಯಗೊಳಿಸುವ ಮೂಲಕ 2 ಸೆಕೆಂಡ್‌ಗಳ ಅಂತರದಲ್ಲಿ ಮೊದಲನೇ ಸ್ಥಾನವನ್ನು ತಪ್ಪಿಸಿಕೊಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಕಾರ್ತಿಕ್ ಕುಮಾರ್ 2 ಗಂಟೆ 14.19 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಕಂಚಿನ ಪದಕ ಗೆದ್ದರು. ಮಾನ್ ಸಿಂಗ್ ಮತ್ತು ಕಾರ್ತಿಕ್ ಕುಮಾರ್ ನಡುವಿನ ಸಮಯದ ಅಂತರ ಕೇವಲ 6 ಸೆಕೆಂಡ್‌ಗಳಾಗಿತ್ತು. ಮೂವರ ನಡುವೆ ಭಾರಿ ಹಣಾಹಣಿ ಇದ್ದುದ್ದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಮಹಿಳಾ ವಿಭಾಗದಲ್ಲಿ ಜ್ಯೋತಿ ಗಾವಟೆಗೆ ಚಿನ್ನ
ಮಹಿಳೆಯರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಜ್ಯೋತಿ ಗಾವಟೆ ಚಿನ್ನದ ಪದಕ ಗೆದ್ದುಕೊಂಡರು. ಆದರೂ ಅವರು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲವಾದರು. ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು ಸ್ಪರ್ಧಿಗಳು 2 ಗಂಟೆ 47 ನಿಮಿಷಗಳ ಗುರಿ ನಿಗದಿ ಮಾಡಲಾಗಿದೆ.
ಜ್ಯೋತಿ ಗಾವಟೆ 2 ಗಂಟೆ 53.04 ನಿಮಿಷಗಳಲ್ಲಿ ಗುರಿ ತಲುಪಿದರು. ಅಶ್ವಿನಿ ಜಾಧವ್ (2 ಗಂಟೆ 53.06 ನಿಮಿಷ) ಹಾಗೂ ಜಿಗ್ಮೆತ್ ಡೊಲ್ಮಾ(2 ಗಂಟೆ 56.41 ನಿಮಿಷ) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.
16 ಸಾವಿರಕ್ಕೂ ಹೆಚ್ಚು ಅಥ್ಲಿಟ್‌ಗಳು ಭಾಗಿ
"ಅಥ್ಲಿಟ್‌ಗಳಿಗೆ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು ಬೇಕಿದ್ದ ವೇದಿಕೆಯನ್ನು ಎನ್‌ಇಬಿ ನೀಡಿದೆ. ಮೂವರು ಎಲೈಟ್ ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದಿರುವುದು ಬಹಳ ಖುಷಿಯ ವಿಚಾರ" ಎಂದು ರೇಸ್ ನಿರ್ದೇಶಕರಾಗಿರುವ ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆಯ ನಾಗರಾಜ್ ಅಡಿಗ ಹೇಳಿದರು.
"ದೇಶದಲ್ಲಿರುವ ಓಟಗಾರರ ಸಮೂಹದಿಂದ ಅಪೋಲೋ ಟಯರ್ಸ್ ನವದೆಹಲಿ ಮ್ಯಾರಥಾನ್‌ಗೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ಬಹಳ ಸಂತೋಷವಾಗುತ್ತಿದೆ. ನಮ್ಮ ಮೂವರು ಪುರುಷ ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್ ಅರ್ಹತಾ ಗುರಿ ತಲುಪಿರುವುದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ" ಎಂದು ಅಪೋಲೋ ಟಯರ್ಸ್ ಸಂಸ್ಥೆಯ ಏಷ್ಯಾ ಪೆಸಿಫಿಕ್, ಮಧ್ಯ ಪ್ರಾಚ್ಯ ಹಾಗೂ ಆಫ್ರಿಕಾ ಅಧ್ಯಕ್ಷ ಸತೀಶ್ ಶರ್ಮಾ ಹೇಳಿದರು.
16000ಕ್ಕೂ ಅಧಿಕ ಓಟಗಾರರು ನಾಲ್ಕು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಈ ಮೂಲಕ ನವದೆಹಲಿ ಮ್ಯಾರಥಾನ್ ದೇಶದಲ್ಲಿ ಅತಿಹೆಚ್ಚು ಓಟಗಾರರನ್ನು ಆಕರ್ಷಿಸಿದ ಮ್ಯಾರಥಾನ್‌ಗಳಲ್ಲಿ ಒಂದೆನಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications