Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎರವಲು ಪಡೆದ ಪೋಲ್‌ನಿಂದ ರಾಷ್ಟ್ರೀಯ ದಾಖಲೆ ಬರೆದ ಕರ್ನಾಟಕದ ಸಿಂಧು ಶ್ರೀ

ಬಡತನ ಎಂಬುದು ಶಾಪವಲ್ಲ, ಅದೊಂದು ಸವಾಲು ಎಂಬುದನ್ನು ತನ್ನ ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಾಬೀತುಪಡಿಸಿದ ಛಲಗಾರ್ತಿ ಸಿಂಧು ಶ್ರೀ. ಹೊಟ್ಟೆ ಹಸಿವಿನ ನಡುವೆಯೇ ಕನಸು ಕಾಣುವುದನ್ನು ಕಲಿಯುವುದೇ ಒಂದು ಸಾಹಸ. ಅಂತಹದರಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಇವರು, ತಮ್ಮ ಸಾಧನೆಯೆಂಬ ಗಿಡಕ್ಕೆ ತನ್ನ ಶ್ರಮದ ಮೂಲಕ ಪ್ರತಿ ದಿನವೂ ನೀರೂ ಹಾಕುತ್ತಾ ಬಂದರು. ಈಗ ಇಷ್ಟ ಪಟ್ಟು ಕಲಿತ ಕ್ರೀಡೆಯಲ್ಲಿ ಇಂದು ಸಿಂಧು ಶ್ರೀ ದೇಶಕ್ಕೆ ಹೆಮ್ಮೆ ತರುವಂತಹ ಕೆಲಸವನ್ನು ಮಾಡಿದ್ದಾರೆ.

ಸಿಂಧು ಶ್ರೀ ಅವರ ಬದುಕು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. 2022 ರಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅವರ ತಂದೆ ಗಣೇಶ್ ಆರ್. ಅವರು ಅಕಾಲಿಕ ಮರಣ ಹೊಂದಿದರು. ತಂದೆಯನ್ನು ಕಳೆದುಕೊಂಡ ಕುಟುಂಬಕ್ಕೆ ಆರ್ಥಿಕವಾಗಿ ದೊಡ್ಡ ಆಘಾತ ಎದುರಾಯಿತು. ಆ ಸಮಯದಲ್ಲಿ ಅವರ ತಾತ ಇಡೀ ಕುಟುಂಬಕ್ಕೆ ಆರ್ಥಿಕವಾಗಿ ಆಸರೆಯಾದರು. ಇತ್ತ ತಾಯಿ ಕೂಡ ಸಣ್ಣಪುಟ್ಟ ಹೊಲಿಗೆ ಕೆಲಸ ಮಾಡಿಕೊಂಡು ಬರುವ ಅಲ್ಪಸ್ವಲ್ಪ ಆದಾಯದಲ್ಲೇ ಸಂಸಾರ ನಿಭಾಯಿಸಲು ಮುಂದಾದರು.

Sindhushree

ಮನೆಯಲ್ಲಿ ಇಷ್ಟೊಂದು ಕಷ್ಟಗಳಿದ್ದರೂ ಸಿಂಧು ತನ್ನ ಕನಸನ್ನು ಕೈಬಿಡಲಿಲ್ಲ. ಮನೆಯವರ ವಿಶ್ವಾಸವನ್ನು ಗೆದ್ದು ಕ್ರೀಡೆಯಲ್ಲಿಯೇ ತನ್ನ ಭವಿಷ್ಯ ಎಂದು ಪೋಲ್‌ ವೋಲ್ಟ್‌ ಬೆನ್ನು ಹತ್ತಿದರು. ಅಂದಹಾಗೆ ಭುವನೇಶ್ವರದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಲು ಇವರಿಗೆ ಸ್ವಂತ ಪೋಲ್‌ ಇರಲಿಲ್ಲ. ತಮ್ಮ ಸ್ನೇಹಿತರಿಂದ ಎರವಲು ಪಡೆದ ಪೋಲ್‌ನಿಂದ ಇಂದು ಸಿಂಧು ಶ್ರೀ ಸಾಧನೆ ಮಾಡಿದ್ದಾರೆ.

ಭುವನೇಶ್ವರದಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಅಂತರ ರಾಜ್ಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಶ್ರೀ ಮಹಿಳಾ ಪೋಲ್‌ ವೋಲ್ಟ್‌ ವಿಭಾಗದಲ್ಲಿ 4.25 ಮೀಟರ್‌ ಎತ್ತರ ಜಿಗಿದು ಬಂಗಾರದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಇವರು ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ರಾಷ್ಟ್ರೀಯ ದಾಖಲೆ

ಸಿಂಧು ಶ್ರೀ ಅವರು ತಮಿಳುನಾಡಿನ ಬಾರಾನಿಕಾ ಇಳಂಗೋವನ್ ಅವರ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಬಾರಾನಿಕಾ 4.23 ಮೀಟರ್‌ ಎತ್ತರ ಜಿಗಿದು ದಾಖಲೆ ನಿರ್ಮಿಸಿದ್ದರು. ಈಗ ಈ ದಾಖಲೆಗೆ ಸಿಂಧು ಶ್ರೀ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದಾರೆ. ಇದೇ ಕೂಟದಲ್ಲಿ ಬಾರಾನಿಕಾ 4.20 ಮೀಟರ್ ಜಿಗಿದು ಬೆಳ್ಳಿ ಪದಕ ಪಡೆದಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ದೊಡ್ಡ ಸಾಧನೆಯನ್ನು ಮಾಡುವ ಕನಸು ಕಾಣುತ್ತಿರುವ ಸಿಂಧು ಶ್ರೀ ಕರ್ನಾಟಕ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಸರ್ಕಾರ ಇವರ ನೆರವಿಗೆ ಬಂದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುವ ಆಸೆ ಹೊಂದಿದ್ದಾರೆ.

Story first published: Thursday, June 25, 2026, 22:38 [IST]
Other articles published on Jun 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+