ಕ್ರೀಡಾಲೋಕದ ಅಪ್ರತಿಮ ಸಾಧಕರು: ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದ ಭಾರತದ ಕ್ರೀಡಾಪಟುಗಳು ಇವರು
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಬಗ್ಗೆ ಬಹುತೇಕರಿಗ ಅರಿವು ಇದ್ದೇ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ದಾಖಲೆ ಮಾಡಿರುವ ಭಾರತೀಯರ ಸಾಧನೆಯನ್ನು ದಾಖಲೆ ರೂಪದಲ್ಲಿ ಪ್ರತಿ ವರ್ಷವೂ ಇದು ಪುಸ್ತಕ ರೂಪದಲ್ಲಿ ಪ್ರಕಟಿಸುವ ಕಾರ್ಯ ನಿರ್ವಹಿಸುತ್ತಿದೆ. 75 ವರ್ಷಗಳ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥವಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ವಿಶೇಷ ಸಂಚಿಕೆಯೊಂದನ್ನು ಓದುಗರಿಗಾಗಿ ಪ್ರಸ್ತುತಪಡಿಸುತ್ತಿದೆ. 'ರುಟ್ಮಾರ್ಕ್' ಆವೃತ್ತಿ ಮೂಲಕ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಹಾಗೂ ಅಪರೂಪದ ಸಾಧನೆ ಮಾಡಿರುವ ಸಾಧಕರ ಪಟ್ಟಿಯಲ್ಲಿ ಕ್ರೀಡಾಲೋಕದ ಸಾಧಕರು ಕೂಡ ಕಾಣಿಸಿಕೊಂಡಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾದ ಸಾಧನೆ ಮಾಡಿರುವ ಅಪರೂಪದ ಸಾಧಕರಿಗೆ ಈ ಮೂಲಕ ಗೌರವ ನೀಡಲಾಗಿದೆ. ಅತಿದೊಡ್ಡ ಮಂಡಲ ಕಲಾಕೃತಿಯನ್ನು ರಚಿಸಿದ ರಾಧಾ ಶಂಕರನಾರಾಯಣನ್ ಅವರಿಂದ ಹಿಡಿದು ಅಥ್ಲೆಟಿಕ್ಸ್‌ನಲ್ಲಿ ಭಾರತದ ಪರವಾಗಿ ಮೊದಲ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾವರೆಗೆ ಸಾಕಷ್ಟು ದಾಖಲೆವೀರರ ಸಾಧನೆಯ ಪಕ್ಷಿನೋಟವನ್ನು ಈ ಪುಸ್ತಕ ನೀಡಿದೆ.
ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಯಾವೆಲ್ಲಾ ಆಟಗಾರರು ಇದರಲ್ಲಿ ಸಾಧನೆ ಮಾಡಿದ್ದಾರೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ. ಮುಂದೆ ಓದಿ.

1. ಭಾರತದ ಯುವ ಶಾರ್ಪ್ ಶೂಟಿಂಗ್ ಚಾಂಪಿಯನ್; ರುದ್ರಾಂಕ್ಷ ಪಾಟೀಲ್
ಭಾರತದ ಶೂಟರ್ ರುದ್ರಾಂಕ್ಷ್ ಪಾಟೀಲ್ ಅಕ್ಟೋಬರ್ 2022ರಲ್ಲಿ ಈಜಿಪ್ಟ್‌ನ ಕೈರೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಏರ್ ರೈಫಲ್‌ನಲ್ಲಿ ವಿಶ್ವ ಚಾಂಪಿಯನ್ ಆದರು. ಮೊದಲ ಅರ್ಹತಾ ಸುತ್ತಿನಲ್ಲಿ 633.9 ಪಾಯಿಂಟ್‍ಗಳೊಂದಿಗೆ ರುದ್ರಾಂಕ್ಷ ಪಾಟೀಲ್ ವಿಶ್ವ ದಾಖಲೆಯನ್ನು ಬರೆದರು. ಅಲ್ಲದೆ 2006ರಲ್ಲಿ ಅಭಿನವ್ ಬಿಂದ್ರಾ ಏರ್ ರೈಫಲ್‌ನಲ್ಲಿ ವಿಶ್ವ ಚಾಂಪಿಯನ್ ಆದ ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.
2. 105 ವರ್ಷದ ವಂಡರ್ ವುಮೆನ್ ರಾಂಬಾಯ್
ಹರ್ಯಾಣದ 105 ವರ್ಷದ ರಾಂಬಾಯ್ ಅಥ್ಲೆಟಿಕ್ಸ್‌ನಲ್ಲಿ ಅತ್ಯಂತ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ರಾಂಬಾಯ್ ಅವರು 100ವರ್ಷಕ್ಕೂ ಅಧಿಕ ವಯಸ್ಸಿನ ವಿಭಾಗದಲ್ಲಿ 100 ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಈ ಸಾಧನೆ ಮಾಡಿದ್ದಾರೆ.
3. ವಯಸ್ಸು ಕೇವಲ ಒಂದು ಸಂಖ್ಯೆ!!
ವಯಸ್ಸು ಕೇವಲ ಒಂದು ಸಂಖ್ಯೆ ಎಂಬ ಮಾತಿಗೆ ಇಲ್ಲಿ ಮತ್ತೊಂದು ಸಾಕ್ಷಿಯಿದೆ. ಜುಲೈ 11, 2022 ರಂದು ನಡೆದ ತೀವ್ರ ಸ್ಪರ್ಧೆಯ ಪ್ರತಿಷ್ಠಿತ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ರನ್ನಿಂಗ್ ರೇಸ್‍ನಲ್ಲಿ ಚಿನ್ನದ ಪದಕವನ್ನು ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಭಗವಾನಿ ದೇವಿ. ಈ ಸಾಧನೆ ಮಾಡಿದಾಗ ಅವರ ವಯಸ್ಸು 94 ವರ್ಷ. ಈ ಸಾಧನೆಯ ಮೂಲಕ ಭಗವಾನಿ ದೇವಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
4. ಥಾಮಸ್ ಕಪ್‌ನಲ್ಲಿ ಚಿನ್ನದ ಸಾಧನೆ
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾಗಿರುವ ಥಾಮಸ್ ಕಪ್-ಪುರುಷರ ತಂಡದ ಚಾಂಪಿಯನ್‌ಶಿಪ್‌ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸುವ ಮೂಲಕ ಭಾರತ ತನ್ನ ಮೊದಲ ಚಿನ್ನವನ್ನು ಕೊರಳಿಗೇರಿಸಿಕೊಂಡಿದೆ. ವರ್ಲ್ಡ್ ಮೆನ್ಸ್ ಟೀಮ್ ಚಾಂಪಿಯನ್‌ಶಿಪ್ ಎಂದು ಕೂಡ ಕರೆಯಲ್ಪಡುವ ಥಾಮಸ್ ಕಪ್ ಬ್ಯಾಡ್ಮಿಂಟನ್‌ನ ಜಾಗತಿಕ ಆಡಳಿತ ಸಂಸ್ಥೆಯಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ನ ಸದಸ್ಯ ರಾಷ್ಟ್ರಗಳನ್ನು ಪ್ರತಿನಿಧಿಸುವ ತಂಡಗಳ ನಡುವಿನ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆಯಾಗಿದೆ. ಈ ಸಾಧನೆ ಮಾಡಿದ ತಂಡದಲ್ಲಿದ್ದ ಆಟಗಾರರೆಂದರೆ ವಿಶ್ವ ಚಾಂಪಿಯನ್‌ಶಿಪ್‌ನ ಪದಕ ವಿಜೇತ ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್ ಮತ್ತು ಪ್ರಸ್ತುತ ವಿಶ್ವದ 8 ನೇ ಶ್ರೇಯಾಂಕದ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿಕಿರೆಡ್ಡಿ.
5. ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮಿಥಾಲಿ ರಾಜ್
ಮಹಿಳಾ ಕ್ರಿಕೆಟ್‌ನ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ 232 ಪಂದ್ಯಗಳಲ್ಲಿ 7,805 ರನ್ ಗಳಿಸುವ ಮೂಲಕ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. 7000 ರನ್‌ಗಳ ಮೈಲಿಗಲ್ಲನ್ನು ದಾಟಿದ ಏಕೈಕ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
6. ಮಿತಿಗಳಿಗೆ ಸವಾಲು ಹಾಕುವುದು: ಒಂದೊಂದೇ ಹೆಜ್ಜೆಯಂತೆ
ರೋಸಿ ಮೀನಾ ಪೌಲ್‍ರಾಜ್ 2022ರಲ್ಲಿ ನಡೆದ 36 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಹಿಳೆಯರ ಪೋಲ್ ವಾಲ್ಟ್‌ನಲ್ಲಿ 4.20 ಮೀಟರ್ ಎತ್ತರವನ್ನು ಜಿಗಿಯುವ ಮೂಲಕ, ವಿಎಸ್ ಸುರೇಖಾ ಅವರ ಎಂಟು ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಅಥ್ಲೆಟಿಕ್ಸ್ ಜಗತ್ತಿನಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದರು. ಪೋಲ್ ವಾಲ್ಟ್ ಎನ್ನುವುದು ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಕ್ಸ್‌ನಲ್ಲಿನ ಒಂದು ಜಂಪಿಂಗ್ ಈವೆಂಟ್ ಆಗಿದ್ದು ಇದರಲ್ಲಿ ಕ್ರೀಡಾಪಟು ಕಂಬವನ್ನು ಬಳಸಿ ಎತ್ತರದ ಬಾರ್‌ನ ಮೇಲಿನಿಂದ ಜಿಗಿಯುತ್ತಾನೆ. ಇನ್ನು ಈ ಸಾಧನೆ ಮಾಡಿದ ಒಂದು ವಾರದ ಅಂತರದಲ್ಲಿ 4.21 ಮೀ ಎತ್ತರ ಸಾಧಿಸುವ ಮೂಲಕ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದಿಗ್ಭ್ರಮೆಗೊಳಿಸಿ ತನ್ನದೇ ದಾಖಲೆಯನ್ನು ಮೀರಿಸಿ ನಿಂತರು ರೋಸಿ ಮೀನಾ ಪೌಲ್‌ರಾಜ್.
7. ಮಿಂಚಿನ ವೇಗದ ರೇಸ್ ವಾಕ್
2022ರಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪುರುಷರ 35 ಕಿಮೀ ಓಟದ ನಡಿಗೆಯನ್ನು ರಾಮ್ ಬಾಬೂ ಅವರು 2.36.34 ಸಮಯದಲ್ಲಿ ಮುಗಿಸುವ ಮೂಲಕ ಹಿಂದಿನ ರಾಷ್ಟ್ರೀಯ ದಾಖಲೆ ಮುರಿದರು. 2.40.16 ಸಮಯದಲ್ಲಿದ್ದ ಈ ಹಿಂದಿನ ದಾಖಲೆಯನ್ನು ಸುಮಾರು ನಾಲ್ಕು ನಿಮಿಷಗಳ ಅಂತರದಿಂದ ಮುರಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications